ಬಿಗ್ಬಾಸ್ ಸೀಸನ್ 12ರ ಬಗ್ಗೆ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ವಿಶ್ಲೇಷಣೆ
- ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯ ಬಿಗ್ಬಾಸ್ ಶೋ ಅಂತಿಮ ಹಂತಕ್ಕೆ ಬಂದಿದೆ
- ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ
- ಕೆಲವು ಬೆಳವಣಿಗೆಗಳು ಈ ಬಾರಿಯ ಬಿಗ್ಬಾಸ್ ಅನ್ನು ಹೆಚ್ಚು ವಿವಾದಾತ್ಮಕವಾಗಿಸಿದೆ
- ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಸಮಗ್ರ ವಿಶ್ಲೇಷಣೆ ಮೂಲಕ ಪ್ರಸ್ತುತ ಬೆಳವಣಿಗೆ ಖಂಡಿಸಿದ್ದಾರೆ
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯ ಬಿಗ್ಬಾಸ್ ಶೋ ( BBK 12 ) ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಒಂದು ದಿನದಲ್ಲಿ ತೆರೆಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಅಲ್ಲದೆ, ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಿವೆ. ಸದ್ಯ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ಪೈಪೋಟಿ ಇದೆ. ಇಬ್ಬರಲ್ಲಿ ಒಬ್ಬರು ಗೆದ್ದೇ ಗೆಲ್ಲುತ್ತಾರೆ ಎನ್ನಲಾಗುತ್ತದೆ. ಅದರಲ್ಲೂ ಗಿಲ್ಲಿ ನಟನಿಗೆ ಹೆಚ್ಚಿನ ಬೆಂಬಲವಿದೆ. ಗಿಲ್ಲಿಯನ್ನು ಸೋಲಿಸಲು ರಾಜಕೀಯ ನಡೆಯುತ್ತಿದೆ ಎಂಬ ಆರೋಪವೂ ಇದೆ. ಕೆಲವರು ಗಿಲ್ಲಿ ನಮ್ಮ ಜಾತಿಯ ಹುಡುಗ ಆತನನ್ನು ಗೆಲ್ಲಿಸಬೇಕೆಂಬ ಪೋಸ್ಟ್ಗಳನ್ನೂ ಹರಿಬಿಟ್ಟಿದ್ದಾರೆ. ಅಲ್ಲದೆ, ಗಿಲ್ಲಿ ನಮ್ಮ ನೆಚ್ಚಿನ ನಟ ಅಭಿಮಾನಿ. ಹೀಗಾಗಿ ಆತ ಗೆಲ್ಲಲೇ ಬೇಕು ಅಂತಾ ಇನ್ನೊಬ್ಬ ನಟನ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಈ ಬಾರಿಯ ಬಿಗ್ಬಾಸ್ ಅನ್ನು ಹೆಚ್ಚು ವಿವಾದಾತ್ಮಕವಾಗಿಸಿದೆ. ಈ ಹಿನ್ನೆಲೆಯಲ್ಲಿ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ ಹಾಗೂ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ಸಮಗ್ರ ವಿಶ್ಲೇಷಣೆ ಮೂಲಕ ಪ್ರಸ್ತುತ ಕೆಟ್ಟ ಬೆಳವಣಿಗೆಯನ್ನು ಖಂಡಿಸಿದ್ದಾರೆ.
ಈ ಬಾರಿಯ ಬಿಗ್ಬಾಸ್ನಲ್ಲಿ ಗಿಲ್ಲಿ ಗೆದ್ದರೆ ಎಳನೀರು ಉಚಿತವಾಗಿ ಕೊಡುತ್ತೇನೆ ಎಂದು ಎಳನೀರು ಮಾರುವವನೊಬ್ಬ ಹೇಳುತ್ತಾನೆ. ಅದು ಆತನ ಅಭಿಮಾನ. ಆಟೋ ಚಾಲಕರು ಉಚಿತವಾಗಿ ಆಟೋ ಸೇವೆ ನೀಡುತ್ತೇವೆ ಎಂದು ಹೇಳುತ್ತಾರೆ. ಕೆಲವರು ಪೂಜೆ ಮಾಡಿಸುತ್ತಾರೆ. ಒಬ್ಬರೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಸ್ಪರ್ಧಿಗಳ ಒಂದೊಂದು ಗುಣವನ್ನು ಮೆಚ್ಚಿ ಅವರ ಮೇಲೆ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಇದೆಲ್ಲವನ್ನು ಸಾಮಾನ್ಯ ಜನರು ಬಿಗ್ಬಾಸ್ ಶೋ ಮೇಲಿನ ಪ್ರೀತಿಯಿಂದ ಮಾಡುತ್ತಾರೆ. ಪ್ರತಿವರ್ಷ ಬಿಗ್ಬಾಸ್ ಶುರುವಾದಾಗ ಇದೆಲ್ಲ ಸಾಮಾನ್ಯವಾಗಿ ನಡೆಯುತ್ತದೆ ಎಂದು ಚಂದ್ರಚೂಡ್ ಹೇಳಿದರು.
