ಬೆಂಗಳೂರು: ‘ಮಾಲ್ಗುಡಿ ಡೇಸ್’ ಶೀರ್ಷಿಕೆಗೇ ಒಂದು ತಾಕತ್ತಿದೆ. ಇಡೀ ಭಾರತೀಯ ಕಿರುತೆರೆ ಇತಿಹಾಸದಲ್ಲಿ ಹೊಸ ಬಗೆಯ ಹೊರಳಿಗೆ ಆ ಧಾರಾವಾಹಿ ನಾಂದಿ ಹಾಡಿತ್ತು. ಆರ್.ಕೆ ನಾರಾಯಣ್ ಕಥೆಗಳಿಗೆ, ಕನ್ನಡಿಗ ಶಂಕರ್ನಾಗ್, ಧಾರಾವಾಹಿ ರೂಪ ನೀಡಿ ಜೀವ ತುಂಬಿದ್ದರು. ಬಾಲ್ಯ ಮತ್ತು ಭಾವನೆಗಳಿಗೆ ನಾಜೂಕು ಸ್ಪರ್ಶ ನೀಡಲಾಗಿತ್ತು. ಈಗ ಅದೇ ಹಾದಿಯನ್ನು ಅಲ್ಪಸ್ವಲ್ಪ ಅನುಸರಿಸಿಕೊಂಡು ‘ಮಾಲ್ಗುಡಿ ಡೇಸ್’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಕಿಶೋರ್ ಮೂಡುಬಿದ್ರಿ.
ಹೊಸ ‘..ಡೇಸ್’ನಲ್ಲೂ ಬಾಲ್ಯ ಇದೆ. ಅದರೊಳಗಿನ ತುಂಟತನ, ಚಡಪಡಿಕೆ, ಮೊದಲ ಪ್ರೀತಿಯ ಕಂಪನವೂ ಅಡಕವಾಗಿವೆ. ಆದರೆ, ಆ ಪಯಣದ ಹಾದಿ ಸರಾಗಕ್ಕಿಂತ ಕ್ಲಿಷ್ಟ ಎನಿಸುತ್ತದೆ. ಬೇಗ ಮುಗಿಯಬೇಕಾದ ಹುಡುಕಾಟದ ದಾರಿಯಲ್ಲಿ ಉಬ್ಬುಗಳೇ ಹೆಚ್ಚಿರುವುದು ವಿಪರ್ಯಾಸ! ಲಕ್ಷ್ಮೀ ನಾರಾಯಣ ಮಾಲ್ಗುಡಿ (ವಿಜಯ್ ರಾಘವೇಂದ್ರ) ಓರ್ವ ಹಿರಿಯ ಸಾಹಿತಿ. ದಿಢೀರ್ ಅಂತ ಬರವಣಿಗೆಗೆ ನಿವೃತ್ತಿ ಘೋಷಿಸುತ್ತಾರೆ. ಪತ್ನಿಯ ಸಾವೂ ಅವರನ್ನು ಕಾಡುತ್ತದೆ. ಮಗಳೊಂದಿಗೆ ವಿದೇಶಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಬಾಲ್ಯದ ಗೆಳತಿ ಲಿನೇಟಾಳನ್ನು ನೋಡುವ ತವಕದಲ್ಲಿ ಮನೆತೊರೆದು ಹುಟ್ಟೂರು ಮಾಲ್ಗುಡಿಯತ್ತ ಪಯಣ ಆರಂಭಿಸುತ್ತಾರೆ. ಇತ್ತ ಆಫೀಸ್ ಬಾಸ್ ಕಿರುಕುಳ ತಾಳಲಾರದೆ, ಐಟಿ ಕೆಲಸಕ್ಕೆ ಗುಡ್ಬೈ ಹೇಳಿದ ಪ್ರಕೃತಿ (ಗ್ರೀಷ್ಮಾ) ಅನಿರೀಕ್ಷಿತವಾಗಿ ಲಕ್ಷ್ಮೀ ನಾರಾಯಣನಿಗೆ ಎದುರಾಗುತ್ತಾಳೆ. ಪ್ರೇಮ ವೈಫಲ್ಯವೂ ಅವಳನ್ನು ಕಾಡುತ್ತಿರುತ್ತದೆ. ಹೀಗೆ ಎರಡು ಬಗೆಯ ವಯೋಮಾನದ ಜರ್ನಿ ಅಲ್ಲಿಂದ ಆರಂಭವಾಗುತ್ತದೆ. ಇಬ್ಬರ ಫ್ಲ್ಯಾಶ್ಬ್ಯಾಕ್ಗಳ ಕದ ತೆರೆಯುತ್ತದೆ. ಹಾದಿ ಸಾಗಿದಂತೆ ಕಥೆಗಳ ಸುರುಳಿ ಬಿಚ್ಚಿಕೊಳ್ಳುತ್ತವೆ.
