ಸಿನಿವಾಣಿ

ವಿದೇಶೀ ವಿಚಾರವನ್ನೂ ತಿರಸ್ಕರಿಸಿ ... ಉಪೇಂದ್ರ ಹೀಗೆ ಕರೆ ನೀಡಿದ್ದು ಯಾಕೆ?

ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮ್ಮದೇ ರೀತಿಯಲ್ಲಿ ಹಲವು ಐಡಿಯಾಗಳನ್ನು ನೀಡಿದ್ದರು ‘ರಿಯಲ್ ಸ್ಟಾರ್’ ಉಪೇಂದ್ರ. ಈಗ ಅವರು, ಸ್ವದೇಶೀ ವಿಚಾರ ಪುರಸ್ಕರಿಸಿ ಮತ್ತು ವಸ್ತು ಖರೀದಿಸಿ ಎಂದು ಕರೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯವಾಗಿರುವ ಉಪೇಂದ್ರ ಅವರು, ಸ್ವದೇಶೀ ಚಳವಳಿಗೆ ಕರೆ ನೀಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶೀ ಉತ್ಪನ್ನಗಳನ್ನೇ ಬಳಸುವಂತೆ ಕರೆ ನೀಡಿದ್ದರು. ಈಗ ಉಪೇಂದ್ರ ಸಹ ಅದನ್ನೇ ಹೇಳಿದ್ದಾರೆ. ವಿದೇಶೀ ವಸ್ತುಗಳನ್ನು ಮಾತ್ರವಲ್ಲ, ವಿಚಾರವನ್ನೂ ತಿರಸ್ಕರಿಸಿ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ರೋಗ ಬರೋದು ದೇಹಕ್ಕೆ ಎಂದು ವಿದೇಶೀ ಶ್ರೀಮಂತ ಬುದ್ಧಿಜೀವಿಗಳು ತಿಳಿದುಕೊಂಡಿದ್ದಾರೆ ಮತ್ತು ಹೇಳಿದ್ದಾರೆ. ಅದನ್ನು ನಾವೂ ನಂಬಿದ್ದೀವಿ. ಆದರೆ, ರೋಗ ಬರೋದು ದೇಹಕ್ಕಲ್ಲ, ಮನಸಿಗೆ ಅಂತ ನಮ್ಮ ದೇಶದ ಎಷ್ಟೋ ಜನ ಸಾಧು-ಸನ್ಯಾಸಿಗಳು ಹೇಳಿದ್ದು ನಾವು ಮರೆತುಬಿಟ್ಟಿದ್ದೀವಿ. ವಿದೇಶೀ ವಸ್ತುಗಳನ್ನು ಮಾತ್ರವಲ್ಲ, ವಿಚಾರವನ್ನೂ ತಿರಸ್ಕರಿಸಿ. ಸ್ವದೇಶೀ ವಿಚಾರ ಪುರಸ್ಕರಿಸಿ ಮತ್ತು ವಸ್ತು ಖರೀದಿಸಿ ...’ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಅವರ ಈ ಕರೆಗೆ ಹಲವರು ಸ್ಪಂದಿಸಿದ್ದಾರೆ. ಇದು ಒಳ್ಳೆಯ ವಿಚಾರ ಎಂದು ಪ್ರತಿಕ್ರಯಿಯಿಸಿದ್ದಾರೆ.