ಸಿನಿವಾಣಿ

UI Movie Review ; ಕಾಮ್​ಡೌನ್​, ಕೂಲ್​, ಕಾನ್ಸನ್​ಟ್ರೇಟ್​...

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ಯುಐ

ನಿರ್ದೇಶನ: ಉಪೇಂದ್ರ

ನಿರ್ಮಾಣ: ಜಿ. ಮನೋಹರನ್​, ಕೆ.ಪಿ. ಶ್ರೀಕಾಂತ್​

ತಾರಾಗಣ: ಉಪೇಂದ್ರ, ರೀಷ್ಮಾ ನಾಣಯ್ಯ, ಅಚ್ಯುತ್​ ಕುಮಾರ್​, ರವಿಶಂಕರ್​, ನಿಧಿ ಸುಬ್ಬಯ್ಯ, ಮುರಳಿ ಶರ್ಮಾ, ಸಾಧು ಕೋಕಿಲ, ಕಾಕ್ರೋಚ್​ ಸುಧಿ ಮುಂತಾದವರು.

ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ, ನೀವು ದಡ್ಡರಾಗಿದ್ರೆ ಈ ಚಿತ್ರ ಪೂರ್ತಿ ನೋಡಿ... ಹೀಗೆ ಶುರುವಾಗುವ "ಯುಐ' ಟೈಟಲ್​ ಕಾರ್ಡ್​ ಪೂರ್ತಿ ಭಿನ್ನ, ವಿಭಿನ್ನ ಮೆದುಳಿನ ಚಿತ್ತಾರಗಳನ್ನು ತೋರಿಸಲಾಗುತ್ತದೆ. ಆಗ ಬುದ್ಧಿವಂತರಿಗೆ ಮಾತ್ರ ಸಿನಿಮಾ ಮಾಡಿದ್ದ ಉಪೇಂದ್ರ ಈಗ ದಡ್ಡರಿಗೆ ಮಾತ್ರ ಸಿನಿಮಾ ಮಾಡಿದ್ದಾರೆ. ಮೊದಲಿನಿಂದಲೂ ಉಪೇಂದ್ರ ನಿರ್ದೇಶನದ ಬಗ್ಗೆ ಪ್ರೇಕ್ಷಕರಲ್ಲಿ ಎಲ್ಲಿಲ್ಲದ ಕುತೂಹಲ, ನಿರೀಕ್ಷೆ ಒಂಬತ್ತು ವರ್ಷಗಳ ನಂತರ "ಯುಐ'ಗೆ ಆ್ಯಕ್ಷನ್​-ಕಟ್​ ಹೇಳಿರುವ ಕಾರಣ ಈ ಸಿನಿಮಾ ಬಗ್ಗೆ ಅದು ದುಪ್ಪಟ್ಟಾಗಿತ್ತು.

