- ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು
- ಅಸಹಜ ಸಾವು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ ಖಾಕಿ
- ಡೆತ್ನೋಟ್ ಬರೆದಿಟ್ಟು ಯುವತಿ ಸಾವಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ
ವಿಜಯನಗರ: ಕನ್ನಡ, ತಮಿಳು, ತೆಲುಗು ಧಾರವಾಹಿಗಳಲ್ಲಿ ಅಭಿನಯಿಸುತ್ತಿದ್ದ ಯುವ ನಟಿ ನಂದಿನಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬೆಂಗಳೂರಿನ ಪಿಜಿಯಲ್ಲಿ ಉಳಿದುಕೊಂಡಿದ್ದ ನಂದಿನಿ, ರೂಮ್ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ದುರಂತ ಅಂತ್ಯಕ್ಕೆ ಕಾರಣವೇನು ಎಂಬುದು ಆರಂಭದಲ್ಲಿ ಸ್ಪಷ್ಟವಾಗಿ ತಿಳಿಯಲಿಲ್ಲ. ಆದರೀಗ ಅವರ ಸಾವಿನ ಹಿಂದಿರುವ ಕಾರಣ ತಿಳಿದುಬಂದಿದೆ. ಸಾಯುವ ಮುನ್ನ ತಮ್ಮ ಡೈರಿಯಲ್ಲಿ ನಂದಿನಿ ತಾವ್ಯಾಕೆ ಜೀವನ ಅಂತ್ಯಗೊಳಿಸುತ್ತಿರುವುದು ಎಂಬುದನ್ನು ಉಲ್ಲೇಖಿಸಿದ್ದಾರೆ.
ಡೆತ್ನೋಟ್ನಲ್ಲಿ ಏನಿದೆ?
ಡೆತ್ನೋಟ್ ಬರೆದಿಟ್ಟಿರುವ ನಂದಿನಿ, ನನಗೆ ಸರ್ಕಾರಿ ನೌಕರಿ ಮಾಡಲು ಇಷ್ಟವಿಲ್ಲ. ನಟನೆಯಲ್ಲೇ ಮುಂದುವರಿಯುವ ಆಸಕ್ತಿ. ಆದರೆ, ಮನೆಯಲ್ಲಿ ಇದಕ್ಕೆ ಒಪ್ಪುತ್ತಿಲ್ಲ. ನನ್ನ ಮಾತು ಕೇಳುತ್ತಿಲ್ಲ ಎಂದಿದ್ದಾರೆ.
ದಿ. ಮಹಾಬಲೇಶ್ವರಪ್ಪ, ಬಸವರಾಜೇಶ್ವರಿ ದಂಪತಿಗಳ ಪುತ್ರಿ ನಂದಿನಿ, ಕನ್ನಡದಲ್ಲಿ 'ಗೌರಿ', 'ನಿನಾದೇನಾ' ಸೇರಿದಂತೆ ಇತರೆ ಧಾರವಾಹಿಗಳಲ್ಲಿ ಕಾಣಸಿಕೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಂದಿನಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.