ಸಿನಿವಾಣಿ

ಇಂದಿನಿಂದ ವಿಜಯಾನಂದ ಹಬ್ಬ; ವಿಶ್ವಾದ್ಯಂತ 1300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಬಿಡುಗಡೆ

‘ವಿಜಯಾನಂದ’ ಚಿತ್ರ, ತಾರಾಗಣದಿಂದಲೇ ಜನರಲ್ಲಿ ಕುತೂಹಲ ಮೂಡಿಸಿತ್ತು. ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ರಜಪೂತ್, ಪತ್ನಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಅವರ ತಂದೆ ಬಿ.ಜಿ. ಸಂಕೇಶ್ವರ ಪಾತ್ರದಲ್ಲಿ ಅನಂತ್ ನಾಗ್, ತಾಯಿ ಚಂದ್ರಮ್ಮ ಪಾತ್ರದಲ್ಲಿ ವಿನಯಾ ಪ್ರಸಾದ್, ಪುತ್ರ ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ, ಸೊಸೆ ವಾಣಿ ಸಂಕೇಶ್ವರ ಪಾತ್ರದಲ್ಲಿ ಅರ್ಚನಾ ಕೊಟ್ಟಿಗೆ ನಟಿಸಿದ್ದು, ಅವರ ಗುರುಗಳಾದ ಗಣೇಶ್ ದಾದಾ ಆಗಿ ನಟ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಜತೆಗೆ ಪ್ರಕಾಶ್ ಬೆಳವಾಡಿ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ರಮೇಶ್ ಭಟ್ ಪ್ರಮುಖ ತಾರಾಗಣದಲ್ಲಿದ್ದಾರೆ. ಹೀಗೆ ಚಿತ್ರದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಮತ್ತು ಹೊಸ ಪ್ರತಿಭೆಗಳ ಸಮ್ಮಿಲನವಾಗಿದೆ.

ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರ ‘ವಿಜಯಾನಂದ’. ಕನ್ನಡಿಗರೇ ನಿರ್ವಿುಸಿರುವ ಕನ್ನಡದ ಸಾಧಕನ ಕುರಿತ ಮಟ್ಟ ಮೊದಲ ಬಯೋಪಿಕ್ ಎಂಬ ಹೆಗ್ಗಳಿಕೆ ಪಡೆದಿರುವ ಬಹುನಿರೀಕ್ಷಿತ ಸಿನಿಮಾ. ಇಂತಹ ‘ವಿಜಯಾನಂದ’ ಪ್ರಾರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಚಿತ್ರದ ಟೀಸರ್, ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೇಲರ್ ಕೂಡ ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ವ್ಯೂಸ್ ಪಡೆದು, ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 1300ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ‘ವಿಜಯಾನಂದ’ ಬಿಡುಗಡೆಯಾಗುತ್ತಿದೆ.

ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ವಿಆರ್​ಎಲ್

ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ನಿರ್ವಿುಸಿರುವ ‘ವಿಜಯಾನಂದ’ ಚಿತ್ರಕ್ಕೆ ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ. ಈಗಾಗಲೇ ಚಿತ್ರತಂಡ ದೆಹಲಿ, ಮುಂಬೈ, ಅಹ್ಮದಾಬಾದ್, ಲಖನೌ, ಇಂದೋರ್, ಚೆನ್ನೈ, ಕೊಚ್ಚಿ, ಹೈದರಾಬಾದ್ ಸೇರಿದಂತೆ ಹಲವೆಡೆ ಪ್ರಚಾರ ಮಾಡಿದ್ದು, ದೇಶದ ಮೂಲೆಮೂಲೆಗಳಿಗೂ 32 ಟ್ಯಾಬ್ಲೋಗಳು ಸಂಚರಿಸುತ್ತಿವೆ. ಹೀಗೆ ಹತ್ತು ಹಲವು ರೀತಿಗಳಲ್ಲಿ ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ವಿಶೇಷ, ವಿಭಿನ್ನ, ವಿಜಯಾನಂದ