ಅದು "ಯುಐ' ಸಿನಿಮಾ. ಚಿತ್ರಗಳಿಗೆ ಯು, ಯುಎ, ಎ ಸರ್ಟಿಫಿಕೇಟ್​ ಸಿಗುವುದು ಸಾಮಾನ್ಯ. ಆದರೆ, ಈ ಚಿತ್ರಕ್ಕೆ "ಯುಐ' ಪ್ರಮಾಣಪತ್ರ ನೀಡಿರುತ್ತಾರೆ. ನೋಡಿದ ಕೆಲ ಪ್ರೇಕ್ಷಕರಿಗೆ ಜೀವನದ ಫೋಕಸ್​ ಸಿಗುತ್ತದೆ. ಹಾಗೆ ಸಿಕ್ಕವರು ಎಲ್ಲವನ್ನೂ ತ್ಯಜಿಸಿ, ಎಲ್ಲ ಸಂಬಂಧ, ಆಸೆ, ಸುಖವನ್ನೂ ತ್ಯಜಿಸಿದರೆ, ಫೋಕಸ್​ ಸಿಗದ ಕೆಲವರು ಮತ್ತೊಮ್ಮೆ, ಮಗದೊಮ್ಮೆ ಶೋ ನೋಡಲು ಟಿಕೆಟ್​ ಖರೀದಿಸುತ್ತಾರೆ. ಇನ್ನು ಹಲವರು ಈ ಚಿತ್ರದಿಂದ ಸಮಾಜದ ಸ್ವಾಸ್ಥ್ಯವೇ ಹಾಳಾಗುತ್ತಿದೆ ಎಂದು ಪ್ರತಿಭಟನೆಯ ಹಾದಿ ಹಿಡಿಯುತ್ತಾರೆ. ಮತ್ತೊಂದೆಡೆ ಈ ಸಿನಿಮಾ ನೋಡಿದ ವಿಮರ್ಶಕನೊಬ್ಬ ವಾರವಾದರೂ ಅದರ ವಿಮರ್ಶೆ ಬರೆಯಲಾಗದೇ, ನಿರ್ದೇಶಕನನ್ನು ಹುಡುಕಿಕೊಂಡು ಹೋಗುತ್ತಾನೆ. ಆಗ ನಿಜವಾದ "ಯುಐ' ಪ್ರಪಂಚ ತೆರೆದುಕೊಳ್ಳುತ್ತದೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಮಹಿಳೆಗೆ ಜನಿಸುವ ಮಗು ಸತ್ಯ. ಶ್ವೇತವಸ್ತ್ರಧಾರಿ ಸತ್ಯ (ಉಪೇಂದ್ರ) ಹೆಸರಿಗೆ ತಕ್ಕಂತೆ ಸತ್ಯವಂತ. ಹೆಲ್ಪ್​ಲೈನ್​ ಮೂಲಕ ಜನರಿಗೆ ಸಹಾಯ ಮಾಡುತ್ತಿರುತ್ತಾನೆ. ಜೇಬುಗಳ್ಳ ಕತ್ರಿ ಸೀನ (ರವಿಶಂಕರ್​), ಕುಲಕಸುಬಿನ ಮೂಲಕ ಹಣ ಸಂಪಾದಿಸಿಯೇ ರಾಜಾ ವಾಮನ ರಾವ್​ಆಗಿ ಆ ಪ್ರದೇಶದ ನಾಯಕನಾಗಿರುತ್ತಾನೆ. ಸತ್ಯನಿಗೆ ಸಿಗುತ್ತಿರುವ ಜನಬೆಂಬಲದಿಂದ ಸೀನನ ಕಣ್ಣು ಅವನ ಮೇಲೆ ಬೀಳುತ್ತದೆ. ಸತ್ಯನನ್ನು ಸುಳ್ಳಾಗಿಸುವ ಶಪಥ ಮಾಡುತ್ತಾನೆ. ಆಗ ಸತ್ಯನನ್ನು ಕಲ್ಕಿ ಭಗವಾನ್​ (ಉಪೇಂದ್ರ) ರಸುತ್ತಾನೆ. ಆದರೆ, ಈ ಕಡುಗಪು$್ಪ ಬಟ್ಟೆ ಧರಿಸುವ ಕಲ್ಕಿ ವೇಷಧಾರಿ ಆ ಕತ್ರಿ ಸೀನನಿಗಿಂತ ದುಷ್ಟ ಎಂಬುದು ನಂತರ ತಿಳಿಯುತ್ತದೆ. ಹಾಗಾದರೆ, ಕಲ್ಕಿ ಸತ್ಯನನ್ನು ರಸುವುದೇಕೆ? ಇವತ್ತಿನ ಸತ್ಯನ, ಹಿಂದಿನ ಕಲ್ಕಿಯ ಮುಂದಿನ ಭವಿಷ್ಯವೇನು? "ಯುಐ' ನೋಡಿ...

