ಬೆಂಗಳೂರು: ನಟಿ ರೀಷ್ಮಾ ನಾಣಯ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. 2022ರಲ್ಲಿ ‘ಏಕ್‌ಲವ್‌ಯಾ’ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಡೆಬ್ಯೂ ಮಾಡಿದ ಅವರು, ನಂತರ ‘ರಾಣ’, ‘ಬಾನದಾರಿಯಲ್ಲಿ’ ಸಿನಿಮಾಗಳಲ್ಲಿ ಮಿಂಚಿದ್ದರು. ಕಳೆದ ವರ್ಷ ರೀಷ್ಮಾ ‘ಯುಐ’ನಲ್ಲಿ ಉಪೇಂದ್ರಗೆ ಜೋಡಿಯಾಗಿ ನಟಿಸಿದ್ದರು. ಇದೀಗ ಅವರು ಧನವೀರ್ ಗೌಡಗೆ ನಾಯಕಿಯಾಗಿ ನಟಿಸಿರುವ ‘ವಾಮನ’ ಚಿತ್ರ ರಾಜ್ಯಾದ್ಯಂತ ತೆರೆಗೆ ಕಂಡಿದೆ.‘‘ರಾಣ’ ಮುಗಿದ ಬಳಿಕವೇ ನಾನು ಸಹಿ ಮಾಡಿರುವ ಸಿನಿಮಾ ಇದಾಗಿತ್ತು. ಕಥೆ ಕೇಳುವಾಗಲೇ ಇಷ್ಟವಾಯಿತು. ಟ್ವಿಸ್ಟ್‌ಗಳಿಂದ ಕೂಡಿದ್ದು, ಎಲ್ಲೂ ಬೋರ್ ಅನ್ನಿಸಲಿಲ್ಲ. ನನ್ನ ಪಾತ್ರ ಅಂತಲ್ಲ, ಇಡೀ ಕಥೆ, ಕಂಟೆಂಟ್ ಚೆನ್ನಾಗಿದೆ. ಲವ್‌ಸ್ಟೋರಿ, ಆ್ಯಕ್ಷನ್, ಫ್ಯಾಮಿಲಿ ಎಮೋಷನ್ಸ್, ಒಂದೊಳ್ಳೆ ಸಂದೇಶ.. ಹೀಗೆ ಹಲವು ಅಂಶಗಳಿವೆ’ ಎಂದು ಹೇಳಿಕೊಳ್ಳುತ್ತಾರೆ ರೀಷ್ಮಾ ನಾಣಯ್ಯ.
ಮುದ್ದಾದ ಪಾತ್ರ: ಪಾತ್ರದ ಬಗ್ಗೆ ರೀಷ್ಮಾ, ‘ಇದೊಂದು ಕಮರ್ಷಿಯಲ್ ಸಿನಿಮಾ. ನಾನಿಲ್ಲಿ ಸರಳ, ಮುದ್ದಾದ ಪಾತ್ರದಲ್ಲಿದ್ದೇನೆ. ಇಲ್ಲಿ ನಾಯಕ ಕಷ್ಟದಲ್ಲಿರುವಾಗ ನಾನು ಹೇಗೆ ಬೆಂಬಲವಾಗಿ ನಿಲ್ಲುತ್ತೇನೆ ಎಂಬುದು ಪಾತ್ರ. ಇದು ಎಲ್ಲರಿಗೂ ಇಷ್ಟವಾಗುತ್ತದೆ. ಈ ಚಿತ್ರದ ‘ಮುದ್ದು ರಾಕ್ಷಸಿ’ ಸಾಂಗ್ ಮೊದಲ ಬಾರಿ ಕೇಳಿದಾಗಲೇ ನನ್ನಲ್ಲಿ ಕುತೂಹಲ ಹೆಚ್ಚಿಸಿತ್ತು. ಈಗಾಗಲೇ ಈ ಸಾಂಗ್ ಮೂರು ಕೋಟಿಗೂ ಅಧಿಕ ವಿವ್ಯೆ ಕಂಡಿದೆ. ಚಿತ್ರಕ್ಕೆ ಮತ್ತು ಪಾತ್ರಕ್ಕೆ ನಾನು ಹೆಚ್ಚು ಕನೆಕ್ಟ್ ಆಗಲು ಈ ಸಾಂಗ್ ಕಾರಣವಾಯಿತು’ ಎಂದು ಮಾಹಿತಿ ನೀಡುತ್ತಾರೆ.
ದರ್ಶನ್ ಸರ್‌ಗೆ ಥ್ಯಾಂಕ್ಸ್: ನಟ ದರ್ಶನ್ ಮತ್ತು ಧನವೀರ್ ನಡುವೆ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ದರ್ಶನ್ ಕೆಲ ದಿನಗಳ ಹಿಂದಷ್ಟೆ ‘ವಾಮನ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದರು. ಈ ಬಗ್ಗೆ, ‘ಧನವೀರ್‌ಗೆ ದರ್ಶನ್ ಸರ್ ಮೊದಲಿನಿಂದಲೂ ಸಪೋರ್ಟ್ ಮಾಡುತ್ತಿದ್ದಾರೆ. ಅದರಿಂದ ನಮಗೂ, ನಮ್ಮ ಚಿತ್ರಕ್ಕೂ ಉತ್ತಮ ಬೆಂಬಲ ಸಿಗುತ್ತಿದೆ. ದರ್ಶನ್ ಸರ್ ಫ್ಯಾನ್ಸ್ ಕೂಡ ‘ವಾಮನ’ನ ಜತೆ ನಿಂತಿರುವುದು ಖುಷಿ ನೀಡಿದೆ’ ಎಂದು ಹೇಳಿಕೊಳ್ಳುತ್ತಾರೆ ರೀಷ್ಮಾ.
