ಸಿನಿವಾಣಿ

ಅತಿ ಕಡಿಮೆ ಬೆಲೆಯ ಚಪ್ಪಲಿ ಧರಿಸಿ ಬಂದ ವಿಜಯ್​ ದೇವರಕೊಂಡ: ನಟನ ಸರಳತೆ ನೋಡಿ ಶಾಕ್​ ಆದ ಬಾಲಿವುಡ್​!

ಮುಂಬೈ: ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಸದ್ಯ ತಾವು ಧರಿಸಿದ್ದ ಚಪ್ಪಲಿಯ ವಿಷಯವಾಗಿ ಭಾರೀ ಸುದ್ದಿಯಲ್ಲಿದ್ದಾರೆ.

ಸದ್ಯ ಲೈಗರ್​​ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿ ನಟಿ ಅನನ್ಯಾ ಪಾಂಡೆ ಜತೆ ತೆರೆಹಂಚಿಕೊಂಡಿದ್ದಾರೆ. ಇದೀಗ ಈ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಬಂದಿದ್ದ ವಿಜಯ್​ ದೇವರಕೊಂಡ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ವಿಡಿಯೋವನ್ನು 50 ಮಿಲಿಯನ್ ಜನರು ವೀಕ್ಷಿಸಿದ್ದು, ವಿಜಯ್​ ಸರಳತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನೂರಾರು ಕೋಟಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಕೋಟ್ಯಾಂತರ ರೂ. ಸಂಭಾವನೆ ಪಡೆಯುವ ನಟ ವಿಜಯ್​ ದೇವರಕೊಂಡ ಕೇವಲ199 ರೂ.ಬೆಲೆಯ ಚಪ್ಪಲಿ ಧರಿಸಿ ಚಿತ್ರ ಪ್ರಚಾರಕ್ಕೆ ಬಂದಿದ್ದರು. ಅವರ ಈ ಸರಳತೆಯನ್ನು ನೋಡಿ ಬಾಲಿವುಡ್ ಮಂದಿಯೇ ಶಾಕ್​ ಆಗಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನಟನ ಸರಳತೆಗೆ ಮಾರು ಹೋಗಿದ್ದಾರೆ.

ಚಿತ್ರದ ನಿರ್ಮಾಪಕರಾದ ಕರಣ್​ ಜೋಹರ್ ಹಾಗೂ ರಣವೀರ್​ ಸಿಂಗ್​ ಸೂಟು-ಬೂಟಿನಲ್ಲಿ ಬಂದಿದ್ದು, ಅಲ್ಲಿದ್ದ ಬಹುತೇಕರು ಇದೇ ರೀತಿ ಇದ್ದರು, ಆದರೆ ಸಾಮಾನ್ಯ ಉಡುಪು ಧರಿಸಿ ಬಂದಿದ್ದ ವಿಜಯ್​ ಅದರಲ್ಲೂ ಅತಿ ಕಡಿಮೆ ಬೆಲೆಯ ಚಪ್ಪಲಿ ಧರಿಸಿ ಬಂದಿದ್ದು, ಎಲ್ಲರಿಗೂ ಅಚ್ಚರಿಗೊಳಿಸಿತ್ತು.

ಇದೇ ವೇಳೆ ಮಾತನಾಡಿದ ರಣವೀರ್​ ಸಿಂಗ್​, ಅರೆ ಏನಿದು ನಾನು ನಿನ್ನ ಸಿನಿಮಾದ ಟ್ರೇಲರ್​ ಬಿಡುಗಡೆಗೆ ಬಂದಿದ್ದೇನೆ ಅಥವಾ ನನ್ನ ಸಿನಿಮಾ ಟ್ರೇಲರ್​ ಲಾಂಚ್​ ಮಾಡಲು ಬಂದಿದ್ದೇನೆ ಎಂಬ ಅನುಮಾನ ಕಾಡುತ್ತಿದೆ ಎಂದು ಛೇಡಿಸಿದರು. ಇದಕ್ಕೆ ತಲೆಕೆಡಿಸಿಕೊಳ್ಳದ ವಿಜಯ್​ ನಾನು ಇರುವುದೇ ಹೀಗೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)