ಸಿನಿವಾಣಿ

ವಿದ್ಯಾಪತಿ ನಾಗಭೂಷಣನ ಕಿತಾಪತಿ ! ಹುಟ್ಟುಹಬ್ಬದಂದೇ ಇಕ್ಕಟ್ಟಿಗೆ ಸಿಲುಕಿದ ನಟ...

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ಬಡವ ರಾಸ್ಕಲ್​', "ಲಕ್ಕಿಮ್ಯಾನ್​', "ಕೌಸಲ್ಯಾ ಸುಪ್ರಜಾ ರಾಮ' ಸೇರಿ ಹಲವು ಚಿತ್ರಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದ ನಾಗಭೂಷಣ್​, "ಇಕ್ಕಟ್​' ಮೂಲಕ ಹೀರೋ ಆಗಿದ್ದು ಗೊತ್ತಿದೆ. ಆ ಬಳಿಕ "ಟಗರುಪಲ್ಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅವರು ಇದೀಗ "ವಿದ್ಯಾಪತಿ' ಎಂಬ ಔಟ್​ ಆ್ಯಂಡ್​ ಔಟ್​ ಕಾಮಿಡಿ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. "ಇಕ್ಕಟ್​' ಚಿತ್ರ ನಿರ್ದೇಶಿಸಿದ್ದ ಇಶಾಮ್​ ಮತ್ತು ಹಸೀನ್​ ಖಾನ್​ "ವಿದ್ಯಾಪತಿ'ಗೂ ಆ್ಯಕ್ಷನ್​&ಕಟ್​ ಹೇಳುತ್ತಿದ್ದಾರೆ. ಜತೆಗೆ ಕಥೆ ಮತ್ತು ಸಂಕಲನದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ.

ಇತ್ತೀಚೆಗಷ್ಟೇ ನಾಯಕ ನಾಗಭೂಷಣ ಹುಟ್ಟುಹಬ್ಬಕ್ಕೆ ಚಿತ್ರತಂಡ ವಿದ್ಯಾಪತಿಯ ಕಿತಾಪತಿಯ ಝಲಕ್​ ಇರುವ ಪ್ರೋಮೊ ರಿಲೀಸ್​ ಮಾಡಿದೆ. ಹಾಗೇ "ಜೇಬು ತುಂಬ ಕಾಸಿರೋನು ಕೋಟ್ಯಾಧಿಪತಿ… ನಿಮ್ಮನ್ನೆಲ್ಲ ಹೊಟ್ಟೆತುಂಬ ನಗಿಸೋನೇ ನಮ್ಮ ವಿದ್ಯಾಪತಿ' ಎಂದು ನಾಯಕನನ್ನು ಪರಿಚಯಿಸಲಾಗಿದೆ. "ಟಗರುಪಲ್ಯ' ಬಳಿಕ ಡಾಲಿ ಧನಂಜಯ ಡಾಲಿ ಪಿಕ್ಚರ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ನಾಗಭೂಷಣ "ವಿದ್ಯಾಪತಿ'ಯಲ್ಲಿ ಕರಾಟೆ ಪಟು ಪಾತ್ರದಲ್ಲಿ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರಿಗೆ "ಉಪಾಧ್ಯಕ್ಷ' ನಾಯಕಿ ಮಲೈಕಾ ವಸುಪಾಲ್​ ಜೋಡಿಯಾಗಿದ್ದಾರೆ. ಜತೆಗೆ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದಾರೆ.