ಟಾಲಿವುಡ್ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟ ವಿಜಯ್ ದೇವರಕೊಂಡ ಒಟ್ಟಿಗೆ ‘ಲೈಗರ್’ ಸಿನಿಮಾ ಮಾಡುತ್ತಿರುವುದು ಹಳೆಯ ಸುದ್ದಿ. ಈಗಾಗಲೇ ಚಿತ್ರದ ಶೂಟಿಂಗ್ ಸಹ ಮುಗಿದಿದೆ. ಇನ್ನೇನು ಆ ಸಿನಿಮಾ ಆಗಸ್ಟ್ ವೇಳೆಗೆ ಬಿಡುಗಡೆ ಆಗಲಿದೆ. ಹೀಗಿರುವಾಗಲೇ ಇದೇ ನಟ-ನಿರ್ದೇಶಕ ಜೋಡಿ ಮತ್ತೊಂದು ಸಿನಿಮಾ ಘೋಷಣೆ ಮಾಡಿದೆ. ‘ಜನಗಣಮನ’ (ಜೆಜಿಎಂ) ಎಂಬುದು ಆ ಹೊಸ ಚಿತ್ರದ ಹೆಸರು.
ಹಾಗಾದರೆ ಏನಿದು ‘ಜನಗಣಮನ’? ಸದ್ಯಕ್ಕೆ ಆ ಗುಟ್ಟನ್ನು ಬಿಟ್ಟುಕೊಡದ ತಂಡ, ಶೀರ್ಷಿಕೆಯ ಸಂಕ್ಷಿಪ್ತ ರೂಪವನ್ನಷ್ಟೇ ಬಿಡುಗಡೆ ಮಾಡಿ, ಕುತೂಹಲ ಕಾಯ್ದುಕೊಂಡಿದೆ. ನಿರ್ದೇಶಕರು ಹೇಳುವ ಪ್ರಕಾರ ‘ಜೆಜಿಎಂ’ ಮಾಸ್ ಜತೆಗೆ ರೋಚಕ ಆಕ್ಷನ್ ಸನ್ನಿವೇಶಗಳಿರುವ ಸಿನಿಮಾ ಆಗಲಿದೆಯಂತೆ. ನಿರ್ದೇಶನದ ಜತೆಗೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಜಗನ್ನಾಥ್ ಮೇಲಿದೆ. ನಿರ್ವಪಕರಲ್ಲಿಯೂ ಒಬ್ಬರಾಗಿದ್ದಾರೆ. ‘ಲೈಗರ್’ ರೀತಿಯಲ್ಲಿಯೇ ‘ಜನಗಣಮನ’ ಚಿತ್ರವೂ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಸಿದ್ಧವಾಗಲಿದೆ. ಏಪ್ರಿಲ್ನಿಂದ ದೇಶ, ವಿದೇಶಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡುವುದರ ಜತೆಗೆ ಬಿಡುಗಡೆ ದಿನಾಂಕವೂ ಘೋಷಣೆ ಆಗಿದೆ. ಈ ವರ್ಷ ಆಗಸ್ಟ್ಗೆ ‘ಲೈಗರ್’ ಬಂದರೆ, 2023ರ ಆಗಸ್ಟ್ 03ಕ್ಕೆ ‘ಜನಗಣಮನ’ ರಿಲೀಸ್ ಆಗಲಿದೆ.