ಸಿನಿವಾಣಿ

ಒಂದು ಕ್ಲಾಸ್ ಕಥೆಯಲ್ಲಿ ಇಬ್ಬರು ಹೀರೋಗಳು: ಒಬ್ಬ ಭುವನ, ಇನ್ನೊಬ್ಬ ಗಗನ..

Webdesk - Ravikanth

ಬೆಂಗಳೂರು: ಪ್ರಮೋದ್ ಇದುವರೆಗೂ ಮಾಡಿದ್ದೆಲ್ಲ ಮಾಸ್ ಪಾತ್ರಗಳೇ. ಒಂದು ಕ್ಲಾಸ್ ಪಾತ್ರ ಮಾಡಬೇಕು ಎಂಬ ಆಸೆ ಅವರಿಗಿತ್ತಂತೆ. ಅದಕ್ಕೆ ಸರಿಯಾಗಿ ಗಿರೀಶ್ ಮೂಲಿಮನಿ ಒಂದು ಕಥೆ ಮಾಡಿಕೊಂಡು ಹೋಗಿದ್ದಾರೆ. ಕಥೆ ಕೇಳುತ್ತಿದ್ದಂತೆಯೇ ಪ್ರಮೋದ್​ಗೆ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು ‘ಭುವನಂ ಗಗನಂ’.

ಈ ಚಿತ್ರ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ. ಇಲ್ಲಿ ಪ್ರಮೋದ್ ಒಬ್ಬರೇ ಅಲ್ಲ, ಪೃಥ್ವಿ ಅಂಬರ್ ಸಹ ಹೀರೋ. ಪ್ರಮೋದ್​ಗೆ ರಾಶೆಲ್ ಡೇವಿಡ್ ಹಾಗೂ ಪೃಥ್ವಿಗೆ ರಚನಾ ರೈ ನಾಯಕಿ. ‘ಭುವನಂ ಗಗನಂ’ ಕುರಿತು ಮಾತನಾಡಿದ ಪ್ರಮೋದ್, ‘ಈ ಚಿತ್ರದಲ್ಲಿ ಬೇರೆ ರೀತಿ ಕಾಣಿಸುತ್ತೇನೆ. ಈ ಸಿನಿಮಾ ನನಗೆ ಬೇರೆ ಮಜಲು ಕೊಡಬಹುದು ಎಂಬ ನಿರೀಕ್ಷೆಯಿದೆ’ ಎಂದರು.

ಪೃಥ್ವಿಗೆ ಚಿತ್ರದ ಶೀರ್ಷಿಕೆ ಬಹಳ ಇಷ್ಟವಾಯಿತಂತೆ. ಅದಕ್ಕೆ ಕಾರಣ ಅವರ ಹೆಸರಿನ ಅರ್ಥವೂ ಅದೇ ಅಂತೆ. ‘ಕಥೆ ಕೇಳಿದಾಗ ನನಗೆ ಚೆನ್ನಾಗಿ ಕನೆಕ್ಟ್ ಆಯಿತು. ಪ್ರಮೋದ್ ಒಳ್ಳೆಯ ಕಲಾವಿದ. ಅವರ ಜತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತೋಷ’ ಎಂದರು ಪೃಥ್ವಿ. ಅಂದಹಾಗೆ ಜುಲೈ 01ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.