ಸಿನಿವಾಣಿ

ವಿಜಯವಾಣಿ ಸಿನಿಮಾ ವಿಮರ್ಶೆ: ಮದ್ವೆಗಂಡಿನ ಹಾಡುಪಾಡು

ಬೆಂಗಳೂರು: ‘ಮದುವೆ ಮಾಡ್ರೀ ಸರಿಹೋಗ್ತಾನೆ’ ಎಂಬುದು ತರ್ಲೆ ಹುಡುಗರ ಕುರಿತು ಅವರ ಅಪ್ಪ-ಅಮ್ಮನಿಗೆ ಸಾಮಾನ್ಯವಾಗಿ ಬರುವ ಸಲಹೆ. ಇಂಥ ಒಂದು ಸಲಹೆಯನ್ನೇ ಶೀರ್ಷಿಕೆ ಆಗಿಟ್ಟುಕೊಂಡು, ಒಬ್ಬ ತರ್ಲೆ ಹುಡುಗ ಊರು ಬಿಟ್ಟು ಸರಿಹೋಗಿ, ಊರಿಗೇ ಮರಳುವಂಥ ಕಥೆಯೊಂದನ್ನು ಹೆಣೆದಿದ್ದಾರೆ ನಿರ್ದೇಶಕ ಗೋಪಿ ಕೆರೂರ್.

ಹಳ್ಳಿಯಲ್ಲಿನ ತರ್ಲೆ, ಕಾಮಿಡಿ, ಪ್ರೀತಿ, ಮದರ್ ಸೆಂಟಿಮೆಂಟ್, ಒಂದಷ್ಟು ಫೈಟ್ಸ್, ಮತ್ತಷ್ಟು ಸಾಂಗ್ಸ್ ... ಹೀಗೆ ಸಿನಿಮಾ ಸಂಬಂಧ ಗಾಂಧಿನಗರದ ಸಿದ್ಧಸೂತ್ರಕ್ಕೆ ತಕ್ಕಂತೆ ಚಿತ್ರವಾಗಿಸಿದ್ದಾರೆ ನಿರ್ದೇಶಕರು. ಆದರೆ, ಅಲ್ಲಲ್ಲಿ ಸೂತ್ರ ಸಡಿಲು ಬಿಟ್ಟಿರದಿದ್ದರೆ ಚಿತ್ರಕಥೆ ಹಿಡಿತ ಕಳೆದುಕೊಳ್ಳದೆ ಸರಿಹೋಗಿರುತ್ತಿತ್ತು.

ಕೆರೂರು ಎಂಬ ಹಳ್ಳಿಯಲ್ಲಿ ಅಲ್ಲಿ ಇಲ್ಲಿ ಹಾಡಿಕೊಂಡೇ ಇರುವ ನಾಯಕ. ಹೊಟ್ಟೆಪಾಡಿಗೆ ಹೇಳಿಕೊಳ್ಳುವಂಥ ಕಾಯಕ ಇಲ್ಲದಿದ್ದರೂ ಅವರಿವರ ಜತೆ ಗಲಾಟೆ ಮಾಡಿಕೊಳ್ಳುತ್ತಿರುತ್ತಾನೆ. ಆತನಿಗೆ ಮದುವೆ ಮಾಡಿದರೆ ಸರಿಹೋಗ್ತಾನೆ ಎಂದು ಅವನ ಅಮ್ಮನಿಗೆ ಊರವರೆಲ್ಲ ಹೇಳುವುದರಿಂದ ಚಿಂತೆಗೀಡಾಗುವ ತಾಯಿ, ನಂತರ ಒಂದಷ್ಟು ಹೆಣ್ಣುಗಳನ್ನು ನೋಡಿದರೂ ಓಕೆ ಆಗುವುದಿಲ್ಲ. ಅದೇ ಸಮಯಕ್ಕೆ ಆ ಊರಿಗೆ ಶಿಕ್ಷಕಿ ಆಗಿ ಬರುವ ನಾಯಕಿಯ ಜತೆಗೆ ನಾಯಕನಿಗೆ ಲವ್ ಆಗುತ್ತದೆ. ಆದರೆ, ಪುಂಡ ಹುಡುಗರೊಂದಿಗಿನ ಗಲಾಟೆಯಿಂದ ನಾಯಕ ಊರುಬಿಡುತ್ತಾನೆ. ಹೀಗೆ ಊರುಬಿಟ್ಟು ಬೆಂಗಳೂರಿಗೆ ಬರುವ ನಾಯಕ ಹೇಗೆ ಸರಿಹೋಗ್ತಾನೆ ಎಂಬುದೇ ಕಥಾಹಂದರ.

