ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಉಪೇಂದ್ರ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ "ರಕ್ತ ಕಾಶ್ಮೀರ' ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ಭಾರತದ ಹೊರಗೆ ಮಾತ್ರವಲ್ಲದೇ ಒಳಗೂ ಇರುವ ಭಯೋತ್ಪಾದನೆಯ ಸುತ್ತ ಕಥೆ ಸಾಗುತ್ತದೆ. ರಾಜೇಂದ್ರ ಸಿಂಗ್ ಬಾಬು ಕಥೆ, ಚಿತ್ರಕಥೆ ಮತ್ತು ಎಂ.ಎಸ್.ರಮೇಶ್ ಸಂಭಾಷಣೆ, ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ "ರಕ್ತ ಕಾಶ್ಮೀರ' ಮೂಡಿಬರಲಿದೆ. ಉಪೇಂದ್ರ, ರಮ್ಯಾ ಜತೆ ದೊಡ್ಡಣ್ಣ, ಓಂಪ್ರಕಾಶ್ ರಾವ್, ಕುರಿ ಪ್ರತಾಪ್, ತೆಲುಗು ನಟಿ ಅನಿಲ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ.
ಇದು ಹಳೆಯ ಚಿತ್ರವಲ್ಲ:
ಅಂದಹಾಗೆ, 2005ರ "ಗೌರಮ್ಮ' ಮತ್ತು 2012ರಲ್ಲಿ ರಿಲೀಸ್ ಆದ "ಕಠಾರಿವೀರ ಸುರಸುಂದರಾಂಗಿ' ಚಿತ್ರಗಳ ಬಳಿಕ ಉಪೇಂದ್ರ ಮತ್ತು ರಮ್ಯಾ ಮತ್ತೆ ಒಟ್ಟಿಗೆ ನಟಿಸಿರಲಿಲ್ಲ. 2008ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ "ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರದಲ್ಲಿ ನಟಿಸಿದ್ದರು. 2009ರಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತಾದರೂ, ಕಾರಣಾಂತರಗಳಿಂದ ಚಿತ್ರ ರಿಲೀಸ್ ಆಗಿರಲಿಲ್ಲ. ಅದೇ ಚಿತ್ರವನ್ನು ಇದೀಗ "ರಕ್ತ ಕಾಶ್ಮೀರ' ಎಂಬ ಹೊಸ ಟೈಟಲ್ನಲ್ಲಿ ತೆರೆಗೆ ತರುತ್ತಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಅದನ್ನು ರಾಜೇಂದ್ರ ಸಿಂಗ್ ಬಾಬು ಅಲ್ಲಗಳೆದಿದ್ದಾರೆ.
""ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರವನ್ನು ಕಾರಣಾಂತರಗಳಿಂದ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಕಳೆದ ಒಂದು ವರ್ಷದಿಂದ "ರಕ್ತ ಕಾಶ್ಮೀರ' ಚಿತ್ರದ ಕೆಲಸಗಳಲ್ಲಿ ನಾನು ಬಿಜಿಯಿದ್ದೆ. "ಭೀಮೂಸ್...'ನ ಯಾವ ದೃಶ್ಯಗಳೂ "... ಕಾಶ್ಮೀರ'ದಲ್ಲಿಲ್ಲ. ಇದೇ ಹೊಸ ಹಿನ್ನೆಲೆ, ಹೊಸ ಕಥೆ. ಎಲ್ಲವೂ ಅಂದುಕೊಂಡಂತಾದರೆ ಇದೇ ತಿಂಗಳ 20ರಂದು ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಇದೆ' ಎಂದು ಮಾಹಿತಿ ನೀಡಿದ್ದಾರೆ. ಇನ್ನು ಉಪೇಂದ್ರ ನಟಿಸಿ, ನಿರ್ದೇಶಿಸಿರುವ "ಯುಐ' ಚಿತ್ರವೂ ಇದೇ 20ರಂದು ತೆರೆಗೆ ಬರಲಿದೆ.