ಚಿತ್ರ: ಉಗ್ರಾವತಾರ
ನಿರ್ದೇಶನ: ಗುರುಮೂರ್ತಿ
ನಿರ್ಮಾಣ: ಎಸ್.ಜಿ.ಸತೀಶ್
ತಾರಾಗಣ: ಪ್ರಿಯಾಂಕಾ ಉಪೇಂದ್ರ, ನಟರಾಜ್ ಪೆರಿ, ಪವಿತ್ರಾ ಲೋಕೇಶ್, ಸುಮನ್, ಅಜಯ್ ಹಾಗೂ ಮತ್ತಿತರರು.
ಶಿವ ಸ್ಥಾವರಮಠ
ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್‌ನಂತ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಕ್ರಮಗಳು ವಹಿಸಿವೆಯಾದರೂ, ಸಂಪೂರ್ಣ ಕಡಿವಾಣ ಬಿದ್ದಿಲ್ಲ ಎಂಬುದನ್ನು ಅಂಕಿ-ಅಂಶಗಳು ಹೇಳುತ್ತವೆ. ಈ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ, ಜವಾಬ್ದಾರಿ ವಹಿಸುವ ಕ್ರಮಗಳ ಬಗ್ಗೆ ತಿಳಿಸಲು ನಿರ್ದೇಶಕ ಗುರುಮೂರ್ತಿ ‘ಉಗ್ರಾವತಾರ’ ಮೂಲಕ ಪ್ರಯತ್ನಿಸಿದ್ದಾರೆ.
ಹುಬ್ಬಳ್ಳಿಯ ಅಪರಾಧ ಜಗತ್ತಿನ ಮೂಲಕ ಕಥೆ ಆರಂಭವಾಗುತ್ತದೆ. ಕಾನ್‌ಸ್ಟೆಬಲ್ ಆಗಿ ವೃತ್ತಿ ಆರಂಭಿಸುವ ದುರ್ಗಾಗೆ (ಪ್ರಿಯಾಂಕಾ) ನಗರದಲ್ಲಿ ಬೀಡುಬಿಟ್ಟಿರುವ ಭಯೋತ್ಪಾದಕರನ್ನು ಮಟ್ಟಹಾಕುವ ಚಾಲೆಂಜ್ ಎದುರಾಗುತ್ತದೆ. ಭಯೋತ್ಪಾದಕರ ದಾಳಿಗೆ ಇಡೀ ತಂಡ ಬೆಚ್ಚಿದರೂ, ದುರ್ಗಿ ಮಾತ್ರ ಸಾಹಸದಿಂದ ಮುನ್ನುಗ್ಗಿ ಅವರನ್ನು ಸದೆಬಡಿಯುತ್ತಾಳೆ. ಆಕೆಯ ಸಾಹಸ ಮೆಚ್ಚಿ ಪೊಲೀಸ್ ಇಲಾಖೆ ಆಕೆಗೆ ಉನ್ನತ ಪೊಲೀಸ್ ಅಧಿಕಾರಿಯಾಗಿ ಬಡ್ತಿ ನೀಡುತ್ತದೆ. ಬಳಿಕ, ಆರಂಭವಾಗುವುದೇ ದುರ್ಗಿಯ ಹೊಸ ಅವತಾರ. ದುಷ್ಟರು, ಭ್ರಷ್ಟರ ವಿರುದ್ಧ ತಿರುಗು ಬೀಳುವ ದುರ್ಗಿಯ ಅವತಾರ ನೋಡಿ ಇಡೀ ಹುಬ್ಬಳ್ಳಿಯ ಅಪರಾಧ ಜಗತ್ತು ಭಯಪಡುತ್ತದೆ. ಅದೇ ಸಮಯದಲ್ಲಿ ದುರ್ಗಾ ಬೆಂಗಳೂರಿಗೆ ಟ್ರಾನ್ಸ್‌ರ್ ಆಗುತ್ತಾಳೆ. ಈ ಮಾಯಾನಗರಿಯಲ್ಲಿ ದುರ್ಗಿಯ ಹೋರಾಟ ಹೇಗಿರುತ್ತೆ ಎಂಬುದೇ ‘ಉಗ್ರಾವತಾರ’ ಕಥೆ.
ಇಡೀ ಚಿತ್ರ ಆ್ಯಕ್ಷನ್ ರೂಪದಲ್ಲಿದೆ. ಕಥೆಗಿಂತ ಇಲ್ಲಿ ಪ್ರಿಯಾಂಕಾರ ಆರ್ಭಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಿರ್ದೇಶಕ ಗುರುಮೂರ್ತಿ ಒಂದೇ ಕಥೆಯಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದಾರೆ. ಆಳವಾಗಿ ಹೋಗಬಹುದಾದ ವಿಚಾರಗಳನ್ನು ಮೇಲೆ ತೇಲಿಸಿದ್ದಾರೆ ಎಂದೆನಿಸುತ್ತದೆ. ಈ ಮಧ್ಯೆ, ಮಹಿಳೆಯರು ವಹಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿರುವುದು ವಿಶೇಷ. ಪೊಲೀಸ್ ಅಧಿಕಾರಿಯಾಗಿ ಪ್ರಿಯಾಂಕಾ ಉಪೇಂದ್ರ ಖಡಕ್ ಕಾಣಿಸಿಕೊಂಡಿದ್ದಾರೆ. ಸಾಹಸ ದೃಶ್ಯಗಳನ್ನು ಅದ್ದೂರಿಯಾಗಿ ತೋರಿಸಲಾಗಿದ್ದು, ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಟರಾಜ್ ಪೆರಿ ಮುಖ್ಯಪಾತ್ರದಲ್ಲಿದ್ದು, ಸುಮನ್, ಅಜಯ್, ಪವಿತ್ರಾ ಲೋಕೇಶ್, ಕಾಕ್ರೋಚ್ ಸುಧಿ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ವೀಣಾ ನಂದಕುಮಾರ್ ಛಾಯಾಗ್ರಹಣದಲ್ಲಿ ಸಾಹಸ ದೃಶ್ಯಗಳು ರಿಚ್ಚಾಗಿ ಕಾಣಿಸುತ್ತವೆ. ಸಮಾಜದಲ್ಲಿ ಹೆಣ್ಣನ್ನು ಗೌರವಿಸಬೇಕು ಎಂದು ಸಂದೇಶ ನೀಡುವ ‘ಉಗ್ರಾವತಾರ’ವನ್ನು ಒಮ್ಮೆ ನೋಡಲಡ್ಡಿಯಿಲ್ಲ.