ಸಿನಿವಾಣಿ

ನಕಲಿ ನೋಟುಗಳ ಹಿಂದೆ ಅಸಲಿ ಓಟ!: ವಿಜಯವಾಣಿ ಸಿನಿಮಾ ವಿಮರ್ಶೆ

  • ಚಿತ್ರ: ಚಾಂಪಿಯನ್
  • ನಿರ್ದೇಶನ: ಸಾಹುರಾಜ್ ಶಿಂಧೆ
  • ನಿರ್ಮಾಣ: ಶಿವಾನಂದ ನೀಲಣ್ಣವರ್
  • ತಾರಾಗಣ: ಸಚಿನ್ ಧನರಾಜ್ ಪಾಟೀಲ್, ಅದಿತಿ ಪ್ರಭುದೇವ, ಅವಿನಾಶ್, ದೇವರಾಜ್, ಚಿಕ್ಕಣ್ಣ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆದಿ ಲೋಕೇಶ್, ಸುಮಂತ್, ರಂಗಾಯಣ ರಘು, ಸನ್ನಿ ಲಯೋನ್, ಶೋಭರಾಜ್, ಕಾಕ್​ರೋಚ್ ಸುಧಿ ಮತ್ತು ಮುಂತಾದವರು.

| ಎಸ್​ಆರ್​ಎಚ್ ಬೆಂಗಳೂರು

ಆತ ಸಿದ್ದಾಂತ್ (ಸಚಿನ್). ಹುಟ್ಟಿನಿಂದಲೇ ತ್ರೊಂಬಸ್ತೀನಿಯಾ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಆ ಖಾಯಿಲೆ ಇದ್ದವರಿಗೆ ಸಣ್ಣ ಗಾಯವಾದರೂ ತಕ್ಷಣ ಚಿಕಿತ್ಸೆ ನೀಡದಿದ್ದರೆ ಬಹುಬೇಗನೇ ರಕ್ತಹೀನತೆಯಿಂದ ಸಾವನ್ನಪು್ಪವ ಆತಂಕವಿರುತ್ತದೆ. ಆದರೆ, ಸಚಿನ್​ಗೆ ಕ್ರೀಡಾಪಟುವಾಗುವಾಸೆ. ಆ ಆಸೆಗೆ ಬೆಂಬಲವಾಗಿ ಆತನ ತಂದೆ ಶಂಕರೇಗೌಡ (ಅವಿನಾಶ್) ನಿಲ್ಲುತ್ತಾರೆ. ಅದಕ್ಕೆ ತಕ್ಕಂತೆ ಸಚಿನ್ ಕೂಡ ಸಣ್ಣ ವಯಸ್ಸಿನಿಂದ ಕ್ರೀಡೆಯಲ್ಲಿ ಸಾಧನೆ ಮಾಡತೊಡಗುತ್ತಾನೆ. 96 ಪ್ರಶಸ್ತಿಗಳನ್ನು ಗೆಲ್ಲುತ್ತಾನೆ.

ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಆತ, ಅದರಲ್ಲಿ ಭಾಗವಹಿಸಲು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾನೆ. ಅಷ್ಟರಲ್ಲಾಗಲೇ ಫೋನ್ ಮೂಲಕ ಆತನಿಗೆ ಸಾರಿಕಾ (ಅದಿತಿ) ಪರಿಚಯವಾಗಿರುತ್ತಾಳೆ. ಬೆಂಗಳೂರಿನಲ್ಲಿ ಆಕೆಯನ್ನು ಭೇಟಿಯಾಗುವ ಸಮಯದಲ್ಲಿ ನಡೆಯುವ ಒಂದು ಘಟನೆಯಿಂದ ಖೋಟಾನೋಟಿನ ಜಾಲದ ಕೆಂಗಣ್ಣಿಗೆ ಗುರಿಯಾಗುತ್ತಾನೆ. ತ್ರೊಂಬಸ್ತೀನಿಯಾ ಪೀಡಿತ ಸಚಿನ್ ಅತ್ತ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಬೇಕು, ಇತ್ತ ಪ್ರೀತಿಯನ್ನೂ ಗೆಲ್ಲಬೇಕು, ಅದರ ನಡುವೆ ಖೋಟಾನೋಟು ಮಾಫಿಯಾದವರನ್ನೂ ಸದೆಬಡಿಯಬೇಕು, ಇದೆಲ್ಲದರ ಮಧ್ಯೆ ಮೈಗೆ ಸಣ್ಣ ಗಾಯವನ್ನೂ ಮಾಡಿಕೊಳ್ಳುವಂತಿಲ್ಲ. ಯಾವುದನ್ನು ಗೆದ್ದು ಚಾಂಪಿಯನ್ ಆಗುತ್ತಾನೆ? ಕುತೂಹಲವಿದ್ದವರು ಸಿನಿಮಾ ನೋಡಿ...

