ಸಿನಿವಾಣಿ

ಹೊಸ ಥ್ರಿಲ್ಲರ್​ನಲ್ಲಿ ಊರ್ವಶಿ; ಕನ್ನಡ ನಿರ್ಮಾಪಕರ ಹಿಂದಿ ಸಿನಿಮಾ

ಬೆಂಗಳೂರು: ಕನ್ನಡದ ಕಲಾವಿದರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ತಂತ್ರಜ್ಞರೂ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕರ ಜತೆಗೆ ನಿರ್ವಪಕರೂ ಕನ್ನಡದ ಜತೆಗೆ ಬೇರೆ ಬೇರೆ ಚಿತ್ರರಂಗಗಳಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ. ಇದೀಗ ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ, ನೇರವಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಈ ಹಿಂದೆ ದರ್ಶನ್ ಅಭಿನಯದ ‘ಐರಾವತ’ ಚಿತ್ರದಲ್ಲಿ ನಾಯಕಿಯಾಗಿದ್ದ ಊರ್ವಶಿ ರೌತೇಲ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಅಂದಹಾಗೆ, ಇದು ‘ತಿರುಟ್ಟುಪಯಲೇ 2’ ಎಂಬ ಚಿತ್ರದ ರೀಮೇಕ್. ತಮಿಳಿನಲ್ಲಿ 2017ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಬಾಬಿ ಸಿಂಹ, ಪ್ರಸನ್ನ, ಅಮಲಾ ಪೌಲ್ ಮುಂತಾದವರು ನಟಿಸಿದ್ದರು. ಸುಸಿ ಗಣೇಶನ್ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಆಧರಿಸಿಯೇ ರಮೇಶ್ ರೆಡ್ಡಿ, ಕನ್ನಡದಲ್ಲಿ ರಮೇಶ್ ಅರವಿಂದ್ ಅವರ ಅಭಿನಯ ಮತ್ತು ನಿರ್ದೇಶನದಲ್ಲಿ ‘100’ ಎಂಬ ಚಿತ್ರ ನಿರ್ವಿುಸಿದ್ದರು. ಈಗ ಅದೇ ಚಿತ್ರವನ್ನು ಅವರು ಹಿಂದಿಗೂ ತೆಗೆದುಕೊಂಡು ಹೋಗಿದ್ದಾರೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಸುಸಿ ಗಣೇಶನ್, ಹಿಂದಿಯ ರೀಮೇಕನ್ನೂ ನಿರ್ದೇಶಿಸಿದ್ದಾರೆ.

ವಿಶೇಷ ಏನೆಂದರೆ, ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದಲ್ಲಿ ಕನ್ನಡ ಪ್ರತಿಭೆಗಳಿಗೂ ಅವಕಾಶ ನೀಡಿದ್ದಾರೆ ನಿರ್ಮಾಪಕರು. ‘ಉಪು್ಪ ಹುಳಿ ಖಾರ’ ಚಿತ್ರದಲ್ಲಿ ನಟಿಸಿದ್ದ ಶರತ್ ಮತ್ತು ವಿಷ್ಣು ಈ ಮೂಲಕ ಬಾಲಿವುಡ್​ಗೆ ಪರಿಚಿತಗೊಳ್ಳುತ್ತಿದ್ದಾರೆ. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡುವ ನಿರ್ಮಾಪಕ ರಮೇಶ್ ರೆಡ್ಡಿ, ‘ಊರ್ವಶಿ ರೌತೇಲ ನಾಯಕಿಯಾಗಿ ನಟಿಸಿರುವ ಹಿಂದಿ ಸಿನಿಮಾದ ಕೆಲಸಗಳು ಮುಗಿದಿವೆ. ವಾರಾಣಸಿ, ಲಕ್ನೋ, ನೋಯ್ಡಾದಲ್ಲಿ 45 ದಿನಗಳ ಚಿತ್ರೀಕರಣ ಮಾಡಿದ್ದೇವೆ. 2021ರ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಸಿನಿಮಾ ಬಿಡುಗಡೆ ಮಾಡಲಿದ್ದೇವೆ’ ಎನ್ನುತ್ತಾರೆ.