ಕೊನೆಗೆ ಆಕೆಗೆ ತನ್ನ ಪ್ರಿಯಕರ ಸಿಗುತ್ತಾನಾ? ಲಕ್ಷ್ಮೀ ನಾರಾಯಣನಿಗೆ ಬಾಲ್ಯದ ಗೆಳತಿಯ ದರ್ಶನ ಆಗುತ್ತದಾ ಎಂಬುದೇ ಸಿನಿಮಾದ ಅಸಲಿ ಕಥೆ. ನಿರ್ದೇಶಕ ಕಿಶೋರ್ ಚಿತ್ರದ ಪ್ರತಿ ದೃಶ್ಯಗಳನ್ನು ಹೆಚ್ಚು ಆಪ್ತವಾಗಿಸುವ ನಿಟ್ಟಿನಲ್ಲಿ, ಭಾವುಕತೆಗೆ ಹೆಚ್ಚಿನ ಸ್ಥಳಾವಕಾಶ ನೀಡಿದ್ದಾರೆ. ಜೀವನೋತ್ಸಾಹದ ಬಗೆಗಿನ ಸಂಭಾಷಣೆಗಳನ್ನು ಕಥಾನಾಯಕನ ಬಾಯಿಂದ ಹೊರಡಿಸಿದ್ದಾರೆ. 75 ವರ್ಷದ ವೃದ್ಧನಾಗಿ, 16 ವರ್ಷದ ತರಲೆ ಬಾಲಕನಾಗಿಯೂ ಪ್ರತಿ ದೃಶ್ಯಗಳಲ್ಲಿ ವಿಜಯರಾಘವೇಂದ್ರ ಜೀವಿಸಿದ್ದಾರೆ. ಗ್ರೀಷ್ಮಾ ಶ್ರೀಧರ್, ಅರ್ಜುನ್ ಕಾಪಿಕಾಡ್ ಕೊಟ್ಟ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಾಲ್ಯದ ಜೀವನ, ಹಳ್ಳಿಗಾಡಿನ ಬದುಕು, ಆಧುನಿಕ ಕಾಲಘಟ್ಟದ ಹೊಸ ಪೀಳಿಗೆ ಹೀಗೆ ಎಲ್ಲವನ್ನೂ
ಗಮನದಲ್ಲಿಟ್ಟುಕೊಂಡು, ಎಲ್ಲ ಆಯಾಮಗಳಿಂದಲೂ ನ್ಯಾಯ ದಕ್ಕಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಕಿಶೋರ್. ಆದರೆ, ಸಿನಿಮಾದಲ್ಲಿ ಅದು ಎಲ್ಲ ಕಡೆಗಳಲ್ಲಿ ಸಂದಿಲ್ಲ ಎಂಬುದು ಬೇಸರದ ಸಂಗತಿ. ಬಾಲ್ಯದ ಗೆಳತಿ ಲಿನೇಟಾಳನ್ನು ಹುಡುಕಾಡುವ ಪ್ರಹಸನ ನಿಜಕ್ಕೂ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ. ಆ ಭಾಗದ ಎಳಿತವನ್ನು ಕೊಂಚ ಕಡಿತ ಮಾಡಿದ್ದರೆ, ಸಿನಿಮಾ ಮತ್ತಷ್ಟು ಟ್ರಿಮ್ ಆಗುತ್ತಿತ್ತು. ಇನ್ನುಳಿದಂತೆ ಉದಯ್ ಲೀಲಾ ಕ್ಯಾಮರಾ, ಗಗನ್ ಖಡೇರಿಯಾ ಸಂಗೀತ ಚಿತ್ರಕಥೆಗೆ ಪೂರಕವಾಗಿವೆ.