ಸಿನಿವಾಣಿ

ತಾರೆಯರ ಪೂಜಾರತಿ; ನಟಿಯರ ಹಬ್ಬದ ಸಂಭ್ರಮ

ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮೀ ಹಬ್ಬ ಹೆಣ್ಮಕ್ಕಳಿಗೆ ಬಹಳ ವಿಶೇಷ. ಆದರೆ, ಕಳೆದ ವರ್ಷದಂತೆ ಈ ವರ್ಷವೂ ಕರೊನಾ ಹಾವಳಿ ತಪ್ಪಿಲ್ಲ. ಮೂರನೇ ಅಲೆಯ ಭಯದಲ್ಲಿಯೇ ಹಬ್ಬದಾಚರಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಚಂದನವನದ ತಾರೆಯರು ಏನು ಹೇಳುತ್ತಾರೆ ಎಂಬುದನ್ನು ಅವರ ಮಾತಲ್ಲೇ ಕೇಳೋಣ ಬನ್ನಿ ...

ಇದೀಗ ಕರ್ನಾಟಕದ ಎಲ್ಲ ಹಬ್ಬಗಳೂ ಗೊತ್ತು

ನಮ್ಮ ತವರೂರಿನಲ್ಲಿ (ಪಶ್ಚಿಮ ಬಂಗಾಳ) ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲ್ಲ. ಅಲ್ಲಿ ದುರ್ಗಾ ಪೂಜೆ, ದೀಪಾವಳಿ ಹಬ್ಬ ಆಚರಿಸುತ್ತೇವೆ. ನಾನು ಕನ್ನಡ ಸಿನಿಮಾರಂಗಕ್ಕೆ ಬಂದು ಕೆಲ ವರ್ಷಗಳ ತನಕ ವರಮಹಾಲಕ್ಷ್ಮಿ ಹಬ್ಬ ಅಂದರೆ ಏನೆಂದು ಗೊತ್ತಿರಲಿಲ್ಲ. ನಂತರ ಅತ್ತೆಯ ಜತೆ ಆಚರಿಸುತ್ತ ತಿಳಿದುಕೊಂಡೆ. ಅತ್ತಿಗೆ ಕೂಡ ಹೇಳಿಕೊಡುತ್ತಿದ್ದರು. ಈಗ ಕರ್ನಾಟಕದ ಎಲ್ಲ ಹಬ್ಬದ ಬಗ್ಗೆ ಗೊತ್ತು ಮತ್ತು ಪ್ರತಿ ಹಬ್ಬವನ್ನು ಆಚರಿಸುತ್ತಿದ್ದೇವೆ. ವರಮಹಾಲಕ್ಷ್ಮಿ ಹಬ್ಬದಂದು ದೇವರಿಗೆ ನೈವೇದ್ಯ ಮತ್ತು ಸಿಹಿ ತಿಂಡಿಗಳು ಜಾಸ್ತಿ ಇರುತ್ತೆ. ಇನ್ನುಳಿದಂತೆ ಸಾಂಪ್ರದಾಯಿಕವಾಗಿ ಲಕ್ಷ್ಮಿಗೆ ಸೀರೆಯ ಅಲಂಕಾರ ಮಾಡುತ್ತೇವೆ. ಸುಮಂಗಲಿಯರಿಗೆ ಅರಿಶಿಣ-ಕುಂಕುಮ, ವೀಳ್ಯದೆಲೆ, ಸೀರೆ ಕೊಡುತ್ತೇವೆ. ಪೂಜೆ ಆದಮೇಲೆ ವರಮಹಾಲಕ್ಷ್ಮಿ ಕಥೆ ಕೇಳಿದ ಬಳಿಕ ಹಬ್ಬ ಮುಗಿಯುತ್ತದೆ. ವ್ರತ ಆಚರಣೆ ಇದ್ದೇ ಇರುತ್ತದೆ.

| ಪ್ರಿಯಾಂಕಾ ಉಪೇಂದ್ರ

ಸಿನಿಮಾ ನಡುವೆಯೇ ಲಕ್ಷ್ಮೀ ಪೂಜೆ

ಹಬ್ಬದ ಬಗ್ಗೆ ನನಗೆ ಅಮ್ಮನಷ್ಟು ಜ್ಞಾನವಿಲ್ಲ. ಅಮ್ಮನಂತೆ ನನಗೂ ಕೂಡ ದೇವರ ಮೇಲೆ ವಿಪರೀತ ನಂಬಿಕೆ. ವರಮಹಾಲಕ್ಷ್ಮಿ ಹಬ್ಬ ಅಂತಲ್ಲ. ಲಕ್ಷ್ಮಿ ಅಲಂಕಾರಕ್ಕೆಂದೇ ಮನೆಯಲ್ಲಿ ದೊಡ್ಡ ಪೆಟ್ಟಿಗೆ ಇದೆ. ಹಬ್ಬದ ಸಮಯದಲ್ಲಿ ಎಲ್ಲವನ್ನೂ ತೆಗೆದಿಟ್ಟು ಸ್ವಚ್ಛಗೊಳಿ ಸುತ್ತೇನೆ. ಹಬ್ಬಕ್ಕೆ ನನ್ನ ಫೇವರಿಟ್ ತಿಂಡಿ ಹೋಳಿಗೆ ಮಾಡಬೇಕು. ಅದನ್ನು ನಾನೇ ತಯಾರಿ ಮಾಡುತ್ತೇನೆ. ಇನ್ನುಳಿದಂತೆ ಕರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆ ಮನೆಗಷ್ಟೇ ಸೀಮಿತವಾಗಿದೆ. ಮೊದಲೆಲ್ಲ ದೇವಸ್ಥಾನಗಳಿಗೆಲ್ಲ ಹೋಗುತ್ತಿದ್ದೆವು. ಇದೀಗ ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿನ ದೇವರನ್ನೇ ಹೂಗಳಿಂದ ಅಲಂಕರಿಸಿ ಪೂಜೆ ಮಾಡುತ್ತೇವೆ. ಒಪ್ಪಿಕೊಂಡ ಸಿನಿಮಾ ಕೆಲಸಗಳೂ ನಡೆಯುತ್ತಿರುವುದರಿಂದ ಆ ಕಡೆಗೇ ಹೆಚ್ಚು ಗಮನ ಹರಿಸಿದ್ದೇನೆ.

