Vijay Deverakonda ಚಿತ್ರ Instagram 
ಸಿನಿವಾಣಿ

6 ಕ್ಯಾರವಾನ್, 50 ಅಸಿಸ್ಟೆಂಟ್ಸ್​ಗೆ ಬೇಡಿಕೆ ಇಟ್ಟರಾ ವಿಜಯ್ ದೇವರಕೊಂಡ? ‘ರಣಬಾಲಿ’ ವಿವಾದದ ಬಗ್ಗೆ ಚಿತ್ರತಂಡ ಹೇಳಿದ್ದೇನು! Vijay Deverakonda

Vijay Deverakonda: ಚಿತ್ರರಂಗದಲ್ಲಿ ಸ್ಟಾರ್ ನಟ-ನಟಿಯರ ಸುತ್ತ ನಾನಾ ರೀತಿಯ ಗಾಸಿಪ್‌ಗಳು ಹರಿದಾಡುವುದು ಹೊಸದೇನಲ್ಲ. ಆದರೆ, ಕೆಲವೊಮ್ಮೆ ಸುಳ್ಳು ಸುದ್ದಿಗಳು ಎಷ್ಟು ನೈಜವಾಗಿ ಸೃಷ್ಟಿಯಾಗುತ್ತವೆ ಎಂದರೆ ಸಾರ್ವಜನಿಕರು ಮತ್ತು ಅಭಿಮಾನಿಗಳು ಅದನ್ನು ನಿಜವೆಂದೇ ನಂಬಿ ಬಿಡುತ್ತಾರೆ. ಸದ್ಯ ಇಂತಹದ್ದೇ ಒಂದು ನಟ ವಿಜಯ್ ದೇವರಕೊಂಡ ಅವರ ವಿಷಯದಲ್ಲಿಯೂ ನಡೆದಿದೆ.
ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಣಬಾಲಿ’ (Ranabali) ಚಿತ್ರೀಕರಣದ ಸಮಯದಲ್ಲಿ ವಿಜಯ್ ದೇವರಕೊಂಡ ಅವರು ಚಿತ್ರತಂಡದ ಎದುರು ಅತಿಯಾದ ಮತ್ತು ದುಬಾರಿ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಈ ಎಲ್ಲಾ ವರದಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ನಟನ ಅಧಿಕೃತ ತಂಡ ತಳ್ಳಿಹಾಕಿದೆ.
ಕಳೆದ ಕೆಲವು ದಿನಗಳಿಂದ ಎಕ್ಸ್ ಹಾಗೂ ಇನ್‌ಸ್ಟಾಗ್ರಾಮ್‌ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮಗಳಲ್ಲಿ ಸ್ಕ್ರೀನ್‌ಶಾಟ್ ಒಂದು ಹರಿದಾಡುತ್ತಿತ್ತು. ಜನಪ್ರಿಯ ಮನರಂಜನಾ ವೆಬ್ ಪೋರ್ಟಲ್ ಆದ '123ತೆಲುಗು' ಈ ಸುದ್ದಿಯನ್ನು ಪ್ರಕಟಿಸಿದೆ ಎಂಬಂತೆ ಆ ಸ್ಕ್ರೀನ್‌ಶಾಟ್ ಅನ್ನು ಸೃಷ್ಟಿಸಲಾಗಿತ್ತು. ಅದರಲ್ಲಿ ವಿಜಯ್ ಅವರು ರಣಬಲಿ ಚಿತ್ರಕ್ಕಾಗಿ ಐದರಿಂದ ಆರು ಕ್ಯಾರವಾನ್‌ಗಳು ಮತ್ತು ಚಿತ್ರದ ಸೆಟ್‌ನಲ್ಲಿ ಸುಮಾರು 40-50 ಸಹಾಯಕರನ್ನು ಕೇಳಿದ್ದಾರೆ. ಈ ವಿಷಯದ ಕುರಿತು ಚಿತ್ರದ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರ ಮಂಡಳಿಯನ್ನು ಸಂಪರ್ಕಿಸಿದೆ ಎಂದು ಆರೋಪಿಸಲಾಗಿತ್ತು.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ನಟನ ಟೀಮ್​, ವಿಜಯ್ ಅವರನ್ನು ಕೆಣಕುವ ಉದ್ದೇಶದಿಂದ ಸೋಶಿಯಲ್​ ಮೀಡಿಯಾದಲ್ಲಿ ಕೆಲವು ವ್ಯಕ್ತಿಗಳು ಸುದ್ದಿ ಮೂಲಗಳಿಂದ ಬಂದಂತೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳು ಸಂಪೂರ್ಣವಾಗಿ ಆಧಾರರಹಿತವಾಗಿರುವುದರಿಂದ, ಯಾರೂ ಕೂಡ ಈ ವದಂತಿಗಳಿಗೆ ಕಿವಿಕೊಡಬೇಡಿ ಎಂದು ತಿಳಿಸಿದೆ.
ವೈರಲ್ ಆದ ಸ್ಕ್ರೀನ್‌ಶಾಟ್‌ಗೆ 123 ತೆಲುಗು ವೆಬ್​ ಪೋರ್ಟಲ್ ಕೂಡಾ ಪ್ರತಿಕ್ರಿಯಿಸಿದ್ದು, ಈ ವರದಿಯನ್ನು ನಾವು ಎಂದಿಗೂ ಪ್ರಕಟಿಸಿಲ್ಲ. ಈ ಪ್ರಕಟಣೆಯಲ್ಲಿ ನಮ್ಮ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಹಾಗಾಗಿ ಈ ಕೃತ್ಯದಲ್ಲಿ ಯಾರು ಭಾಗಿಯಾಗಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ವಿಜಯ್ ದೇವರಕೊಂಡ ಅವರು ಕೊನೆಯ ಬಾರಿಗೆ ‘ಕಿಂಗ್ಡಮ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ನಿರ್ದೇಶಕ ರವಿ ಕಿರಣ್ ಕೋಲಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ರೌಡಿ ಜನಾರ್ದನ’ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಖ್ಯಾತ ನಟಿ ಕೀರ್ತಿ ಸುರೇಶ್ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ, ನಿರ್ದೇಶಕ ರಾಹುಲ್ ಸಂಕ್ರಿತ್ಯನ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ರಣಬಾಲಿ’ಯಲ್ಲೂ ವಿಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗೀತ ಗೋವಿಂದಂ (2018) ಮತ್ತು ಡಿಯರ್ ಕಾಮ್ರೇಡ್ (2019) ನಂತರ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಒಂದಾಗಿದ್ದಾರೆ. ವರ್ಷಗಳ ಕಾಲ ತಮ್ಮ ಪ್ರೀತಿ ಹಾಗೂ ವೈಯಕ್ತಿಕ ಸಂಬಂಧವನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರ ಕಣ್ಣಿನಿಂದ ದೂರವಿಟ್ಟಿದ್ದ ಈ ಜೋಡಿ, ಕಳೆದ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ಅತ್ಯಂತ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ನಂತರ ಈ ವರ್ಷದ ಆರಂಭದಲ್ಲಿ ಅವರ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು (ಏಜೆನ್ಸೀಸ್​).