ಆದರೆ, ಕೆಲವು ಸಂಘಟನೆಗಳು, ರಾಜಕೀಯ ವ್ಯಕ್ತಿಗಳು ಹಾಗೂ ಪ್ರಭಾವ ಇರುವಂಥವರು ಈ ಬಿಗ್ಬಾಸ್ ಶೋ ಅನ್ನು ನೋಡುವ ರೀತಿಯೇ ಬೇರೆ. ಮೊನ್ನೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಜಾತಿ ಚರ್ಚೆ ನಡೆಯುತ್ತಾ ಇತ್ತು. ಅದರಲ್ಲಿ ಬಿಗ್ಬಾಸ್ ಬಗ್ಗೆಯೂ ಚರ್ಚೆ ನಡೆಯುತ್ತೆ. ಗಿಲ್ಲಿ, ಕುರುಬನಾ ಅನ್ನೋದು ಜನರಿಗೆ ಬೇಕಿಲ್ಲ. ಅದೇ ರೀತಿ ಅಶ್ವಿನಿ ಗೌಡ ಅವರು ಒಕ್ಕಲಿಗರಾ ಅನ್ನೋದು ಜನರಿಗೆ ಬೇಕಾಗಿಲ್ಲ. ಇನ್ನಿತರ ಸ್ಪರ್ಧಿಗಳು ಯಾವ್ಯಾವ ಸಮುದಾಯಕ್ಕೆ ಸೇರಿದವರು ಅನ್ನೋದು ಇಲ್ಲಿ ಮುಖ್ಯವಲ್ಲ. ಈ ಕಾರ್ಯಕ್ರಮದಲ್ಲಿ ಜನರು ಮನರಂಜನೆ ಮಾತ್ರ ನೋಡೋದು.
ಇಲ್ಲಿ ಏನಾಗಿದೆ ಅಂದರೆ, ಒಂದು ಕುರುಬ ಸಂಘಟನೆ ಗಿಲ್ಲಿ ಕುರುಬ ಎಂದು ಅನೌನ್ಸ್ ಮಾಡುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದ ಮಾತ್ರಕ್ಕೆ ಕುರುಬರೆಲ್ಲ ಉದ್ಧಾರ ಆಗಲ, ಅದೇ ರೀತಿ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರೆ ಗೌಡರೆಲ್ಲ ಉದ್ಧಾರ ಆಗಲ್ಲ. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ರೂ ಅನ್ನೋ ಕಾರಣಕ್ಕೆ ಬ್ರಾಹ್ಮಣರೆಲ್ಲ ಉದ್ಧಾರ ಆಗಲಿಲ್ಲ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರು ಮುಂದೆ ಮುಖ್ಯಮಂತ್ರಿ ಆದರೆ, ಎಲ್ಲ ದಲಿತರಿಗೂ ಒಳ್ಳೆಯದಾಗುತ್ತೆ ಅಂತ ಹೇಳೋಕೆ ಆಗಲ್ಲ. ಜಾತಿ ಅನ್ನೋದು ರಾಜಕೀಯಕ್ಕೆ ಅಂಟಿರುವ ಶಾಪ. ಅದು ಮಜರಂಜನಾ ಲೋಕಕ್ಕೂ ಅಂಟಿಕೊಂಡು ಬಿಟ್ಟರೆ, ಎಷ್ಟೊಂದು ಅಪಾಯ ಗೊತ್ತಾ? ಈ ವರ್ಷದ ಬಿಗ್ಬಾಸ್ನಲ್ಲಿ ಇಂಥದ್ದೊಂದು ಅಪಾಯಕಾರಿ ಬೆಳವಣಿಗೆ ನಡೆಯುತ್ತಿದೆ.
