ಸಿನಿವಾಣಿ

ಕನ್ನಡಕ್ಕಾಗಿಯೇ ಸಿನಿಮಾ ಮಾಡೋದು: ‘ವಾಮನ’ ಟ್ರೇಲರ್ ಬಿಡುಗಡೆಗೊಳಿಸಿ ದರ್ಶನ್ ವಿಡಿಯೋ ಸಂದೇಶ

ಬೆಂಗಳೂರು: ಶಂಕರ್ ರಮಣ್ ನಿರ್ದೇಶನದ ಹಾಗೂ ಧನ್ವೀರ್ ಅಭಿನಯದ ‘ವಾಮನ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ನಟ ದರ್ಶನ್ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ರಾಜಸ್ಥಾನದಲ್ಲಿ ‘ದ ಡೆವಿಲ್’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿ ಇರುವ ಕಾರಣ ಕಾರ್ಯಕ್ರಮಕ್ಕೆ ಗೈರಾದರು. ವಿಡಿಯೋ ಮೂಲಕವೇ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ದರ್ಶನ್ ಮಾತನಾಡಿ, ‘ಕೆಲವರು ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ನಾವು ಮಾತ್ರ ಕನ್ನಡಕ್ಕೆ ಸೀಮಿತವಾಗಿದ್ದೇವೆ. ಸಿನಿಮಾ ನೋಡಲಿಲ್ಲ ಎಂದರೆ ಕನ್ನಡ ಇಂಡಸ್ಟ್ರಿ ಬಿಟ್ಟು ಹೋಗುತ್ತೇವೆ ಎನ್ನುತ್ತಾರೆ. ಆದರೆ, ನಾವು ಹಾಗೇ ಮಾಡಲ್ಲ. ಯಾವತ್ತಿಗೂ ಕನ್ನಡದಲ್ಲಿಯೇ ಸಿನಿಮಾ ಮಾಡುತ್ತೇವೆ. ಚಿತ್ರರಂಗ ಹಾಗೂ ಪ್ರೇಕ್ಷಕರನ್ನು ನಂಬಿರೋರು ನಾವು. ಥಿಯೇಟರ್ ಮಾಲಕರು ಕೂಡ ಪ್ರೇಕ್ಷಕರನ್ನು ನಂಬಿದ್ದಾರೆ. ಇದೊಂದು ರೀತಿಯ ಚೈನ್‌ಲಿಂಕ್ ಸಂಬಂಧ. ಕನ್ನಡ ಸಿನಿಮಾಗಳನ್ನು ಬೆಳೆಸಿ’ ಎಂದು ಮನವಿ ಮಾಡಿದರು. ‘ಇನ್ನು ಧನ್ವೀರ್‌ದು ನಾಲ್ಕನೇ ಸಿನಿಮಾ. ಮೊದಲ ಸಿನಿಮಾದಿಂದ ಈವರೆಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಿಯೂ ಪಾತ್ರಗಳು ರಿಪೀಟ್ ಆಗಿಲ್ಲ. ಈಗ ‘ವಾಮನ’ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಇರುವ ಚಿತ್ರವಿದು’ ಎಂದರು. ತಾರಾ ಅನುರಾಧ, ‘ಸಿನಿಮಾದವರಿಗೆ ನಿಜವಾದ ದೇವಸ್ಥಾನಗಳು. ಚಿತ್ರಮಂದಿರಗಳು. ಆ ದೇವರನ್ನು ಪ್ರತಿನಿಧಿಸುವವರು ಅಭಿಮಾನಿಗಳು. ಅದಕ್ಕೆ ಅಣ್ಣಾವ್ರ, ಅಭಿಮಾನಿಗಳೇ ದೇವರು ಎಂದಿದ್ದರು. ಇಲ್ಲಿನ ಅಭಿಮಾನಿಗಳ ಕೂಗು, ಚಪ್ಪಾಳೆ ರಾಜಸ್ಥಾನಕ್ಕೆ ಕೇಳಿಸುತ್ತಿದೆ’ ಎಂದರು. ಈ ಚಿತ್ರದಲ್ಲಿ ಧನ್ವೀರ್‌ಗೆ ‘ಯುಐ’ ಖ್ಯಾತಿಯ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಸಂಪತ್ ಕುಮಾರ್, ಕಾಕ್ರೋಚ್ ಸುಧಿ, ಪೆಟ್ರೋಲ್ ಪ್ರಸನ್ನ ಕಲಾ ಬಳಗದಲ್ಲಿದ್ದಾರೆ. ಇದೇ ಏಪ್ರಿಲ್ 10ಕ್ಕೆ ‘ವಾಮನ’ ಸಿನಿಮಾ ರಿಲೀಸ್ ಆಗಲಿದೆ.

ನಾಲ್ಕನೇ ಸಿನಿಮಾ ಬೆಂಬಲವಿರಲಿ: ಧನ್ವೀರ್ ಮಾತನಾಡಿ, ‘ಇದು ನನ್ನ ನಾಲ್ಕನೇ ಸಿನಿಮಾ. ಈ ಹಿಂದಿನ ಸಿನಿಮಾಗಳಿಗೆ ನೀಡಿದ ಬೆಂಬಲದಂತೆ ಈ ಚಿತ್ರಕ್ಕೂ ನೀಡಬೇಕು. ಇಲ್ಲಿ ಹಿರಿಯ ಕಲಾವಿದರೊಂದಿಗೆ ಅಭಿನಯಿಸಿರುವುದು ಖುಷಿ ನೀಡಿದೆ. ತಾರಾಮ್ಮನಿಂದ ಸಾಕಷ್ಟು ಕಲಿತಿದ್ದೇನೆ. ನಿರ್ದೇಶಕರು ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ತಪ್ಪದೇ ಸಿನಿಮಾ ನೋಡಬೇಕು’ ಎಂದು ವಿನಂತಿಸಿದರು.