1976ರಲ್ಲಿ ಕೇವಲ ಒಂದು ಟ್ರಕ್​ನಿಂದ ಆರಂಭವಾಗಿ 5,500ಕ್ಕೂ ಹೆಚ್ಚು ವಾಹನಗಳ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ವಿಆರ್​ಎಲ್ ಸಂಸ್ಥೆಯನ್ನು ಡಾ. ವಿಜಯ ಸಂಕೇಶ್ವರ ಹೇಗೆ ಕಟ್ಟಿದರು? ಅವರ ಜೀವನದಲ್ಲಿ ನಡೆದ ಹೋರಾಟಗಳೇನು? ಎದುರಿಸಿದ ಸವಾಲುಗಳೇನು? ಬೆನ್ನು ತಟ್ಟಿ ಮುನ್ನುಗ್ಗಲು ಸಹಾಯ ಮಾಡಿದವರ್ಯಾರು? ಹಿಂದೆ ತಳ್ಳಿ ಸೋಲಿಸಲು ಪ್ರಯತ್ನಿಸಿದವರ್ಯಾರು? ಸಂಸ್ಥೆ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೂ ಹೇಗೆ? ಒಬ್ಬ ಸಾಮಾನ್ಯ ಮನುಷ್ಯ ಈ ಅಸಾಮಾನ್ಯ ಸಾಧನೆ ಮಾಡಿದ್ದು ಹೇಗೆ? ಪತ್ನಿಯ ಸಹಕಾರ, 16ನೇ ವಯಸ್ಸಿಗೇ ಅಪ್ಪನ ಜತೆ ಉದ್ಯಮಕ್ಕೆ ಬಂದ ಮಗನ ಬೆಂಬಲ, ಅವರ ಕೌಟುಂಬಿಕ ಮೌಲ್ಯಗಳು... ಹೀಗೆ ‘ವಿಜಯಾನಂದ’ ಕೇವಲ ಒಬ್ಬ ಉದ್ಯಮಿಯ ಯಶೋಗಾಥೆ ಮಾತ್ರವಲ್ಲದೇ ಅಪ್ಪ, ಮಗನ ಬಾಂಧವ್ಯದ ಕಥೆಯೂ ಆಗಿದೆ. ಚಿತ್ರ ಶೇಕಡಾ 99ರಷ್ಟು ನೈಜ ಘಟನೆಗಳಿಂದ ಕೂಡಿದ ಕಥೆ ಎಂದು ಈ ಹಿಂದೆ ಖುದ್ದು ಡಾ. ವಿಜಯ ಸಂಕೇಶ್ವರ ಅವರೇ ಹೇಳಿದ್ದರು. ಹೀಗಾಗಿಯೇ ಆಯಾ ಕಾಲಘಟ್ಟಗಳಲ್ಲಿಯೇ ಸಿನಿಮಾ ಚಿತ್ರೀಕರಿಸಲಾಗಿದ್ದು, 70, 80, 90ರ ದಶಕಗಳನ್ನು ಮತ್ತೆ ಕಣ್ತುಂಬಿಕೊಳ್ಳಬಹುದು. ಜತೆಗೆ ಏನಾದರೂ ಸಾಧಿಸಬೇಕು ಎಂದು ಕನಸು ಕಾಣುವವರು, ಏನು ಮಾಡಬೇಕು ಅಂತ ತಿಳಿಯದೇ ಗೊಂದಲದಲ್ಲಿರುವವರು... ಹೀಗೆ ಪ್ರತಿಯೊಬ್ಬರಿಗೂ ಈ ಸಿನಿಮಾ ಹೊಸ ಪ್ರೇರೇಪಣೆ ನೀಡಲಿದೆ. ಇಂತಹ ಹಲವು ವಿಶೇಷತೆಗಳಿಂದ ಕೂಡಿರುವ ‘ವಿಜಯಾನಂದ’ ಚಿತ್ರಕ್ಕೆ ಸೆನ್ಸಾರ್ ಬೋರ್ಡ್​ನಿಂದ ‘ಯು’ ಸರ್ಟಿಫಿಕೇಟ್ ದೊರೆತಿದೆ.

ನಿಹಾಲ್ ರಜಪೂತ್

ಈ ಹಿಂದೆ ‘ಟ್ರಂಕ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿಹಾಲ್, ‘ವಿಜಯಾನಂದ’ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. 1976ರಿಂದ 2015ರವರೆಗೆ ನಡೆಯುವ ಕಥೆಯಾದ್ದರಿಂದ ಅವರು ಆಯಾ ಕಾಲಮಾನಕ್ಕೆ ತಕ್ಕಂತೆ ಮೂರು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿರಿ ಪ್ರಹ್ಲಾದ್

‘ಒಂದು ಶಿಕಾರಿಯ ಕಥೆ’, ‘ಲಾ’, ‘ಬಡ್ಡೀಸ್’ ಚಿತ್ರಗಳಲ್ಲಿ ನಟಿಸಿರುವ ಸಿರಿ ಪ್ರಹ್ಲಾದ್ ಅವರಿಗೆ ‘ವಿಜಯಾನಂದ’ ನಾಲ್ಕನೇ ಚಿತ್ರ. ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಕೂಡ. ಅವರು ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ತಮ್ಮ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೆಮ್ಮೆ ಯಿಂದ ಹೇಳಿಕೊಂಡಿದ್ದರು ಸಿರಿ.

ಅನಂತ್ ನಾಗ್

ಡಾ. ವಿಜಯ ಸಂಕೇಶ್ವರ ಅವರಿಗೆ ಅನಂತ್ ನಾಗ್, ಅವರ ತಂದೆಯ ಪಾತ್ರದಲ್ಲಿ ನಟಿಸಬೇಕೆಂಬ ಅಭಿಲಾಷೆಯಿತ್ತಂತೆ. ಅವರ ಆಸೆಯಂತೆ ‘ವಿಜಯಾನಂದ’ ಚಿತ್ರದಲ್ಲಿ ಅನಂತ್ ನಾಗ್ ಬಿ.ಜಿ. ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ.

