ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ
- ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇತ್ತೀಚೆಗೆ ಟ್ರೋಲ್ ಆಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ
- ಬೋಲ್ಡ್ ಉಡುಗೆ ಧರಿಸಿದ್ದಕ್ಕೆ ಅನೇಕ ಮಂದಿ ವೈಷ್ಣವಿ ಅವರನ್ನು ಟೀಕಿಸಿ ವಿಡಿಯೋ ಹರಿಬಿಟ್ಟಿದ್ದರು
- ತಮ್ಮ ವಿರುದ್ಧ ನಾಲಿಗೆ ಹರಿಬಿಟ್ಟ ಎಲ್ಲರಿಗೂ ಇದೀಗ ವೈಷ್ಣವಿ ತಿರುಗೇಟು ನೀಡಿದ್ದಾರೆ
- ಹೆಣ್ಣು ಮಕ್ಕಳನ್ನು ಕೇವಲ ಕಾಮದೃಷ್ಟಿಯಲ್ಲಿ ನೋಡಬೇಡಿ ಎಂದು ವೈಷ್ಣವಿ ಕರೆ ನೀಡಿದ್ದಾರೆ
ಬೆಂಗಳೂರು: ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ( Vaishnavi Koundinya ) ಅವರು ಇತ್ತೀಚೆಗೆ ತಮ್ಮ ಉಡುಗೆ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ಗೆ ಗುರಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಮಾಜಿಕ ಜಾಲತಾಣ ಓಪನ್ ಮಾಡಿದರೆ ಸಾಕು ಅನೇಕ ಮಂದಿ ವೈಷ್ಣವಿ ಅವರನ್ನು ಟೀಕಿಸಿ, ವಿಡಿಯೋ ಹರಿಬಿಟ್ಟಿದ್ದರು. ಅಲ್ಲದೆ, ವೈಷ್ಣವಿ ಅವರ ವೈರಲ್ ವಿಡಿಯೋ ಕೆಳಗೆ ಅನೇಕ ಮಂದಿಗೆ ತುಂಬಾ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ತಮ್ಮ ವಿರುದ್ಧ ನಾಲಿಗೆ ಹರಿಬಿಟ್ಟ ಎಲ್ಲರಿಗೂ ಇದೀಗ ವೈಷ್ಣವಿ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಇಂದು ವಿಜಯವಾಣಿ ಡಿಜಿಟಲ್ಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ ವೈಷ್ಣವಿ ಕೌಂಡಿನ್ಯ, ಟ್ರೋಲಿಗರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಮೈ ತೋರಿಸುವಂತಗ ಬಟ್ಟೆಗಳನ್ನು ಧರಿಸುವ ಬದಲು ಲಕ್ಷಣವಾಗಿ ಸೀರೆ ಅಥವಾ ಚೂಡಿದಾರ್ ಧರಿಸಬಹುದಲ್ಲವೇ ಎಂದು ಕಾಮೆಂಟ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ ವೈಷ್ಣವಿ, ನೀವು ಏಕೆ ಪಂಚೆ ಉಟ್ಟುಕೊಂಡು ಅಥವಾ ಕುರ್ತಾ ಧರಿಸಿ ಪ್ರತಿದಿನ ಓಡಾಡುವುದಿಲ್ಲ ಎಂದು ಪ್ರಶ್ನಿಸಿದರು.
ನೋಡಬಾರದನ್ನೆಲ್ಲ ತೋರಿಸಿಕೊಂಡು ಓಡಾಡ್ತೀರಾ
ಮಾತು ಮುಂದುವರಿಸಿದ ವೈಷ್ಣವಿ, ನೀವು ಏಕೆ ಶಾರ್ಟ್ಸ್ ಹಾಕಿಕೊಂಡು ಓಡಾಡುತ್ತಿರಾ? ಕೂದಲು ಇರುವ ಕಾಲುಗಳನ್ನು ತೋರಿಸಿಕೊಂಡು ಏಕೆ ಓಡಾಡುತ್ತೀರಾ? ನೋಡೋದಕ್ಕೆ ತುಂಬಾ ಕೆಟ್ಟದಾಗಿರುತ್ತದೆ. ಲೋವೆಸ್ಟ್ ಪ್ಯಾಂಟ್ ಧರಿಸಿ, ನೋಡಬಾರದನ್ನೆಲ್ಲ ತೋರಿಸಿಕೊಂಡು ಓಡಾಡುವುದೇಕೆ? ಕೆಟ್ಟ ಕಾಮೆಂಟ್ಗಳನ್ನು ಮಾಡುವವರೇ ಕೆಟ್ಟದಾಗಿ ಡ್ರೆಸ್ ಮಾಡಿಕೊಂಡು ಓಡಾಡುತ್ತಾರೆ. ಮೊದಲು ನೀವು ನೆಟ್ಟಗಿರಿ, ಆಮೇಲೆ ನಮ್ಮ ಬಗ್ಗೆ ಕಾಮೆಂಟ್ ಮಾಡಿ ಎಂದು ವೈಷ್ಣವಿ ಕಿಡಿಕಾರಿದರು.
