ನಿರ್ದೇಶಕ ಯೋಗರಾಜ್ ಭಟ್ ಜತೆ ಸಚಿವದ್ವಯರಾದ ಎಸ್​.ಟಿ.ಸೋಮಶೇಖರ್ ಮತ್ತು ಬಿ.ಸಿ. ಪಾಟೀಲ್. 
ಸಿನಿವಾಣಿ

ಕೃಷಿಗೆ ಸಹಕಾರ: ಗರಡಿಯಲ್ಲಿ ಬಿ.ಸಿ. ಪಾಟೀಲ್ ಜತೆ ಸಚಿವ ಸೋಮಶೇಖರ್ ಅಭಿನಯ

ಬೆಂಗಳೂರು: ‘ನಾನು ನಟನೆ ಮಾಡುವುದರಿಂದ ಒಬ್ಬ ಕಲಾವಿದನಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದೆ. ಈ ಪಾತ್ರ ತೂಕವಾಗಿದೆ, ನೀವೇ ಮಾಡಬೇಕು ಎಂದು ಪಾಟೀಲರು ಹೇಳಿದರು. ಅವರ ಪ್ರೀತಿಗೆ ಒಪ್ಪಿ ಬಣ್ಣ ಹಚ್ಚುತ್ತಿದ್ದೇನೆ ...’

ಹಾಗೆ ಹೇಳಿದ್ದು ರಾಜ್ಯದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್. ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿರುವ ಅವರು ಇದೀಗ ಚಿತ್ರರಂಗಕ್ಕೆ ಬಂದಿದ್ದಾರೆ. ಬಿ.ಸಿ. ಪಾಟೀಲ್ ಅಭಿನಯದ ಮತ್ತು ನಿರ್ವಣದ ‘ಗರಡಿ’ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕೃಷಿಗೆ ತಮ್ಮ ಸಹಕಾರ ನೀಡುತ್ತಿದ್ದಾರೆ. ಭಾನುವಾರ ಅವರ ಭಾಗದ ಚಿತ್ರೀಕರಣ ಜಿ.ವಿ. ಅಯ್ಯರ್ ಸ್ಟುಡಿಯೋದಲ್ಲಿ ನಡೆಯಿತು. ಸೋಮಶೇಖರ್ ಅಭಿನಯದ ಹಲವು ದೃಶ್ಯಗಳನ್ನು ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿಸಿದರು.

‘ಗರಡಿ’ ಚಿತ್ರಕ್ಕಾಗಿಯೇ, ಆ ಮನೆಯನ್ನು ಗರಡಿ ಮನೆಯನ್ನಾಗಿ ವಿಶೇಷವಾಗಿ ಪರಿವರ್ತಿಸಲಾಗಿದೆ. ಸಾಮು ಮಾಡುತ್ತಿರುವ ಹಲವು ಪೈಲ್ವಾನರು, ಅವರು ವ್ಯಾಯಾಮ ಮಾಡುವ ಹಲವು ಪರಿಕರಗಳು, ಇದೆಲ್ಲದರ ನಡುವೆ ಬಿ.ಸಿ. ಪಾಟೀಲ್, ಸೋಮಶೇಖರ್ ಮುಂತಾದವರು ಅಭಿನಯಿಸಿದ ಹಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

ಚಿತ್ರೀಕರಣದ ಬಿಡುವಿನಲ್ಲಿ ‘ವಿಜಯವಾಣಿ’ ಜತೆಗೆ ಮಾತನಾಡಿದ ಎಸ್.ಟಿ. ಸೋಮಶೇಖರ್, ‘ನನಗೆ ನಟನೆಯ ಗಂಧ-ಗಾಳಿ ಗೊತ್ತಿಲ್ಲ. ನಾಟಕಗಳಲ್ಲೂ ಯಾವತ್ತೂ ಬಣ್ಣ ಹಚ್ಚಿದ್ದಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ಒಂದು ಚಿತ್ರದಲ್ಲಿ ಪ್ರಿನ್ಸಿಪಾಲ್ ಪಾತ್ರ ಮಾಡಿದ್ದೆ. ಆ ಚಿತ್ರದ ಹೆಸರು ಸಹ ನನಗೆ ನೆನಪಿಲ್ಲ. ನಮ್ಮದೇ ಕ್ಷೇತ್ರದವರೊಬ್ಬರು ನಿರ್ವಿುಸಿದ ಚಿತ್ರವದು. ಆವರ ಚಿತ್ರದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಪಾತ್ರ ಮಾಡುವವರು ಬಂದಿರಲಿಲ್ಲ, ನೀವೇ ಆ ಪಾತ್ರ ಮಾಡಿ ಎಂದರು. ಹಾಗಾಗಿ, ನಟಿಸಬೇಕಾಗಿ ಬಂತು. ಈಗ ಈ ಚಿತ್ರದಲ್ಲೊಂದು ತೂಕವಾದ ಪಾತ್ರವಿದೆ, ನೀವು ಮಾಡಬೇಕು ಎಂದು ಪಾಟೀಲರು ಹೇಳಿದರು. ರಾಜಕೀಯದ ಜಂಜಾಟದಲ್ಲಿ ಯಾವಾಗಲೂ ಬಿಜಿ ಇರುವ ನಮಗೆ ಕ್ಯಾಮರಾ ಮುಂದೆ ನಿಂತಿದ್ದು, ಬಣ್ಣ ಹಚ್ಚಿದ್ದು ಹೊಸ ಅನುಭವ’ ಎನ್ನುತ್ತಾರೆ ಸೋಮಶೇಖರ್.

