ಬೆಂಗಳೂರು: ಧರ್ಮ ಕೀರ್ತಿರಾಜ್ ಹಾಗೂ ಸೋನು ಗೌಡ ಸದ್ದಿಲ್ಲದೆ ಹೊಸ ಚಿತ್ರವೊಂದರಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಅದೇ 'ವಸುಂಧರದೇವಿ'. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
'ವಸುಂಧರದೇವಿ' ಚಿತ್ರವನ್ನು ಮಹೇಶ್ ಚಿನ್ಮಯಿ ನಿದೇರ್ಶಿಸಿದ್ದು, ಇದವರ ನಾಲ್ಕನೆಯ ಚಿತ್ರವಾಗಿದೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಮುಖ್ಯಮಂತ್ರಿಗಳ ಮಗಳೊಬ್ಬಳು ತಾನು ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಮುಖ್ಯಮಂತ್ರಿ ಆಗುತ್ತಾಳೆ. ನಂತರ ಆಕೆಯ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಯಾರು? ಎಂದು ಕಂಡು ಹಿಡಿಯಲು ತನಿಖಾಧಿಕಾರಿ ಬರುತ್ತಾರೆ. ಆ ನಂತರ ಚಿತ್ರ ಏನೆಲ್ಲ ತಿರುವು ಪಡೆಯುತ್ತದೆ ಎನ್ನುವುದೇ ಕಥೆ' ಎಂದು ಹೇಳಿದರು.
'ವಸುಂಧರದೇವಿ' ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಧರ್ಮ ಕೀರ್ತಿರಾಜ್ ಅಭಿನಯಿಸಿದ್ದಾರೆ. 'ವಸುಂಧರದೇವಿ' ಪಾತ್ರದಲ್ಲಿ ಸೋನು ಗೌಡ ನಟಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಧರ್ಮ, 'ಈ ಹಿಂದೆ ನಟಿಸಿರುವ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ. ನನ್ನ ಹೇರ್ ಸ್ಟೈಲ್ ಕೂಡ ಈ ಚಿತ್ರಕ್ಕಾಗಿ ಬದಲಿಸಿಕೊಂಡಿದ್ದೀನಿ. ಮಹೇಶ್ ಒಂದೊಳ್ಳೆಯ ಚಿತ್ರ ನಿರ್ದೇಶನ ಮಾಡಿದ್ದಾರೆ. ಅಶೋಕ್ ನಿರ್ಮಾಣ ಮಾಡಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ' ಎಂದರು ನಾಯಕ ಧರ್ಮ.
ಅಶೋಕ್ ಕವೇಟಿ ನಿರ್ಮಿಸಿರುವ ಈ ಚಿತ್ರದಲ್ಲಿ ಗೋವಿಂದೇ ಗೌಡ, ರೂಪೇಶ್, ಪೂಜಾ, ಸೆವೆನ್ ರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರವು ನವೆಂಬರ್ನಲ್ಲಿ ಬಿಡುಗಡೆಯಾಗುತ್ತಿದ್ದು, ವಿನು ಮನಸು ಸಂಗೀತ ಸಂಯೋಜಿಸಿದ್ದಾರೆ.