ಸಿನಿವಾಣಿ

'ದಿ ಫ್ಯಾಮಿಲಿ ಮ್ಯಾನ್​ 3'ನಲ್ಲಿ ವಿಜಯ್​ ಸೇತುಪತಿ? ಹೀಗೊಂದು ಸುದ್ದಿ ...

ಮುಂಬೈ: ಈ ತಿಂಗಳ ಮೊದಲ ವಾರದಲ್ಲಿ 'ದಿ ಫ್ಯಾಮಿಲಿ ಮ್ಯಾನ್​-2' ಬಿಡುಗಡೆಯಾಗಿದ್ದೇ ಆಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. 'ದಿ ಫ್ಯಾಮಿಲಿ ಮ್ಯಾನ್​ 2' ನೋಡುವವರೆಗಲ್ಲರಿಗೂ ಇದೀಗ 'ದಿ ಫ್ಯಾಮಿಲಿ ಮ್ಯಾನ್​ 3' ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಮೂರನೇ ಸೀಸನ್​ ಯಾವಾಗ ಬರುತ್ತದೆ ಎಂದು ಕಾಯುತ್ತಿದೆ.

ಅಷ್ಟೇ ಅಲ್ಲ, 'ದಿ ಫ್ಯಾಮಿಲಿ ಮ್ಯಾನ್​ 3' ಕುರಿತಾಗಿ ಪ್ರತಿದಿನ ಒಂದಲ್ಲ ಒಂದು ಸುದ್ದಿ ಕೇಳಿ ಬರುತ್ತಲಿದ್ದು, ಯಾವುದು ನಿಜ, ಯಾವುದು ಸುಳ್ಳು ಎಂದು ಜನರಿಗೆ ಗೊತ್ತಾಗದಂತಾಗಿದೆ. ಹೊಸ ಸುದ್ದಿಯ ಪ್ರಕಾರ, 'ದಿ ಫ್ಯಾಮಿಲಿ ಮ್ಯಾನ್​ 3'ನಲ್ಲಿ ಕಾಲಿವುಡ್​ ನಟ ವಿಜಯ್​ ಸೇತುಪತಿ ನಟಿಸುತ್ತಿದ್ದಾರಂತೆ.

ಹೌದು, 'ದಿ ಫ್ಯಾಮಿಲಿ ಮ್ಯಾನ್​ 3'ನಲ್ಲಿ ವಿಜಯ್​ ಸೇತುಪತಿ ನಟಿಸಲಿದ್ದಾರೆ ಎಂಬ ಸುದ್ದಿಯಾಗಿದ್ದು, ಈ ಬಗ್ಗೆ ವೆಬ್​ಸೀರೀಸ್​ನ ತಂಡವಾಗಲೀ, ವಿಜಯ್ ಸೇತುಪತಿಯಾಗಲೀ, ಮನೋಜ್​ ಬಾಜ್ಪೇಯಿ ಆಗಲೀ ... ಖಚಿತಪಡಿಸಿಲ್ಲ. ಒಟ್ಟಾರೆ, ಸುದ್ದಿಯೊಂದು ಕೇಳಿಬಂದಿದ್ದು, ಒಂದು ಪಕ್ಷ ಇದು ನಿಜವಾದರೆ, ಈ ವೆಬ್​ಸರಣಿಗೆ ಇನ್ನೂ ದೊಡ್ಡ ಮಟ್ಟದಲ್ಲಿ ಕ್ರೇಜ್​ ಶುರುವಾಗಲಿದೆ.

ಅಂದಹಾಗೆ, 'ದಿ ಫ್ಯಾಮಿಲಿ ಮ್ಯಾನ್​'ನ ಎರಡನೆಯ ಸೀಸನ್​ನಲ್ಲೇ 'ಮಕ್ಕಳ್​ ಸೆಲ್ವನ್​' ಎಂದು ಜನಪ್ರಿಯವಾಗಿರುವ ವಿಜಯ್​ ಸೇತುಪತಿ ನಟಿಸಬೇಕಿತ್ತಂತೆ. ಆದರೆ, ಅವರು ಬ್ಯುಸಿಯಾಗಿದ್ದರಿಂದ ಅದು ಮಿಸ್​ ಆಯಿತಂತೆ. ಈಗ ಕೊನೆಗೂ ಅವರು 'ದಿ ಫ್ಯಾಮಿಲಿ ಮ್ಯಾನ್​'ನ ಮೂರನೆಯ ಸೀಸನ್​ನಲ್ಲಿ ನಟಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. 'ದಿ ಫ್ಯಾಮಿಲಿ ಮ್ಯಾನ್​ 3' ಸರಣಿಯ ಕಥೆ ಈಗಾಗಲೇ ತಯಾರಾಗಿದ್ದು, ಈ ವರ್ಷದ ಕೊನೆಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.