‘ಚಾಂಪಿಯನ್’ ಎರಡು ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಚಿತ್ರ. ಆದರೆ ಕರೋನಾ ಲಾಕ್​ಡೌನ್ ಮತ್ತು ನಿರ್ದೇಶಕ ಸಾಹುರಾಜ್ ಶಿಂಧೆ ಅವರ ಅಕಾಲಿಕ ಮರಣದಿಂದಾಗಿ ತಡವಾಗಿದೆ. ಈ ಗ್ಯಾಪ್​ನಲ್ಲಿ ಹಲವು ಬೆಂಚ್​ವಾರ್ಕ್ ಚಿತ್ರಗಳು ಬಂದುಹೋಗಿವೆ. ಬೇರೆ ಚಿತ್ರಗಳಿಗೆ ಹೋಲಿಕೆ ಮಾಡದಿದ್ದರೂ ಪ್ರೇಕ್ಷಕ ಅಪ್​ಡೇಟ್ ಆಗಿರುವ ಕಾರಣ ಅಲ್ಲಲ್ಲಿ ಲಾಜಿಕ್ ಇಲ್ಲದ ಮ್ಯಾಜಿಕ್ ಸೀನ್​ಗಳು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತವೆ. ಹಾಡುಗಳಲ್ಲಿ ‘ಡಿಂಗರ್ ಬಿಲ್ಲಿ’ ನೋಡುವಂತಿದೆ ಮತ್ತು ‘ಚಾಂಪಿಯನ್’ ಟೈಟಲ್ ಟ್ರಾ್ಯಕ್ ಕೇಳುವಂತಿದೆ. ಉಳಿದವು ನೆನಪಿನಲ್ಲುಳಿಯುವುದಿಲ್ಲ. ಫೈಟ್​ಗಳಲ್ಲಿ ನಾಯಕ ಸಚಿನ್ ಗಮನ ಸೆಳೆಯುತ್ತಾರೆ.

ಆದರೆ, ಅವರಿಗೆ ನೀಡಿರುವ ಬಿಲ್ಡಪ್​ನಲ್ಲಿ ಹತ್ತು ನಿಮಿಷ ಕತ್ತರಿ ಹಾಕಿದರೆ ಚಿತ್ರಕ್ಕೆ ಮತ್ತಷ್ಟು ವೇಗ ಸಿಗುತ್ತದೆ. ನಾಯಕ ನಟ ಸಚಿನ್ ಧನರಾಜ್ ಪಾಟೀಲ್ ಅವರಿಗಿದು ಮೊದಲ ಚಿತ್ರ. ಡಾನ್ಸ್, ಫೈಟ್ಸ್, ಸಿಕ್ಸ್ ಪ್ಯಾಕ್ ಅಂತ ಸಾಕಷ್ಟು ತಯ್ಯಾರಿ ನಡೆಸಿಕೊಂಡೇ ಎಂಟ್ರಿ ಕೊಟ್ಟಿದ್ದಾರೆ. ನಟನೆಯತ್ತ ಮತ್ತಷ್ಟು ಗಮನ ಹರಿಸಿದರೆ ಭವಿಷ್ಯವಿದೆ. ಅದಿತಿ ಪ್ರಭುದೇವ ಬಗ್ಗೆ ಹೇಳುವಂತದ್ದೇನಿಲ್ಲ. ಚಿಕ್ಕಣ್ಣ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ ಅಲ್ಲಲ್ಲಿ ನಗಿಸುತ್ತಾರೆ. ಅವಿನಾಶ್, ದೇವರಾಜ್, ಸುಮಂತ್, ರಂಗಾಯಣ ರಘು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸನ್ನಿ ಲಿಯೋನ್ ‘ಡಿಂಗರ್ ಬಿಲ್ಲಿ’ ಹಾಡಿಗಷ್ಟೇ ಸೀಮಿತ.