ಕೆಲವರು ಈ ಅಪಾಯವನ್ನು ತಂದು ಹಾಕುತ್ತಿದ್ದಾರೆ. ಅಂಥವರಿಗೆ ನಾನು ಹೇಳುವುದು ಏನೆಂದರೆ, ಈ ವರ್ತನೆ ಸರಿಯಲ್ಲ. ಸಾಮಾನ್ಯ ಜನರ ಖುಷಿಗೆ ಈ ಮನರಂಜನಾ ಲೋಕ ಸೀಮಿತವಾಗಲಿ ಹೊರತು ಮನರಂಜನೆಗೆ ಜಾತಿಯನ್ನು ಅಂಟಿಸಬೇಡಿ. ಕಲಾ ಕ್ಷೇತ್ರ ಹಾಗೂ ಮಾನವೀಯ ಕ್ಷೇತ್ರಕ್ಕೆ ಜಾತಿಯನ್ನು ತರಲೇಬಾರದು. ಹೇಳಬೇಕೆಂದರೆ, ಜಾತಿಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬಾರದು. ಕೆಲವರು ಒಕ್ಕಲಿಗ ಗೌಡರ ಗುಂಪಿನಲ್ಲಿ ಈ ಬಾರಿಯ ಬಿಗ್ಬಾಸ್ ಶೋ ಅನ್ನು ಗೌಡ vs ಕುರುಬ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಯಾವ ರೀತಿಯ ರೋಗ? ಜಾತಿಗಳನ್ನು ಇಷ್ಟೊಂದು ಅಂಟಿಸಿಕೊಳ್ಳಬಾರದು.
ಬಿಗ್ಬಾಸ್ ಶೋ ಎಂದರೆ, ಮನುಷ್ಯ, ಮನುಷ್ಯನನ್ನು ಒಂದು ಮಾಡುವ, ಎಲ್ಲ ಸಂಸ್ಕೃತಿಗಳನ್ನು ಒಂದೇ ವೇದಿಕೆಗೆ ಹಾಕಿ ನೋಡುವಂತಹ ಒಂದು ವ್ಯಕ್ತಿತ್ವದ ಆಟವಾಗಿದೆ. ಆದರೆ, ಜಾತಿ, ಭಾಷೆ, ಪ್ರದೇಶ ಮತ್ತು ಸಂಘಟನೆ ಹೆಸರಲ್ಲಿ ಮನಷ್ಯನನ್ನು ವಿಭಜಿಸಬಾರದು. ಒಂದು ಶೋನಲ್ಲಿ ಜಾತಿಯನ್ನು ಮುಂದಿಟ್ಟು, ಭೇದ-ಭಾವ ಹುಟ್ಟುಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಶ್ನೆ ಮಾಡಿದರು.
ಇದೇ ಶೋನ ಆರಂಭದಲ್ಲಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿಸುವಲ್ಲಿ ಕಾರಣರಾದ ಮಳವಳ್ಳಿಯ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಅವರು ಇಂದು ಗಿಲ್ಲಿ ನಟ ಪರ ಮತಕ್ಕಾಗಿ ಮನವಿ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಏನಾಗಿದೆ ಎಂಬ ಪ್ರಶ್ನೆ ಮೂಡುತ್ತದೆ. ಬಿಗ್ಬಾಸ್ ಒಂದು ಶೋ ಅಷ್ಟೇ. ಅಲ್ಲಿಂದ ಬಂದವರು ಏನಾಗಿದ್ದಾರೆ. ಯಾರಾದರೂ ಸೂಪರ್ ಸ್ಟಾರ್ಗಳಾಗಿದ್ದಾರಾ? ಇದು ಕೇವಲ 100 ದಿನಗಳ ಆಟವಷ್ಟೇ. ಅದನ್ನು ಬಿಟ್ಟು ಈ ಶೋಗೆ ರಾಜಕೀಯ, ಪ್ರಾದೇಶಿಕತೆ, ಪಕ್ಷ, ಜಾತಿ ಮತ್ತು ಸಂಘಟನೆ ಎಲ್ಲವನ್ನು ಎಳೆದು ತರುತ್ತಿರುವುದರ ಹಿಂದೆ ಯಾರಿಗೆ ಲಾಭ ಇದೆ ಅನ್ನೋದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದರು.
