ಬೆಂಗಳೂರು: ಸತ್ಯ ಮತ್ತು ಮಯೂರ ಪಿಕ್ಚರ್ಸ್ ಬ್ಯಾನರ್ನಡಿ ನಿರ್ಮಾಣವಾಗುತ್ತಿರುವ 'ಅನ್ಲಾಕ್ ರಾಘವ' ಚಿತ್ರವು ಕೆಲವು ತಿಂಗಳ ಹಿಂದೆ ಪ್ರಾರಂಭವಾಗಿತ್ತು. ಅಶ್ವಿನಿ ಪುನೀತ್ ರಾಜಕುಮಾರ್ ಬಂದು ಚಿತ್ರದ ಹೆಸರು ಅನಾವರಣಗೊಳಿಸುವುದರ ಜತೆಗೆ, ಚಿತ್ರದ ಮೊದಲ ಪೋಸರ್ ಬಿಡುಗಡೆ ಮಾಡಿದ್ದರು. ಆ ನಂತರ ಶುರುವಾದ ಚಿತ್ರ, ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಚಿತ್ರವು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಮುಗಿಯಲಿದೆ.
ಈ ಚಿತ್ರದ ಕುರಿತು ಮಾತನಾಡುವ ದೀಪಕ್ ಮಧುವನಹಳ್ಳಿ, 'ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಎಂಟು ದಿನಗಳ ಕಾಲ ಕ್ಲೈಮಾಕ್ಸ್ ಚಿತ್ರೀಕರಣ ಪ್ಲಾನ್ ಮಾಡಿದ್ದು, ಅದರಲ್ಲಿ ಐದು ದಿನಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಮೂರು ದಿನಗಳಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಯಲಿದೆ. ಎರಡು ಸಾಂಗ್ ಹಾಗೂ ಟಾಕಿ ಪೋಷನ್ ಮುಗಿಸಿದ್ರೆ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗುತ್ತದೆ. ಒಟ್ಟು 50 ರಿಂದ 55 ದಿನ ಚಿತ್ರೀಕರಣ ಮಾಡಿದ್ದೇವೆ. ಎಲ್ಲಾ ಕಲಾವಿದರ ಕಾಂಬಿನೇಶನ್ನಲ್ಲಿ ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿದ್ದೇವೆ. ವಿನೋದ್ ಮಾಸ್ಟರ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ರೀತಿಯ ಪ್ರಯತ್ನ ಸಿನಿಮಾದಲ್ಲಿದೆ. ಆಕ್ಷನ್ ಜೊತೆಗೆ ಹ್ಯೂಮರ್ ಕೂಡ ಇಡೀ ಸಿನಿಮಾದಲ್ಲಿ ಬೆರೆತಿದೆ' ಎಂದು ಹೇಳುತ್ತಾರೆ.
ಒಬ್ಬ ಹೀರೋ ಆಗಿ ತನಗೆ ಬಹಳ ಮುಖ್ಯವಾದ ಸಿನಿಮಾವಿದು ಎನ್ನುವ ನಾಯಕ ಮಿಲಿಂದ್, 'ಕಮರ್ಷಿಯಲ್ ಸಿನಿಮಾ ಆದರೂ, ಜಾಸ್ತಿ ಹೊಡೆದಾಟ ಬಡಿದಾಟಕ್ಕೆ ಹೋಗಿಲ್ಲ. ಬದಲಾಗಿ ರೋಮ್ಯಾನ್ಸ್ ಮತ್ತು ಕಾಮಿಡಿ ಹೆಚ್ಚು ಒತ್ತು ನೀಡಲಾಗಿದೆ. ಮೊದಲ ಸಿನಿಮಾದಲ್ಲಿ (ವೀಕೆಂಡ್) ಪೆಟ್ಟು ತಿಂದಿದ್ದರಿಂದ, ಈ ಸಿನಿಮಾ ಮಾಡುವಾಗ ಭಯ ಇತ್ತು. ನಿರ್ದೇಶಕ ದೀಪಕ್ ಸರ್ ಅದನ್ನೆಲ್ಲ ಹೋಗಲಾಡಿಸಿ, ಸಾಕಷ್ಟು ತಿದ್ದಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎನ್ನುವ ಕಾನ್ಫಿಡೆನ್ಸ್ ಇದೆ' ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.
‘ಅನ್ಲಾಕ್ ರಾಘವ’ ಚಿತ್ರಕ್ಕೆ 'ರಾಮ ರಾಮಾ ರೇ' ಖ್ಯಾತಿಯ ಸತ್ಯಪ್ರಕಾಶ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ ಈ ಚಿತ್ರಕ್ಕಿದೆ.