ನಾಯಕನಾಗಿ ಶಿವಚಂದ್ರ ಕುಮಾರ್ ಹಳ್ಳಿಹುಡುಗನ ಪಾತ್ರಕ್ಕೆ ಸೂಟ್ ಆಗುವಂತಿದ್ದರೂ ಅಭಿನಯದಲ್ಲಿ ಬಹಳಷ್ಟು ಮಾಗಬೇಕಿದೆ. ಗುಳಿಕೆನ್ನೆಯ ನಾಯಕಿ ಆರಾಧ್ಯಾ ಕೂಡ ನಟನೆಯಲ್ಲಿ ಮತ್ತಷ್ಟು ಪಳಗಬೇಕಿದ್ದರೂ ನಾಯಕನಿಗಿಂತ ಸ್ವಲ್ಪ ಹೆಚ್ಚು ಗಮನ ಸೆಳೆಯುತ್ತಾರೆ. ನಾಯಕನ ತಾಯಿಯಾಗಿ ಅರುಣಾ ಬಾಲರಾಜ್ ಅವರದ್ದು ಪಾತ್ರಕ್ಕೆ ತಕ್ಕ ಅಭಿನಯ. ಸಂಗೀತ ನಿರ್ದೇಶಕನ ಪಾತ್ರದಲ್ಲಿ ರಮೇಶ್ ಭಟ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಪಾತ್ರ ಸೃಷ್ಟಿಸುವಲ್ಲಿ ನಿರ್ದೇಶಕರು ಸ್ವಲ್ಪ ಎಡವಿದ್ದಾರೆ. ನಾಯಕನ ಪಾತ್ರವನ್ನು ಸಂಗೀತಪ್ರಧಾನವಾಗಿ ರೂಪಿಸಿದ್ದರೂ ಚಿತ್ರದಲ್ಲಿನ ಒಂದು ಸಾಂಗ್ ಮಾತ್ರ ಮನಸ್ಸಿಗೆ ತಟ್ಟುತ್ತದೆ. ಕೊನೆಗೂ ದೊಡ್ಡ ಗಾಯಕನಾಗಿ ಮರಳುವ ನಾಯಕನಿಗೆ ಪ್ರೀತಿಸಿದವಳು ಸಿಗುತ್ತಾಳಾ, ಮದುವೆ ಆಗುತ್ತದಾ ಎಂಬ ಕುತೂಹಲಕ್ಕೆ ಸಿನಿಮಾನೇ ಉತ್ತರ.

ಚಿತ್ರ: ಮದುವೆ ಮಾಡ್ರೀ ಸರಿಹೋಗ್ತಾನೆ ನಿರ್ದೇಶನ: ಗೋಪಿ ಕೆರೂರ್ ನಿರ್ವಣ: ಶಿವರಾಜ್ ಲಕ್ಷ್ಮಣ್​ರಾವ್ ದೇಸಾಯಿ ಪಾತ್ರವರ್ಗ: ಶಿವಚಂದ್ರ ಕುಮಾರ್, ಆರಾಧ್ಯಾ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದಾರ್, ರಮೇಶ್ ಭಟ್ ಮತ್ತಿತರರು.

ರವಿಕಾಂತ ಕುಂದಾಪುರ