ತಮ್ಮ ಹಿಂದಿನ ಎರಡು ಚಿತ್ರಗಳಂತೆ ಈ ಬಾರಿ ಸಹ ಮಂಸೋರೆ ಹೆಚ್ಚು ಸುದ್ದಿ ಮಾಡಲಿಲ್ಲ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ಅವರು, ಅಷ್ಟೇ ಅಲ್ಲ ಸದ್ದಿಲ್ಲದೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ 'ಆಕ್ಟ್ 1978' ಚಿತ್ರವನ್ನು ನೋಡಿರುವ ಸೆನ್ಸಾರ್ ಮಂಡಳಿಯು, 'ಯು' ಪ್ರಮಾಣ ಪತ್ರ ನೀಡಿದೆ.
ಚಿತ್ರ ನೋಡಿದವರೆಲ್ಲಾ ಇದೊಂದು ವಿಶೇಷ ಪ್ರಯತ್ನ ಎಂದು ಮಂಸೋರೆ ಅವರಿಗೆ ಹೇಳುತ್ತಿದ್ದಾರಂತೆ. ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿರುವ ಅವರು, 'ಅಧಿಕಾರಶಾಹಿ, ರಾಜಕೀಯ, ಎಮೋಷನ್, ಥ್ರಿಲ್ ಎಲ್ಲವೂ ಇರುವ ಚಿತ್ರ ಇದು. ಜತೆಗೆ ಒಂದೊಳ್ಳೆಯ ಸಂದೇಶ ಸಹ ಇದೆ. ಇವೆಲ್ಲವೂ ಬಹಳ ಚೆನ್ನಾಗಿ ಬ್ಲೆಂಡ್ ಆಗಿದೆ' ಎನ್ನುತ್ತಾರೆ ಅವರು.
ಇದು ಯಾವುದೋ ಒಂದು ಘಟನೆಯನ್ನಾಧರಿಸಿದ ಚಿತ್ರವಲ್ಲ, ಬದಲಿಗೆ ಚಿತ್ರದಲ್ಲಿ ಹಲವು ಘಟನೆಗಳನ್ನು ನೋಡಬಹುದು ಎನ್ನುವ ಅವರು, 'ಪ್ರತಿಯೊಬ್ಬರಿಗೂ ಸರ್ಕಾರಿ ಕಚೇರಿಗೆ ಹೋದ ಅನುಭವ ಇದ್ದೇ ಇರುತ್ತದೆ. ಅದರ ರಿಯಾಕ್ಷನ್ ರೂಪದ ಕಥೆ. ಸಾಮಾನ್ಯ ಮನುಷ್ಯನೊಬ್ಬ ಪ್ರತಿಕ್ರಿಯೆ ಕೊಟ್ಟರೆ, ಅದರ ತೀವ್ರತೆ ಹೇಗಿರುತ್ತದೆ' ಎಂಬುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ.
ಈ ಚಿತ್ರದ ಮುಖ್ಯ ಎಳೆ ಅವರದ್ದಂತೆ. ಇನ್ನು ಅದಕ್ಕೆ ಜೀವ ತುಂಬಿಸಿದ್ದು ಟಿ.ಕೆ. ದಯಾನಂದ್. ಅದಕ್ಕೊಂದು ರೂಪ ಕೊಟ್ಟಿದ್ದು ವೀರೇಂದ್ರ. ಹಾಗಾಗಿ ಈ ಚಿತ್ರವನ್ನು ಮೂರೂ ಜನ ಸೇರಿ ರೂಪಿಸಿದ್ದಾಗಿ ಹೇಳುತ್ತಾರೆ ಮಂಸೋರೆ. 'ಇಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಹೇಳುವುದು ಕಷ್ಟ. ಮೂರೂ ಜನ ಈಕ್ವಲ್ ಆಗಿ ಕೆಲಸ ಮಾಡಿದ್ದೇವೆ' ಎನ್ನುತ್ತಾರೆ ಮಂಸೋರೆ.
ಇದನ್ನೂ ಓದಿ: ಒಂದು ವರ್ಷ ಮುಂದಕ್ಕೆ ಹೋಯ್ತು ರಣಬೀರ್-ಆಲಿಯಾ ಮದುವೆ!
ಚಿತ್ರದಲ್ಲಿ ಯಜ್ನಾ ಶೆಟ್ಟಿ, ಅಚ್ಯುತ್ ಕುಮಾರ್, ಶ್ರುತಿ, ದತ್ತಣ್ಣ, ಸುಧಾ ಬೆಳವಾಡಿ, ರವಿ ಭಾಟ್, ಬಲಾ ರಾಜವಾಡಿ, ಕೃಷ್ಣ ಹೆಬ್ಬಾಳೆ ಸೇರಿದಂತೆ ಹಲವರು ಪ್ರತಿಭಾವಂತ ಕಲಾವಿದರ ದಂಡೇ ಇದೆ. ಇನ್ನು ಸತ್ಯ ಹೆಗಡೆ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಸೆಪ್ಟೆಂಬರ್ 15ರವರೆಗೂ ನೋಡಿಕೊಂಡು, ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿ ಹೇಳುವ ಮಂಸೋರೆ, 'ಸೆಪ್ಟೆಂಬರ್ 15ಕ್ಕೆ ಚಿತ್ರಪ್ರದರ್ಶನ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ, ತಕ್ಷಣ ಬಿಡುಗಡೆಯ ದಿನಾಂಕ ಘೋಷಿಸುತ್ತೇವೆ. ತಡವಾದರೆ, ಪರ್ಯಾಯ ವ್ಯವಸ್ಥೆಯ ಬಗ್ಗೆ ಯೋಚಿಸಬೇಕಾಗುತ್ತದೆ' ಎನ್ನುತ್ತಾರೆ ಅವರು.