ಇಂಥದ್ದೊಂದು ಪಾತ್ರಕ್ಕೆ ಸೋಮಶೇಖರ್ ಅವರೇ ಸೂಕ್ತ ಎನ್ನುತ್ತಾರೆ ಬಿ.ಸಿ. ಪಾಟೀಲ್. ‘ನಾನು ಗರಡಿ ರಂಗಣ್ಣ ಎಂಬ ಗರಡಿ ಮುಖ್ಯಸ್ಥನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಯೋಧರು, ಪೊಲೀಸರು ಹೇಗೆ ದೇಶ ಕಾಯುತ್ತಾರೋ, ಕುಸ್ತಿಪಟುಗಳು ಸಹ ಅದೇ ದಾರಿಯಲ್ಲಿ ಹೋಗಬೇಕು, ಯಾವತ್ತೂ ಕೆಟ್ಟ ದಾರಿ ತುಳಿಯಬಾರದು ಎಂಬ ನಿಲುವಿರುವ ಖಡಕ್ ಪಾತ್ರ ಅದು. ನನ್ನ ಸ್ನೇಹಿತನ ಪಾತ್ರ ಸೋಮಶೇಖರ್ ಅವರದು. ಅವರ ಪಾತ್ರದ ಹೆಸರು ಸಹ ಸೋಮಣ್ಣ ಎಂದು. ರಂಗಣ್ಣ ಕಡು ಕೋಪಿಷ್ಠ. ಯಾರ ಮಾತನ್ನೂ ಕೇಳುವುದಿಲ್ಲ. ಆದರೆ, ಸೋಮಣ್ಣನ ಮೇಲೆ ಬಹಳ ಗೌರವ. ಅವರ ಮಾತನ್ನು ಮಾತ್ರ ಕೇಳುತ್ತಿರುತ್ತಾನೆ. ಒಂಥರಾ ಯಜಮಾನನ ಪಾತ್ರ ಅವರದು’ ಎನ್ನುತ್ತಾರೆ ಪಾಟೀಲ್. ಇನ್ನು, ಚಿತ್ರದ ಬಗ್ಗೆ ಮಾತನಾಡುವ ಅವರು, ‘ಏಳು ವರ್ಷಗಳ ನಂತರ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ಭಟ್ಟರನ್ನು ಭೇಟಿ ಮಾಡುವ ಪ್ರಸಂಗ ಬಂತು. ಆಗ ಚಿತ್ರ ಮಾಡುವ ತೀರ್ವನವಾಯಿತು. ಜಾನಪದ ಕಲೆ ಮತ್ತು ಕ್ರೀಡೆಗಳನ್ನು ಇಟ್ಟುಕೊಂಡು ಮಾಡಿರುವ ಕಥೆ ಇದು. 10 ದಿನಗಳ ಚಿತ್ರೀಕರಣವಾಗಿದೆ. ನಂತರ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಯಶಸ್ ಸೂರ್ಯ, ಸೊನಾಲ್ ಮಾಂಥೆರೋ ಮುಂತಾದವರು ನಟಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.

ಬೆಳಗ್ಗೆ ಬಂದಾಗ ನಿರ್ದೇಶಕರು ನನಗೆ ನನ್ನ ಪಾತ್ರದ ಬಗ್ಗೆ ಹೇಳಿದರು. ನಾನೇನು ಸಂಭಾಷಣೆಗಳನ್ನು ಹೇಳಬೇಕು ಎಂದು ಹೇಳಿದರು. ಜತೆಗೆ ಹೊಸ ಕಾಸ್ಟೂಮ್ಳನ್ನೂ ಕೊಟ್ಟರು. ಅವರು ಸಂಭಾಷಣೆ ಹೇಳಿಕೊಟ್ಟಿದ್ದನ್ನು ಬಾಯಿಪಾಠ ಮಾಡಿಕೊಂಡಿದ್ದೇನೆ. ಅದೇ ರೀತಿ ಬಟ್ಟೆ ಹಾಕಿಕೊಂಡು ಸಾಕಾಗಿತ್ತು. ಇದು ವಿಶೇಷವಾಗಿದೆ. | ಎಸ್.ಟಿ. ಸೋಮಶೇಖರ್ ಸಹಕಾರ ಸಚಿವ