ನನ್ನನ್ನು ಸೇರಿಸಿ, ಬಿಗ್ಬಾಸ್ ಶೋನಲ್ಲಿ ಭಾಗವಹಿಸಿದವರೆಲ್ಲ ಸೈನಿಕರೇನಲ್ಲ, ಕೃಷಿಕರಲ್ಲ, ದೇಶದ ಸಂಪತ್ತು ಬೆಳವಣಿಗೆ ಏನು ಮಾಡಿದವರಲ್ಲ, ಅವರೆಲ್ಲ ಕೇವಲ ಮನರಂಜನೆಗೆ ಮಾತ್ರ ಬಂದಿರುವುದು. ಅವರನ್ನು ಮನರಂಜನೆ ಮಾಡಲು ಬಿಡಿ ಮತ್ತು ಅಭಿಮಾನ ಹಾಗೂ ಪ್ರೀತಿಯನ್ನು ಕೊಡಿ. ಅದನ್ನು ಬಿಟ್ಟು ಇಲ್ಲದ ಕಳಂಕವನ್ನು ಮೆತ್ತ ಬೇಡಿ. ಕೆಲವರು ಬಿಗ್ಬಾಸ್ ಬಗ್ಗೆಯೂ ಕೇವಲವಾಗಿ ಮಾತನಾಡುತ್ತಾರೆ. ಆದರೆ, ಅವರೇ ಮತ ಹಾಕಿಕೊಂಡು ಕುಳಿತಿದ್ದಾರೆ. ಬಿಗ್ಬಾಸ್ ಶೋ ಅನ್ನೋದು ಒಂದು ಅನುಭವ ಮಂಟಪ. ಜನರಿಗೆ ಹತ್ತಿರವಾಗಲು ಆ ಶೋಗೆ ಹೋಗುತ್ತಾರೆ. ಆದರೆ, ನೀವೆಲ್ಲ ಈ ಶೋಗೆ ನಿಮ್ಮ ಸಂಪೂರ್ಣ ಸಮಯನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದೀರಿ. ನಾಡಿನಲ್ಲಿ ಚರ್ಚೆ ಮಾಡಲು ಬೇಕಾದಷ್ಟು ವಿಷಯಗಳಿವೆ. ಮೊದಲು ಅವುಗಳತ್ತ ಗಮನಹರಿಸಿ ಮತ್ತು ಧ್ವನಿ ಎತ್ತಿ ಎಂದು ಚಕ್ರವರ್ತಿ ಗುಡುಗಿದರು.
ಗಿಲ್ಲಿ ನಟ ಬಿಗ್ಬಾಸ್ ಮನೆಯಲ್ಲಿ ಇರಬೇಕಾದರೆ, ಒಂದಷ್ಟು ಮಂದಿ ಅವನ ಹೆಸರಲ್ಲಿ ಪಿಆರ್ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ, ಗಿಲ್ಲಿ ಆ ನಟನ ಪರ ಹಾಗೂ ಈ ನಟನ ವಿರುದ್ಧ ಎಂದು ಬಿಂಬಿಸುತ್ತಿದ್ದಾರೆ. ಅಷ್ಟೇ ಅಲ್ಲ, ಜಾತಿಯನ್ನು ಎಳೆದು ತರುತ್ತಿದ್ದಾರೆ. ಈ ಮೂಲಕ ಕೆಟ್ಟ ಮಟ್ಟದಲ್ಲಿ ಒಂದು ಪಿಆರ್ ಮಾಡುತ್ತಿದ್ದಾರೆ. ಇದು ಸ್ವತಃ ಗಿಲ್ಲಿಗೆ ಗೊತ್ತಿದೆಯೋ? ಇಲ್ಲವೋ? ಆದರೆ, ನನಗನಿಸಿದ ಪ್ರಕಾರ ಆತನಿಗೆ ಗೊತ್ತಿಲ್ಲ. ಬಿಗ್ಬಾಸ್ ಮನೆಯಿಂದ ಹೊರಗಡೆ ಬಂದರೆ ಪ್ರಸ್ತುತ ಬೆಳವಣಿಗೆಯ ದುಷ್ಪರಿಣಾಮ ಆತನಿಗೆ ಬೀರುತ್ತದೆ. ಸಂಘಟನೆ, ಜಾತಿ ಮತ್ತು ಪ್ರಾದೇಶಿಕತೆ ಬಿಗ್ಬಾಸ್ ಅಂಟಿಕೊಡಿರುವುದು ಒಂದು ಕೆಟ್ಟ ಬೆಳವಣಿಗೆ. ಇದು ಎಲ್ಲ ವ್ಯಸನವನ್ನೂ ಮೀರಿದೆ. ಮನರಂಜನೆ ಲೋಕ ಕೇವಲ ಮನರಂಜನೆಯಾಗೇ ಉಳಿಯಲಿ ಎಂದು ಚಕ್ರವರ್ತಿ ಚಂದ್ರಚೂಡ್ ಅವರು ವಿವರವಾಗಿ ತಿಳಿಸಿದ್ದಾರೆ.