ಕಾಮದೃಷ್ಟಿಯಲ್ಲಿ ನೋಡಬೇಡಿ
ಗಂಡು ಮಕ್ಕಳ ಡ್ರೆಸ್ಸಿಂಗ್ ಸೆನ್ಸ್ ಏಕೆ ಟ್ರೋಲ್ ಆಗಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ವೈಷ್ಣವಿ, ಇದು ಪುರುಷ ಪ್ರಧಾನ ಸಮಾಜದ ಮನಸ್ಥಿತಿಯಾಗಿದೆ. ಗಂಡು ಮಕ್ಕಳಾದರೆ ಒಂದು ಚಡ್ಡಿ ಹಾಕ್ಕೊಂಡು ನದಿಗಳಲ್ಲಿ ಅಥವಾ ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಾಡುತ್ತಾರೆ. ಆದರೆ, ಹೆಣ್ಣು ಮಕ್ಕಳು ಮಾತ್ರ ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೆಲ್ಲ ಹೋಗಬೇಕೆಂದರೆ ತುಂಬಾ ವರ್ಷಗಳಾಗುತ್ತವೆ. ಈಗೀಗ ಇದೆಲ್ಲ ಕಡಿಮೆಯಾಗುತ್ತಿದೆ. ಈ ಪೀಳಿಗೆಯ ಶಿಕ್ಷಿತ ಯುವಕರು ಇಂತಹ ಮನಸ್ಥಿತಿಯನ್ನು ಬದಲಾಯಿಸುತ್ತಿದ್ದಾರೆ. ಮುಂದಿನ ಪೀಳಿಗೆಗೆ ಈ ಮನಸ್ಥಿತಿ ಇನ್ನಷ್ಟು ಕಡಿಮೆಯಾಗುತ್ತದೆ. ಹೆಣ್ಣು ಮಕ್ಕಳನ್ನು ಕೇವಲ ಕಾಮದೃಷ್ಟಿಯಲ್ಲಿ ನೋಡಬೇಡಿ. ನಾವು ಗಂಡು ಮಕ್ಕಳನ್ನು ಆ ದೃಷ್ಟಿಯಲ್ಲಿ ನೋಡುವುದೇ ಇಲ್ಲ. ನಮ್ಮಲ್ಲೂ ಒಂದು ಒಳ್ಳೆಯ ಮನಸ್ಸಿದೆ. ಅದನ್ನು ಮಾತ್ರ ನೋಡಿ ಎಂದು ವೈಷ್ಣವಿ ಕರೆ ನೀಡಿದರು.
ನಟಿ ವೈಷ್ಣವಿ ಕೌಂಡಿನ್ಯ 'ಮಿಥುನ ರಾಶಿ' ಹಾಗೂ 'ಪ್ರೇಮ ಕಾವ್ಯ' ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇಯಾದ ಹೆಸರು ಮಾಡಿದ್ದಾರೆ. ಆದರೆ, ಇತ್ತೀಚೆಗೆ ತಮ್ಮ ಬೋಲ್ಡ್ ಲುಕ್ ಹಾಗೂ ತುಂಡುಡುಗೆ ವಿಚಾರವಾಗಿ ಜಾಲತಾಣದಲ್ಲಿ ಟ್ರೋಲ್ಗೆ ಗುರಿಯಾಗಿದ್ದಾರೆ. ನ. 11ರಂದು ಲವ್ ಯೂ ಮುದ್ದು ಸಿನಿಮಾದ ಪ್ರೀಮಿಯರ್ ಇವೆಂಟ್‌ಗೆ ವೈಷ್ಣವಿ ತುಂಬಾ ಬೋಲ್ಡ್ ಅವತಾರದಲ್ಲಿ ಹಾಜರಾದರು. ಧಾರಾವಾಹಿಗಳಲ್ಲಿ ವೈಷ್ಣವಿ ಅವರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಿದವರು ಆಕೆಯ ಬೋಲ್ಡ್ ಲುಕ್ ನೋಡಿ ಒಂದು ಕ್ಷಣ ದಂಗಾದರು. ಯಾವಾಗ ವಿಡಿಯೋ ವೈರಲ್ ಆಯ್ತೋ, ವೈಷ್ಣವಿ ಅವರ ಉಡುಗೆಯನ್ನು ಟೀಕಿಸಲು ಶುರು ಮಾಡಿದರು. ನಿಮ್ಮ ಡ್ರೆಸ್ ಕೋಡ್ ಮೇಲೆ ಗಮನ ಇರಲಿ ಎಂದು ಟೀಕಿಸಿದರು.
