ಬೆಂಗಳೂರು : ಈ ವರ್ಷ ತೆರೆಕಂಡ ಉತ್ತರ ಕರ್ನಾಟಕ ಸೊಗಡಿನ ‘ಪಪ್ಪಿ’, ‘ಹೆಬ್ಬುಲಿ ಕಟ್’ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿವೆ. ಇದೀಗ ಇದೇ ಹಾದಿಯಲ್ಲಿ ಮತ್ತೊಂದು ಜವಾರಿ ಚಿತ್ರ ‘ಉಡಾಳ’ ತೆರೆಗೆ ಬರಲು ಸಜ್ಜಾಗಿದೆ. ಟೈಟಲ್‌ನಿಂದಲೇ ಗಮನ ಸೆಳೆದಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್ ‘ಗರಡಿ’ಯಲ್ಲಿ ಪಳಗಿರುವ ವಿಜಯಪುರ ಮೂಲದ ಅಮೋಲ್ ಪಾಟೀಲ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ದಾವಣಗೆರ ಮೂಲದ ರವಿ ಶಾಮನೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಪದವಿಪೂರ್ವ’ ನಟ ಪೃಥ್ವಿ ಶಾಮನೂರು, ‘ಆರಾಮ್ ಅರವಿಂದ ಸ್ವಾಮಿ’ ಖ್ಯಾತಿಯ ಹೃತಿಕಾ ಶ್ರೀನಿವಾಸ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಚೊಚ್ಚಲ ನಿರ್ದೇಶನದ ಬಗ್ಗೆ ಅಮೋಲ್, ‘ಸಿನಿಮಾ ಮೂಲಕ ನಮ್ಮ ಭಾಗದ ಸೊಗಡನ್ನು ಎತ್ತಿ ಹಿಡಿಯಬೇಕು ಎನ್ನುವುದು ಮೊದಲಿನಿಂದಲೂ ಆಸೆ. ಅದರ ಭಾಗವೇ ‘ಉಡಾಳ’. ಉತ್ತರ ಕರ್ನಾಟಕದ ಹದಿಹರೆಯದ ಹುಡುಗರ ಬದುಕನ್ನು ಆಧರಿಸಿ, ಅಚ್ಚುಕಟ್ಟಾದ ಜವಾರಿ ಕಥೆ ಹೇಳಿದ್ದೇವೆ. ಹೆಚ್ಚು ಕಾಮಿಡಿ, ಜತೆಗೆ ಸ್ವಲ್ಪ ಲವ್, ಆ್ಯಕ್ಷನ್, ಎಮೋಷನ್ಸ್ ಕೂಡ ಕಾಣಬಹುದು. ಇದೊಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಮೂವಿ. ನಮ್ಮ ಕಥೆಗೆ 21 ವರ್ಷದ ಜವಾರಿ ಹುಡುಗ ಬೇಕಾಗಿತ್ತು. ಆಗ ನಮಗೆ ಪೃಥ್ವಿ ಸಿಕ್ಕರು. ಇನ್ನು ನಾಯಕಿ ಪಾತ್ರಕ್ಕೆ 50 ಜನ ಆಡಿಷನ್ ಮಾಡಿದರೂ, ನಮಗೆ ಹೃತಿಕಾ ರ್ಪೆಕ್ಟ್ ಅನಿಸಿತು. ಹೃತಿಕಾ ಕೂಡ ಉತ್ತರ ಕರ್ನಾಟಕ ಶೈಲಿ ಭಾಷೆ ಕಲಿತು, ಪಾತ್ರಕ್ಕೆ ಜೀವ ತುಂಬಿದ್ದಾರೆ. ಸುಮಾರು 45 ದಿನಗಳ ಕಾಲ ಬಹುತೇಕ ವಿಜಯಪುರದಲ್ಲಿ ಶೂಟಿಂಗ್ ನಡೆಸಿದ್ದೇವೆ. ಇನ್ನು ಉತ್ತರ ಕರ್ನಾಟಕ ಕಥೆ ಎಂದರೆ ಬೈಗುಳದ ಡೈಲಾಗ್ಸ್ ಹೆಚ್ಚು ಎಂಬ ಮನೋಭಾವವನ್ನು ನಮ್ಮ ಕಥೆ ಬ್ರೇಕ್ ಮಾಡುತ್ತದೆ. ಇದೇ ನವೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಯೋಚನೆಯಿದೆ’ ಎಂದು ಮಾಹಿತಿ ನೀಡುತ್ತಾರೆ. ಪೃಥ್ವಿ, ಹೃತಿಕಾ ಜತೆ ಬಲ ರಾಜವಾಡಿ, ಮಾಳು ನಿಪನಾಳ, ವಾದಿರಾಜ ಬಬ್ಲಾದಿ, ರೇಣುಕಾ ಸೇರಿ ಹಲವು ಉತ್ತರ ಕರ್ನಾಟಕ ಪ್ರತಿಭೆಗಳು ಕಲಾಬಳಗದಲ್ಲಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ, ಚೇತನ್ ಡ್ಯಾವಿ ಸಂಗೀತ, ಶಿವಶಂಕರ್ ನೂರಂಬಡ ಛಾಯಾಗ್ರಹಣ ಚಿತ್ರಕ್ಕಿದೆ.