ಸಿನಿವಾಣಿ

ಮತ್ತೆ ಬದಲಾದ 'ರವಿ-ಚಂದ್ರ' ... ಫೈನಲ್​ ಆಗಿ 'ತ್ರಿಶೂಲಂ' ಎಂಬ ಹೆಸರು ಫಿಕ್ಸ್​

ರವಿಚಂದ್ರನ್​ ಮತ್ತು ಉಪೇಂದ್ರ ಅಭಿನಯದಲ್ಲಿ ಕಳೆದ ವರ್ಷ ಪ್ರಾರಂಭವಾಗಿದ್ದ 'ರವಿ-ಚಂದ್ರ'ದ ಹೆಸರು ಬದಲಾಗಿದ್ದು ನೆನಪಿರಬಹುದು. ಕಳೆದ ತಿಂಗಳಷ್ಟೇ ಈ ಚಿತ್ರಕ್ಕೆ 'ವೇದ-ವ್ಯಾಸ' ಎಂಬ ಹೆಸರನ್ನು ಇಡಲಾಗಿದೆ ಎಂಬ ಸುದ್ದಿಯಾಗಿತ್ತು. ಖುದ್ದು ಉಪೇಂದ್ರ ಅವರು 'ವಿಜಯವಾಣಿ' ಜತೆಗೆ ಮಾತನಾಡುತ್ತಾ, ಚಿತ್ರದ ಹೆಸರು ಬದಲಾಗಿದೆ ಎಂದು ಹೇಳಿದ್ದರು.

ಈಗ ಆ ಹೆಸರು ಮತ್ತೊಮ್ಮೆ ಬದಲಾಗಿದೆ. ಯಾವ ಕಾರಣಕ್ಕೆ 'ವೇದ-ವ್ಯಾಸ' ಎಂಬ ಹೆಸರನ್ನು ಬದಲಾಯಿಸಲಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ, ಇದೀಗ ಚಿತ್ರಕ್ಕೆ 'ತ್ರಿಶೂಲಂ' ಎಂಬ ಹೆಸರು ಫೈನಲ್​ ಆಗಿದೆ. ಅಷ್ಟೇ ಅಲ್ಲ, ಈ ಕುರಿತಾಗಿ ಚಿತ್ರದ ಪೋಸ್ಟರ್​ ಸಹ ಬಿಡುಗಡೆಯಾಗಿದೆ.

ಪೋಸ್ಟರ್​ ಬಿಡುಗಡೆಯಾಗಿರುವುದಷ್ಟೇ ಅಲ್ಲ, ಚಿತ್ರದ ಟೀಸರ್​ ಸಹ ಬಿಡುಗಡೆಯಾಗಿದ್ದು, ನಾಳೆ (ಸೆಪ್ಟೆಂಬರ್​ 18) ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಟೀಸರ್ ಬಿಡುಗಡೆಯಾಲಿದೆ. ನಾಳೆ ಸಂಜೆ 6.30ಕ್ಕೆ ನಟ-ನಿರ್ದೇಶಕ ರಕ್ಷಿತ್​ ಶೆಟ್ಟಿ ಈ ಟೀಸರ್​ ಬಿಡುಗಡೆ ಮಾಡಲಿದ್ದಾರೆ.

ಅಂದಹಾಗೆ, 'ತ್ರಿಶೂಲಂ' ಚಿತ್ರವು ತೆಲುಗಿನ 'ಬಲುಪು' ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರದಲ್ಲಿದ್ದ ತಂದೆ-ಮಗನ ಪಾತ್ರಗಳನ್ನು, ಇಲ್ಲಿ ಅಣ್ಣ-ತಮ್ಮನಾಗಿ ಬದಲಾಯಿಸಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ಪ್ರಕಾಶ್​ ರೈ ಮತ್ತು ರವಿತೇಜ, ಅಪ್ಪ-ಮಗನಾಗಿ ಕಾಣಿಸಿಕೊಂಡಿದ್ದರು. ಇಲ್ಲಿ ರವಿಚಂದ್ರನ್​ ಮತ್ತು ಉಪೇಂದ್ರ, ಅಣ್ಣ-ತಮ್ಮನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಈ ಚಿತ್ರವನ್ನು ಹಿರಿಯ ನಿರ್ದೇಶಕ ಓಂಪ್ರಕಾಶ್​ ರಾವ್​ ನಿರ್ದೇಶಿಸುತ್ತಿದ್ದು, ಇದು ಅವರ ನಿರ್ದೇಶನದ 47ನೇ ಚಿತ್ರ ಎಂಬುದು ವಿಶೇಷ. ಶಾನ್ವಿ ಶ್ರೀವಾತ್ಸವ್​ ಮತ್ತು ನಿಮಿಕಾ ರತ್ನಾಕರ್​ ಇಬ್ಬರೂ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.