ವಿನಯಾ ಪ್ರಸಾದ್

ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿದ್ದರೂ, ಬೇರೆ ಬೇರೆ ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ವಿನಯಾ ಪ್ರಸಾದ್ ಇದುವರೆಗೂ ಬಯೋಪಿಕ್​ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರು ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ತಾಯಿ ಚಂದ್ರಮ್ಮನವರ ಪಾತ್ರದಲ್ಲಿ ನಟಿಸಿದ್ದಾರೆ.

ಭರತ್ ಬೋಪಣ್ಣ

ಯುವನಟ ಭರತ್ ಬೋಪಣ್ಣ ಅವರಿಗೆ ‘ವಿಜಯಾನಂದ’ ಎರಡನೇ ಚಿತ್ರ. ಕರಿಯರ್ ಪ್ರಾರಂಭದಲ್ಲೇ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಖುಷಿ ಅವರದು. ಅವರಿಲ್ಲಿ ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ.

ಅರ್ಚನಾ ಕೊಟ್ಟಿಗೆ

‘ಡಿಯರ್ ಸತ್ಯ’, ‘ಕಟ್ಟಿಂಗ್ ಶಾಪ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ನಟಿ ಅರ್ಚನಾ ಕೊಟ್ಟಿಗೆ ‘ವಿಜಯಾನಂದ’ ಚಿತ್ರದಲ್ಲಿ ಡಾ. ಆನಂದ ಸಂಕೇಶ್ವರ ಪತ್ನಿ ಶ್ರೀಮತಿ ವಾಣಿ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ.

ರವಿಚಂದ್ರನ್

ನಟ ರವಿಚಂದ್ರನ್ ಇದುವರೆಗೂ ಬಯೋಪಿಕ್​ಗಳಲ್ಲಿ ನಟಿಸಿಲ್ಲ. ‘ವಿಜಯಾನಂದ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪ್ಯಾನ್ ಇಂಡಿಯಾ ನೈಜ ಘಟನೆಯಾಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭದಲ್ಲಿ ಮಾರ್ಗದರ್ಶನ ನೀಡುವ ಗಣೇಶ್ ದಾದಾ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವಿಭಿನ್ನ ಪಾತ್ರದಲ್ಲಿ, ವಿಶೇಷ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಕಾರಣ, ರವಿಚಂದ್ರನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

ಶೈನ್ ಶೆಟ್ಟಿ

‘ಕಾಂತಾರ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರೂ, ಪ್ರೇಕ್ಷಕರ ಮನಗೆದ್ದಿದ್ದ ‘ಬಿಗ್​ಬಾಸ್’ ಖ್ಯಾತಿಯ ಶೈನ್ ಶೆಟ್ಟಿ, ‘ವಿಜಯಾನಂದ’ ಚಿತ್ರದಲ್ಲೂ ಅದೇ ರೀತಿಯ ನೆಗಟಿವ್ ಶೇಡ್​ನಲ್ಲಿ, ಉತ್ತರ ಕರ್ನಾಟಕದ ಘಾಟಿ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರಾವಳಿ ಹುಡುಗನಾದರೂ ಉತ್ತರ ಕರ್ನಾಟಕದ ಗೆಟಪ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ‘ಕಾಂತಾರ’ ಸಕ್ಸಸ್ ಮರುಕಳಿಸುವ ಭರವಸೆ ಶೈನ್ ಶೆಟ್ಟಿ ಅವರದು.

ದಯಾಳ್ ಪದ್ಮನಾಭನ್

15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ದಯಾಳ್ ಪದ್ಮನಾಭನ್, ‘ಗಾಳಿಪಟ’ ಚಿತ್ರದಲ್ಲಿ ಡ್ರಾಕುಲಾ ಪಾತ್ರದಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದರು. ಈಗ ‘ವಿಜಯಾನಂದ’ ಚಿತ್ರದಲ್ಲಿ ಮತ್ತೆ ಕ್ಯಾಮರಾ ಮುಂದಕ್ಕೆ ಮರಳಿರುವ ಅವರು ‘ಗಣೇಶನ್’ ಪಾತ್ರದಲ್ಲಿ ನಟಿಸಿದ್ದಾರೆ. ಉದ್ಯಮಕ್ಕೆ ಬಂದ ಡಾ. ವಿಜಯ ಸಂಕೇಶ್ವರ ಅವರ ಬೆಳವಣಿಗೆ ಸಹಿಸದ, ಅವರನ್ನು ಹಣಿಯಲು ಯತ್ನಿಸುವ ನೆಗೆಟಿವ್ ಪಾತ್ರದಲ್ಲಿ ದಯಾಳ್ ಪದ್ಮನಾಭನ್ ಕಾಣಿಸಿಕೊಂಡಿದ್ದಾರೆ.