ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ಬುಲೆಟ್ ಪ್ರಕಾಶ್ ನಿಧನರಾಗಿ ಎರಡು ವರ್ಷಗಳಾಗಿವೆ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಅನಾರೋಗ್ಯದಿಂದ ಅವರು ನಿಧನರಾಗಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿತ್ತು. ಈಗ ಅವರನ್ನು 'ತೋತಾಪುರಿ' ಖ್ಯಾತಿಯ ನಿರ್ದೇಶಕ ನೆನಪಿಸಿಕೊಂಡಿರುವುದಷ್ಟೇ ಅಲ್ಲ, ಅವರಿಗೆ ಭಾವುಕ ಪತ್ರವನ್ನೂ ಬರೆದಿದ್ದಾರೆ.
ಇದನ್ನೂ ಓದಿ: ನಿಶ್ಚಿತಾರ್ಥದ ವೇಳೆ ಧರಿಸಿದ್ದ ಡ್ರೆಸ್ನಿಂದ ಮತ್ತೆ ಟ್ರೋಲ್ ಆದ ಆಮೀರ್ ಪುತ್ರಿ! ಬಿಕಿನಿ ಬರ್ತಡೇ ನೆನಪಿಸಿದ ನೆಟ್ಟಿಗರು
ವಿಜಯಪ್ರಸಾದ್ಗೆ ಯಾಕೆ ಇದ್ದಕ್ಕಿದ್ದಂತೆ ಬುಲೆಟ್ ಪ್ರಕಾಶ್ ಅವರ ನೆನಪಾಯಿತು ಎಂಬ ಪ್ರಶ್ನೆ ಸಹಜ. ಅದಕ್ಕೆ ಕಾರಣವೂ ಇದೆ. ವಿಜಯಪ್ರಸಾದ್ ಸದ್ಯ 'ಪರಿಮಳ ಲಾಡ್ಜ್' ಚಿತ್ರದ ಸ್ಕ್ರಿಪ್ಟ್ ಬರೆಯುತ್ತಾ ಕೂತಿದ್ದಾರೆ. ಈ ಚಿತ್ರದಲ್ಲಿ ಬುಲೆಟ್ ಪ್ರಕಾಶ್ ಸಹ ನಟಿಸಬೇಕಿತ್ತು. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ನಲ್ಲಿ ಬುಲೆಟ್ ಪ್ರಕಾಶ್ ಕಾಣಿಸಿಕೊಂಡಿದ್ದರು. ಈಗ ಅವರು ಚಿತ್ರದಲ್ಲಿ ಇರುವುದಿಲ್ಲ. ಅವರ ಜತೆಗೆ ಕೆಲಸ ಮಡಬೇಕಂಬ ಹಂಬಲ ಟೀಸರ್ಗಷ್ಟೇ ಸೀಮಿತವಾಯಿತು ಎಂಬ ಬೇಸರದಿಂದ ಈ ಪತ್ರವನ್ನು ವಿಜಯಪ್ರಸಾದ್ ಬರೆದಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪತ್ರ ಹಂಚಿಕೊಂಡಿರುವ ಅವರು, 'ಯಾರಿಗೇ ಪತ್ರ ಬರೆದರೂ ಅಥವಾ ಸಿಕ್ಕರೂ ಮೊದಲಿಗೆ ಹೇಗಿದ್ದೀರಿ, ಕ್ಷೇಮವೇ ಎಂದು ಕೇಳುವುದು ವಾಡಿಕೆ. ಈಗಲೂ ನೀವು ನಮ್ಮೆಲ್ಲರ ಮನಸಿನಲ್ಲೇ ಇರುವುದರಿಂದ ಮತ್ತೆ ಮೇಲಿನ ಪ್ರಶ್ನೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ, ಜೊತೆಗೆ ಸೌಖ್ಯವಾಗೂ ಇದ್ದೀರೆಂದು ನಂಬಿದ್ದೇನೆ. ನೀವು ನನಗೆ ಆಗಾಗ ನೆನಪಾಗುತ್ತಿರಿ. ಹಾಗೆ ನೆನಪಾದಾಗಲೆಲ್ಲಾ ನಿಮ್ಮ ಕಾಮಿಡಿ ದೃಶ್ಯದ ತುಣುಕುಗಳನ್ನ ನೋಡಿ ಮೌನವಾಗಿ ಬಿಡುತ್ತೇನೆ. 'ಗೆಳೆಯ' ಚಿತ್ರದಲ್ಲಿ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋದಿರಿ. ನಿಮ್ಮೊಳಗಿನ ಹಾಸ್ಯ ಸಮಯದ ಪ್ರಜ್ಞೆ ಅಮೋಘ. ನಿಮ್ಮ ಜೊತೆ ಕೆಲಸ ಮಾಡಬೇಕೆಂಬ ನನ್ನ ಹಂಬಲ ಮತ್ತು ಆಸೆ ಕೇವಲ ಟ್ರೇಲರ್ಗೇ ಸೀಮಿತವಾಗಿ ಹೋಗಿದ್ದು ತುಂಬಾ ನೋವಿನ ವಿಚಾರ' ಎಂದು ವಿಜಯಪ್ರಸಾದ್ ಬರೆದುಕೊಂಡಿದ್ದಾರೆ.
'ತೋತಾಪುರಿ' ಸೋಲಿನ ನಂತರ ವಿಜಯಪ್ರಸಾದ್ ಈಗ 'ಪರಿಮಳ ಲಾಡ್ಜ್' ಚಿತ್ರ ಮಾಡುವ ಪ್ರಯತ್ನದಲ್ಲಿದ್ದಾರೆ. ಯೋಗಿ ಅಭಿನಯಿಸುತ್ತಿರುವ ಈ ಚಿತ್ರವು ಕೆಲವು ವರ್ಷಗಳ ಹಿಂದೆಯೇ ಘೋಷಣೆಯಾಗಿತ್ತು ಮತ್ತು ಟೀಸರ್ ಸಹ ಬಿಡುಗಡೆಯಾಗಿತ್ತು. ಈಗ ಚಿತ್ರದ ಕೆಲಸಗಳು ಪ್ರಾರಂಭವಾಗಿದ್ದು, ಸದ್ಯದಲ್ಲೇ ಚಿತ್ರ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.