ಬೆಂಗಳೂರು: ಉದಯ ಟಿವಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ನಂದಿನಿ’ ಧಾರಾವಾಹಿ 850 ಕಂತು ಪೂರೈಸಿ ಮುನ್ನುಗ್ಗುತ್ತಿದೆ. ಕುತೂಹಲಕಾರಿ ಕಥೆಯಿಂದ ಆರಂಭದಿಂದಲೂ ಪ್ರೇಕ್ಷಕರನ್ನು ರಂಜಿಸಿ ತನ್ನತ್ತ ಸೆಳೆಯುವಲ್ಲಿ ಧಾರಾವಾಹಿ ಯಶಸ್ವಿ ಆಗಿದೆ. ಅಲ್ಲದೆ, ಇದೀಗ ಈ ಧಾರಾವಾಹಿಗಾಗಿ ನಾಗಲೋಕವನ್ನೇ ಸೃಷ್ಟಿಸಲಾಗಿದೆ.
ಮಾಗಡಿ ರಸ್ತೆಯ ಜೆ.ಎಮ್ಸ್ಟುಡಿಯೋನಲ್ಲಿ ವಿಶೇಷ ಸೆಟ್ ಹಾಕಲಾಗಿದೆ. ‘ಮಲ್ಲ’, ‘ಕಬೀರ’, ‘ಅಹಂ ಪ್ರೇಮಾಸ್ಮಿ’, ‘ಮಫ್ತಿ’ ಸೇರಿ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ ರಾಘವೇಂದ್ರ ರಾವ್ ಸೆಟ್ ನಿರ್ವಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಗೆ ರಮೇಶ್ ಅರವಿಂದ್ ನಿರ್ವಪಕರು. ಇವರೇ ನಾಗಲೋಕದ ಕಲ್ಪನೆಯನ್ನು ಮೊದಲು ಕಂಡದ್ದು. ‘ನಂದಿನಿ’ ವಿಭಿನ್ನ ಕಥೆ ಹೊಂದಿದೆ. ‘ಜನನಿ ಶಾಶ್ವತವಾಗಿ ಕಲ್ಲಾಗಿ ಕಾಡುಮಲೆ ದೇವಸ್ಥಾನದಲ್ಲಿ ಅನುಷ್ಠಾನವಾಗುವ ವೇಳೆ, ಕಾಲಚಕ್ರ ರಕ್ಷಿಸುವಲ್ಲಿ ಸೋಲುತ್ತಾಳೆ. ಒಂದು ಕಾಲಚಕ್ರ ದುಷ್ಟೆ ಶರಬ ಪಾಲಾದರೆ, ಇನ್ನೊಂದನ್ನು ಮಾಟಗಾರ ನಂಬೂದರಿ ಪಡೆಯುತ್ತಾನೆ. ತನ್ನ ಕೊನೆಯ ಕರ್ತವ್ಯ ಪೂರೈಸಲಾಗದೆ ಜನನಿ ಆತ್ಮವಾಗಿ ‘ನಂದಿನಿ’ ಎಂಬ ಹುಡುಗಿಯ ದೇಹ ಸೇರಿ ಕಾಲಚಕ್ರ ಹಿಂಪಡೆಯಲು ಹೋರಾಡುತ್ತಾಳೆ. ಈ ವೇಳೆ ನಂದಿನಿಯನ್ನು ಸಾಯಿಸಲು ಶರಬ ಮುಂದಾಗುತ್ತಾಳೆ. ಈ ಕೃತ್ಯಕ್ಕೆ ನಾಗಲೋಕವೇ ಭಯಭೀತ ಆಗುತ್ತದೆ.
ನಾಗಲೋಕದಲ್ಲಿ ಎರಡು ತಂಡ.. ವಾಸುಕಿ ನಾಗಗಳು ನ್ಯಾಯಯುತ, ತಕ್ಷಕ ನಾಗಗಳು ಸ್ವಾರ್ಥಿ. ನಾಗಲೋಕದ ಸಿಂಹಾಸನಕ್ಕೆ ತಕ್ಷಕ ನಾಗಗಳು ಸೆಣಸುತ್ತಿರುತ್ತವೆ. ನಾಗಲೋಕಕ್ಕೂ ನಂದಿನಿಗೂ ಇರುವ ಸಂಬಂಧ, ನಾಗಲೋಕದ ಅಧಿಪತಿಯಾಗಲು ಶರಬ ಮಾಡುವ ತಂತ್ರ.. ಹೀಗೆ ಎಲ್ಲವನ್ನೂ ರೋಚಕವಾಗಿ ತೋರಿಸುತ್ತ ಧಾರಾವಾಹಿ ಸಾಗಿದೆ. ಹಿರಿಯ ನಟ ಶಿವರಾಂ, ಕಾವ್ಯಾ ಶಾಸ್ತ್ರಿ, ರೇಖಾ ಪ್ರಮುಖ ತಾರಾವರ್ಗದಲ್ಲಿದ್ದಾರೆ. ನೂತನ ನಾಗಲೋಕದೊಂದಿಗೆ ವಿಶೇಷ ಸಂಚಿಕೆಗಳು ಉದಯ ಟಿವಿ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಪ್ರತಿರಾತ್ರಿ 8.30ರಿಂದ 9.30ರವರೆಗೆ ಪ್ರಸಾರ ಆಗಲಿವೆ.