ಪ್ರೇಮ್ ಸರ್ ಗಾಡ್‌ಫಾದರ್: ‘ಏಕ್ ಲವ್‌ಯಾ’ ಮೂಲಕ ಕಲೆ ಬದುಕು ಆರಂಭಿಸಿದ ರೀಷ್ಮಾ, ಇದೀಗ ಗಣೇಶ್, ಉಪೇಂದ್ರ, ಧ್ರುವ ಸರ್ಜಾ ಹಾಗೂ ಧನ್ವೀರ್ ಜತೆ ಕೆಲಸ ಮಾಡಿದ್ದಾರೆ. ಈ ಯಶಸ್ಸಿಗೆ ‘ಜೋಗಿ’ ಪ್ರೇಮ್ ಸರ್ ಕಾರಣ ಎನ್ನುವ ಅವರು, ‘2022ರಲ್ಲಿ ‘ಏಕ್ ಲವ್‌ಯಾ’ ಸಿನಿಮಾ ಆರಂಭಿಸಿದಾಗ ನಾನು ಪಿಯು ಓದುತ್ತಿದ್ದೆ. ಆಗ ಆ್ಯಕ್ಟಿಂಗ್ ಬಗ್ಗೆ ನನಗೆ ಅಷ್ಟು ಗೊತ್ತಿರಲಿಲ್ಲ. ಆ ವೇಳೆ ಪ್ರೇಮ್ ಸರ್ ಹಾಗೂ ರಕ್ಷಿತಾ ಮೇಡಂ ಬೆಂಬಲವಾಗಿ ನಿಂತು ಎಲ್ಲವನ್ನೂ ಹೇಳಿಕೊಟ್ಟರು. ಇದು ನನಗೆ ಭರವಸೆ ತಂದಿತ್ತು. ಬಳಿಕ ಗಣೇಶ್ ಹಾಗೂ ಉಪೇಂದ್ರ ಸರ್ ಜತೆ ಕೆಲಸ ಮಾಡಿ, ಅವರಿಂದಲೂ ತುಂಬಾ ಕಲಿತೆ. ಈ ಕಲಿಕೆಯೇ ಉತ್ತಮ ಕಥೆಗಳತ್ತ ಕರೆದುಕೊಂಡು ಹೋಗುತ್ತಿದೆ ಎಂದೇ ಭಾವಿಸುವೆ’ ಎನ್ನುತ್ತಾರೆ.
‘ಸಂಪತ್ತಿಗೆ ಸವಾಲು’ ಮಂಜುಳಾ ಸ್ಫೂರ್ತಿ: ‘ಕೆಡಿ’ ಚಿತ್ರದ ಪಾತ್ರದ ಬಗ್ಗೆ ರೀಷ್ಮಾ, ‘ನನ್ನ ವೃತ್ತಿಯಲ್ಲಿ ಅತ್ಯುತ್ತಮ ಸಿನಿಮಾ ಇದಾಗಲಿದೆ. ಇದು ನಾನು ಒಳ್ಳೆಯ ನಟಿ ಎಂಬುದನ್ನು ಪ್ರೂವ್ ಮಾಡಿಕೊಳ್ಳಲು ಸಿಕ್ಕ ಅವಕಾಶ ಎಂದೇ ಭಾವಿಸುವೆ. ಅಷ್ಟೇ ಕಠಿಣ ಪಾತ್ರ. ಲುಕ್, ಡೈಲಾಗ್ ಎಲ್ಲವೂ ಗಟ್ಟಿಯಾಗಿವೆ. ಪಾತ್ರಕ್ಕಾಗಿ ತಿಂಗಳುಗಳ ಕಾಲ ತಯಾರಿ ನಡೆಸಿದ್ದೇನೆ. ಪ್ರೇಮ್ ಸರ್ ಕೂಡ ‘ಸಂಪತ್ತಿಗೆ ಸವಾಲು’ ಮಂಜುಳಾ ಅವರ ಪಾತ್ರ ತರ ಬರಬೇಕು ಎಂದಿದ್ದರು. ಅದಕ್ಕಾಗಿ ತುಂಬಾ ಬಾರಿ ಆ ಸಿನಿಮಾ ನೋಡಿದೆ. ಒಂದು ರೀತಿಯಲ್ಲಿ ಆ ಪಾತ್ರ ಕೂಡ ಸ್ಫೂರ್ತಿಯಾಗಿದೆ’ ಎನ್ನುತ್ತಾರೆ. ಸದ್ಯ ರೀಷ್ಮಾ, ‘ಧನಂಜಯ ನಟನೆಯ ‘ಅಣ್ಣಾ ಫ್ರಮ್ ಮೆಕ್ಸಿಕೋ’ದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಿಂದ ಸ್ಕ್ರಿಪ್ಟ್‌ಗಳು ಬರುತ್ತಿದ್ದು, ತಾಳ್ಮೆ ವಹಿಸಿ, ಆಯ್ಕೆ ಮಾಡಲು ನಿರ್ಧರಿಸಿದ್ದಾರಂತೆ.