ಬೆಂಗಳೂರು: ಬುಧವಾರವಷ್ಟೇ ವಿಜಯ್ ಮತ್ತು ರಶ್ಮಿಕಾ ಅಭಿನಯದ 'ವಾರಿಸು' ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಮೊದಲ ದಿನ ಈ ಚಿತ್ರವು 800ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು. ಆದರೆ, ಕ್ರಮೇಣ ಶೋಗಳು ಕಡಿಮೆಯಾಗಿದ್ದು, ಒಂದೇ ದಿನ 300 ಪ್ರದರ್ಶನಗಳು ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಇದಕ್ಕೆಲ್ಲ ಕಾರಣ ರಶ್ಮಿಕಾ ಎಂಬ ಸುದ್ದಿ ಇದೆ.
ಕಳೆದ ವರ್ಷ ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಮಾತನಾಡುವಾಗ ತಮ್ಮನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಯಾರು ಎಂದು ಹೇಳಲಿಲ್ಲ. ಪರಂವಾ ಸ್ಟುಡಿಯೋಸ್ ಹೆಸರನ್ನು ಹೇಳದೆಯೇ ನಿರ್ಮಾಣ ಸಂಸ್ಥೆಯೊಂದನ್ನು ತನ್ನನ್ನು ಸಂಪರ್ಕಿಸಿತು ಎಂದು ಹೇಳಿದ್ದರು. ಇದು ರಕ್ಷಿತ್ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು. ರಶ್ಮಿಕಾ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರನ್ನೇ ಮರೆತರು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದರು.
ಅಷ್ಟೇ ಅಲ್ಲ, ರಶ್ಮಿಕಾ ಅಹಂಕಾರಕ್ಕೆ ಪ್ರತಿಯಾಗಿ ಕರ್ನಾಟಕದ ಚಿತ್ರಮಂದಿರದ ಮಾಲೀಕರು, ಕೆಲವು ಸಂಘ-ಸಂಸ್ಥೆಗಳು ಮತ್ತು ಚಿತ್ರರಂಗದವರು ಆವರ ಚಿತ್ರಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡುವ ಬಗ್ಗೆ ಯೋಚಿಸುತ್ತಿವೆ ಎಂಬ ಸುದ್ದಿಯೊಂದು ಕೇಳಿಬಂತು. ಈ ಬಗ್ಗೆ ಯಾರಿಂದಲೂ ಅಧಿಕೃತ ಘೋಷಣೆ ಹೊರಬರದಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿಯಾಗಿದ್ದಂತೂ ಹೌದು.
ಅದಕ್ಕೆ ಪ್ರತಿಯಾಗಿ, 'ವಾರಿಸು' ಚಿತ್ರದ ಪ್ರದರ್ಶನಗಳು ಕಡಿಮೆ ಆಗುತ್ತಿರುವ, ಕ್ಯಾನ್ಸಲ್ ಆಗುತ್ತಿರುವ ಬಗ್ಗೆ ರಶ್ಮಿಕಾ ಅವರ ಮಾತುಗಳೇ ಕಾರಣ ಎಂದು ಹೇಳಲಾಗುತ್ತಿದೆ. ಇದು ಸಂಪೂರ್ಣ ನಿಜವೇನಲ್ಲ. ಏಕೆಂದರೆ, 'ವಾರಿಸು' ಬಗ್ಗೆ ವಿಜಯ್ ಅಭಿಮಾನಿಗಳು ಸಾಕಷ್ಟು ಕೊಂಡಾಡುತ್ತಿದ್ದರೂ, ಚಿತ್ರದ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗಿಲ್ಲ. ಮೇಲಾಗಿ, 'ತುನಿವು', 'ವಾಲ್ಟರ್ ವೀರಯ್ಯ' ಮತ್ತು 'ವೀರ ಸಿಂಹ ರೆಡ್ಡಿ' ಚಿತ್ರಗಳು ಜತೆಗೆ ಬಿಡುಗಡೆಯಾಗಿದ್ದರಿಂದ, ಸಹಜವಾಗಿಯೇ 'ವಾರಿಸು' ಚಿತ್ರಕ್ಕೆ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, 'ವಾರಿಸು' ಚಿತ್ರಕ್ಕೆ ಪ್ರದರ್ಶನಗಳು ಕಡಿಮೆಯಾಗಿದ್ದಿಕ್ಕೆ ರಶ್ಮಿಕಾ ಮಂದಣ್ಣ ಕಾರಣ ಎಂದು ಸೋಲನ್ನು ಅವರ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.