ಇಡೀ ವಿಶ್ವವನ್ನೇ ಒಂದು ಜಾಗದಲ್ಲಿ ಸೃಷ್ಟಿಸಿರುವ ಉಪೇಂದ್ರ ಅಲ್ಲಿ ಎಲ್ಲ ದೇಶಗಳ, ವರ್ಗ, ಜಾತಿ, ಧರ್ಮ, ಬಣ್ಣದ ಜನರನ್ನೂ ಸೇರಿಸಿದ್ದಾರೆ. ಅಡಂ ಮತ್ತು ಈವ್​ ಬಂದು ಹೋಗುತ್ತಾರೆ. ಅಫ್ಘಾನಿಸ್ತಾನದಲ್ಲಿ ರಷಿಯಾ ಮತ್ತು ಅಮೆರಿಕಾ ದೇಶಗಳ ಮೇಲಾಟವಿದೆ. 40 ಪರ್ಸೆಂಟ್​, 80 ಪರ್ಸೆಂಟ್​ ಕಮಿಷನ್​ ಗಲಾಟೆಯಿದೆ. ಜಾತಿಗಣತಿ, ಧರ್ಮ ಸಂಸ್ಥಾಪನೆ, ರಾಜಕೀಯ, ಸಮಾಜ, ಮೌಢ್ಯ, ಬುದ್ಧ, ಬಸವಣ್ಣ, ಜೀಸಸ್​ ಹೀಗೆ ಹಲವು ವಿಷಯಗಳಿವೆ. ಅದರ ಜತೆಗೊಂದು ಲವ್​ಸ್ಟೋರಿ, ಮದರ್​ ಸೆಂಟಿಮೆಂಟ್​, ೈಟ್​ಗಳು, ಆಗಾಗ ಹೆಣ್ಣುಧ್ವನಿಯೊಂದರ ಉನ್ಮಾದ... ಏನೇನೋ ಇದೆ. ಇಷ್ಟೆಲ್ಲಾ ವಿಷಯಗಳಿದ್ದರೂ, ಅವುಗಳ ಹಿಂದೆ ಇನ್ನೇನೋ ಹೇಳುವ ಪ್ರಯತ್ನ ಮಾಡಿದ್ದಾರೆ ಉಪೇಂದ್ರ. ಸಮಸ್ಯೆಗಳ ಬಗ್ಗೆ ನೇರವಾಗಿ ಹೇಳಿರುವ ಅವರು, ಮೊಬೈಲ್​ ರೀಲ್ಸ್​, ಕಿರುಚಾಟದ ನ್ಯೂಸ್​ನಲ್ಲಿ ಬಿಜಿಯಿರುವ ಜನರಿಗೆ, ನೀವೇ ಪರಿಹಾರ ಕಂಡುಕೊಳ್ಳಿ ಎಂದು ಅವರವರ ಭಾವಕ್ಕೆ ಬಿಟ್ಟಿದ್ದಾರೆ!

ಇಲ್ಲಿ ಉಪೇಂದ್ರ ಒನ್​ ಮ್ಯಾನ್​ ಆರ್ಮಿ. ಉಳಿದಂತೆ ರವಿಶಂಕರ್​ಗೆ ಸ್ವಲ್ಪ ಜಾಗವಿದೆಯಷ್ಟೇ. ರೀಷ್ಮಾ ಒನ್​ ಸೈಡ್​ ಲವ್​ ದಿಗಿಲು ಉಂಟು ಮಾಡಿದರೂ ಆಶ್ಚರ್ಯವಿಲ್ಲ. ತಾಂತ್ರಿಕವಾಗಿಯೂ "ಯುಐ' ಗಮನ ಸೆಳೆಯುತ್ತದೆ. ಇಂತಹ ಚಿತ್ರವನ್ನು ಉಪೇಂದ್ರ ಅವರಿಂದ ಮಾತ್ರ ಮಾಡಲು ಸಾಧ್ಯ ಅಂತನ್ನಿಸಿದರೂ ಆಶ್ಚರ್ಯವಿಲ್ಲ. "ಎ', "ಉಪೇಂದ್ರ', "ಸೂಪರ್​' ಚಿತ್ರಗಳಿಗೆ ಹೋಲಿಸಿದರೆ ಅವರಿಲ್ಲಿ ಸ್ವಲ್ಪ ಮೃದುವಾಗಿದ್ದಾರೆ. ಆದರೆ, ರೂಪಕಾರ್ಥದಲ್ಲಿ ಇಂದಿನ ವ್ಯವಸ್ಥೆ, ರಾಜಕೀಯ, ಸಮಾಜವನ್ನು ವಿಡಂಬನಾತ್ಮಕವಾಗಿ ಜನರ ಮುಂದಿಟ್ಟಿದ್ದಾರೆ. ಈಗ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ "ಟೂ ಪೀಸ್​' ಪಕ್ಕಾ ಎಂದು ಚಿವುಟಿ ಹೇಳುವ, ಎಲ್ಲ ಆಲೋಚನೆಗಳನ್ನು ಬಿಟ್ಟು ಕಾಮ್​ಡೌನ್​ಆಗಿ ಕೂಲ್​ಆಗಿ ಫೋಕಸ್​ಆಗಿ ಕಾನ್ಸನ್​ಟ್ರೇಡ್​ ಮಾಡುತ್ತಾ ಒಮ್ಮ ಒಳಗಿನ, ಹೊರಗೆ ಸಮಾಜದಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಅವುಗಳನ್ನು ಬಗ್ಗುಬಡಿದು ಗೆಲ್ಲಬೇಕು ಅಂತ ಹೇಳುವ ಪ್ರಯತ್ನ ಕೂಡ ಮಾಡಿದ್ದಾರೆ.