ವೈಷ್ಣವಿ ಬೆಂಬಲಕ್ಕೆ ನಿಂತ ನಿಶ್ವಿಕಾ
ವೈಷ್ಣವಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದನ್ನು ಗಮನಿಸಿದ ನಟಿ ನಿಶ್ವಿಕಾ, ಆಕೆಯ ಪರ ಧ್ವನಿ ಎತ್ತಿದರು. ಅಲ್ಲದೆ, ಟ್ರೋಲಿಗರ ವಿರುದ್ಧ ಕಿಡಿಕಾರಿದರು. ಒಂದು ಹೆಣ್ಣು ಬೆತ್ತಲೆಯಾಗಿ ನಿಂತಿದ್ದರೂ ಆಕೆಯ ಅನುಮತಿ ಇಲ್ಲದೇ ಕಣ್ಣೆತ್ತಿ ನೋಡಬಾರದು ಎಂದು ನಿಶ್ವಿಕಾ ಹೇಳಿದರು. ಆದರೆ, ನಿಶ್ವಿಕಾ ಹೇಳಿಕೆಯನ್ನೂ ಅನೇಕರು ಟ್ರೋಲ್ ಮಾಡಿದರು. ಉಡುಗೆ ಯಾವಾಗಲೂ ಸಭ್ಯತೆಯಿಂದ ಕೂಡಿರಬೇಕು. ಮನೆಯಲ್ಲಿ ಹೇಗಾದರೂ ಧರಿಸಿ ಆದರೆ, ಸಾರ್ವಜನಿಕ ಸ್ಥಳಕ್ಕೆ ಬಂದಾಗ ನಿಮ್ಮ ಉಡುಗೆ ಸಭ್ಯತೆಯನ್ನು ಮೀರದಿರಲಿ. ಇಂದಿನ ಸಮಾಜಕ್ಕೆ ನೀವು ಕೊಡುವ ಸಂದೇಶ ಇದೇನಾ? ಎಂದು ನೆಟ್ಟಿಗರು ಕಿಡಿಕಾರಿದರು.
ನಿಶ್ವಿಕಾ ಹೇಳಿಕೆ ಸಮರ್ಥಿಸಿಕೊಂಡ ರಮ್ಯಾ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ನಿಶ್ವಿಕಾ ಹೇಳಿದ್ದು ಸರಿ ಇದೆ. ಗಂಡಸರಿಗೆ ಇರುವಷ್ಟೇ ಹಕ್ಕು ನಮಗೂ ಇದೆ. ನೀವು ಇಷ್ಟ ಬಂದ ಹಾಗೇ ಬಟ್ಟೆ ಹಾಕುವಾಗ ನಾವು ಹಾಕಬಾರದಾ? ಇಲ್ಲಿ ಹೆಣ್ಣು ಮಕ್ಕಳಿಗೂ ಸ್ವಾತಂತ್ರ್ಯ ಇದೆ. ನಿಮಗೆ ಇಷ್ಟ ಇಲ್ಲ ಅಂದರೆ ಕಾಮೆಂಟ್ ಮಾಡೋಕೆ ಹೋಗಬೇಡಿ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಅಕೌಂಟ್ ಇದೆ. ಹಾಗಾಂತ ಎಲ್ಲದಕ್ಕೂ ಕಾಮೆಂಟ್ ಮಾಡಬಾರದು ಎಂದು ರಮ್ಯಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.