ಬೆಂಗಳೂರು: ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಾರಿ ಡಾ. ಆನಂದ ಸಂಕೇಶ್ವರ ಅವರು ನಿರ್ಮಾಪಕರಾಗಿ ಭಾಗವಹಿಸಿದ್ದರು. ಅವರು ನಿರ್ವಿುಸಿರುವ ಪದ್ಮಶ್ರೀ ಡಾ. ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ ‘ವಿಜಯಾನಂದ’ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಸೈಮಾ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಪ್ರಸ್ತುತ ಪಡಿಸಲು ವೇದಿಕೆ ನೀಡಲಾಗಿತ್ತು.
ಈ ಬಗ್ಗೆ ಮಾತನಾಡಿದ ಡಾ. ಆನಂದ ಸಂಕೇಶ್ವರ, ‘ಕಳೆದ 10 ವರ್ಷಗಳಿಂದ ಸೈಮಾ ಪ್ರಶಸ್ತಿ ಆಯೋಜಿಸುತ್ತಿದ್ದಾರೆ. ಮೊದಲು ಹೈದರಾಬಾದ್ನಲ್ಲಿ ಪ್ರಾರಂಭವಾಗಿದ್ದು. ಕೆಲವು ವರ್ಷಗಳ ಹಿಂದೆ ಸಿಂಗಪೂರ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗಿದ್ದೆ. ತುಂಬ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುತ್ತಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ‘ವಿಜಯಾನಂದ’ ಚಿತ್ರದ ನಿರ್ದೇಶಕಿ ರಿಷಿಕಾ ಶರ್ವ, ‘ಸೈಮಾ ಬೆಂಗಳೂರಿನಲ್ಲಿ ನಡೆಯುತ್ತಿರುವುದು ನಮ್ಮ ಹೆಮ್ಮೆ. ಅಪ್ಪು ಸರ್ ಇದ್ದಿದ್ದರೆ ಇನ್ನೂ ಖುಷಿಯಾಗುತ್ತಿತ್ತು. ನಮ್ಮ ‘ವಿಜಯಾನಂದ’ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ನಮ್ಮ ಚಿತ್ರದ ಟೀಸರ್ಅನ್ನು ಪ್ರೆಸೆಂಟ್ ಮಾಡಲು ಸೈಮಾಗೆ ಬಂದಿದ್ದೇವೆ’ ಎಂದರು.
ಹಾಗೆಯೇ ಚಿತ್ರದ ನಾಯಕ ನಟ ನಿಹಾಲ್ ಮಾತನಾಡಿ, ‘ಮೊದಲ ಬಾರಿ ಸೈಮಾ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಖುಷಿ ನೀಡಿದೆ. ನಮ್ಮ ‘ವಿಜಯಾನಂದ’ ಚಿತ್ರವನ್ನು ಗುರುತಿಸಿ ಸೈಮಾ ನಮಗೆ ಇಲ್ಲಿ ವೇದಿಕೆ ನೀಡಿದೆ’ ಎಂದರು.