| ಅದಿತಿ ಪ್ರಭುದೇವ

ಹಬ್ಬ ಚಿಕ್ಕದಾಗಿ ಚೊಕ್ಕದಾಗಿರಲಿ

ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ಈ ಹಬ್ಬದ ಸಂಭ್ರಮ ಜೋರಾಗಿತ್ತು. ಬೆಳೆದಂತೆಲ್ಲಾ ಕ್ರಮೇಣ ಕಡಿಮೆಯಾಯಿತು. ಇದೀಗ ಕಳೆದ ವರ್ಷದಂತೆ ಈ ವರ್ಷವೂ ಕರೊನಾ ಮುಂದುವರಿದಿದೆ. ಹೀಗಿರುವಾಗ ಹಬ್ಬವನ್ನು ಚಿಕ್ಕದಾಗಿ-ಚೊಕ್ಕದಾಗಿ ಆಚರಿಸುವುದಕ್ಕೆ ಯೋಚಿಸುತ್ತಿದ್ದೇವೆ. ಪರಿಸ್ಥಿತಿ ಸುಧಾರಿಸುವವರೆಗೂ ಸಂಪ್ರದಾಯವನ್ನು ಬಿಟ್ಟರೆ ಏನೂ ಆಗುವುದಿಲ್ಲ. ಹಬ್ಬದ ದಿನಗಳಲ್ಲಿ ಸಂಭ್ರಮ, ಸಂಪ್ರದಾಯ ಎಲ್ಲವೂ ಸಹಜ. ಆದರೆ, ಅದೆಲ್ಲಕ್ಕಿಂತ ಆರೋಗ್ಯ ಮುಖ್ಯ ಎಂಬುದು ನನ್ನ ಭಾವನೆ. ಹಾಗಾಗಿ ಮನೆ ಮಟ್ಟಿಗೆ ಹಬ್ಬವನ್ನು ಆಚರಿಸಿಕೊಳ್ಳಿ. ಸುಮ್ಮನೆ ಆಚೆ ಹೋಗುವುದು, ಇನ್ನೊಬ್ಬರ ಮನೆಗೆ ಹೋಗುವುದು ಇವೆಲ್ಲಾ ಅನಾವಶ್ಯಕ. ಅದರ ಬದಲು ಮನೆಯಲ್ಲೇ ಇದ್ದು, ಇದೆಲ್ಲಾ ಆದಷ್ಟು ಬೇಗ ಸರಿ ಹೋಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿಕೊಳ್ಳಿ.

| ಆಶಿಕಾ ರಂಗನಾಥ್

ಈ ಸಲವೂ ಕಾಯಕವೇ ಕೈಲಾಸ

ಕರೊನಾ ಇನ್ನೂ ಮುಗಿದಿಲ್ಲ. ಮೂರನೇ ಅಲೆ ಭಯ ಈಗಾಗಲೇ ಎಲ್ಲೆಡೆ ಶುರುವಾಗಿದೆ. ಅದರಲ್ಲೂ ಶ್ರಾವಣ ಶುರುವಾಗಿರುವುದರಿಂದ ಸಾಲು ಸಾಲು ಹಬ್ಬಗಳ ಸಡಗರ. ಹಾಗಾಗಿ ನಮ್ಮ ಕಾಳಜಿ ಮತ್ತು ಜಾಗೃತಿಯಲ್ಲಿಯೇ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಳ್ಳಬೇಕು. ಕಳೆದ ವರ್ಷ ಕರೊನಾ ಹಾವಳಿ ಹೆಚ್ಚಿದ್ದರೂ, ಜನ ರಸ್ತೆಗಿಳಿದಿದ್ದರು. ಹಾಗಾಗಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಹಬ್ಬ ಮಾಡದಿದ್ದರೆ, ಲಕ್ಷ್ಮೀ ಕೋಪ ಮಾಡಿಕೊಳ್ಳುವುದಿಲ್ಲ. ನಾವು ಹುಷಾರಾಗಿದ್ದರೆ ಮುಂದಿನ ವರ್ಷ ಇನ್ನೂ ಚೆನ್ನಾಗಿ ಮಾಡಬಹುದು. ಕಳೆದ ವರ್ಷದಂತೆ ಈ ವರ್ಷವೂ ನನ್ನದು ಕಾಯಕವೇ ಕೈಲಾಸ. ಕೆಲವು ಪ್ರಾಜೆಕ್ಟ್​ಗಳಲ್ಲಿ ಬಿಜಿಯಾಗಿರುವುದರಿಂದ ಆ ಕೆಲಸದಲ್ಲಿಯೇ ಈ ಸಲದ ಹಬ್ಬವೂ ಮುಗಿದು ಹೋಗುತ್ತದೆ.

| ರಂಜನಿ ರಾಘವನ್