ಸಿನಿವಾಣಿ

ಕನ್ನಡದಲ್ಲಿ ಕರಾವಳಿ ದಸ್ಕತ್​; 70 ದಿನಗಳ ಪ್ರದರ್ಶನ ಕಂಡಿರುವ ತುಳು ಸಿನಿಮಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಒಳ್ಳೆ ಪ್ರತಿಕ್ರಿಯೆ ಗಳಿಸಿದ ಕನ್ನಡ ಚಿತ್ರಗಳನ್ನು ಪರಭಾಷೆಗಳಿಗೆ ಡಬ್​ ಮಾಡಿ ರಿಲೀಸ್​ ಮಾಡುವುದು ಅಥವಾ ಪ್ಯಾನ್​ ಇಂಡಿಯಾ ಅಂತ ಐದಾರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದೀಗ ತುಳು ಚಿತ್ರಗಳು ಸಹ ಅದೇ ಐಡಿಯಾ ಮಾಡುತ್ತಿವೆ. ಕೋಸ್ಟಲ್​ವುಡ್​ನಲ್ಲಿ ಉತ್ತಮ ರೆಸ್ಪಾನ್ಸ್​ ಗಳಿಸಿದ ಬಳಿಕ ಆ ಸಿನಿಮಾಗಳನ್ನು ಕನ್ನಡದಲ್ಲಿ ಬಿಡುಗಡೆ ಮಾಡುತ್ತಿರುವುದು ವಿಶೇಷ. ಅದಕ್ಕೆ ಉದಾಹರಣೆ "ದಸ್ಕತ್​'.

ಹೌದು, ಕಳೆದ ಡಿ. 13ರಂದು ತುಳು ಭಾಷೆಯಲ್ಲಿ ರಿಲೀಸ್​ ಆಗಿದ್ದ ಈ ಚಿತ್ರ, ಥಿಯೇಟರ್​ಗಳಲ್ಲಿ ಯಶಸ್ವಿಯಾಗಿ 70 ದಿನ ಪೂರೈಸಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಖುಷಿಯಲ್ಲಿ ಚಿತ್ರತಂಡ ಇದೀಗ, ಈ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗಷ್ಟೆ ಟ್ರೇಲರ್​ ರಿಲೀಸ್​ ಮಾಡಲಾಗಿದ್ದು, "ದಸ್ಕತ್​' ಇದೇ ಮೇ 9ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ನಿರ್ದೇಶಕ ಅನೀಶ್​ ಪೂಜಾರಿ ವೇಣೂರು, ""ದಸ್ಕತ್​' ಅಂದರೆ ಸಹಿ ಎಂದರ್ಥ. ಹಳ್ಳಿಯೊಂದರಲ್ಲಿ ಸಹಿಯಿಂದ ಜನ ಎಷ್ಟು ಕಷ್ಟಪಡುತ್ತಾರೆ, ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತವೆ ಎಂಬುದೇ ಕಥೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಸಿನಿಮಾ ಪ್ರದರ್ಶನಗೊಂಡು, ಮೆಚ್ಚುಗೆ ಗಳಿಸಿತ್ತು. ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ಕೆನಡಾ, ನೈಜೀರಿಯಾ, ದುಬೈ ಸೇರಿ ಹಲವು ವಿದೇಶಗಳಲ್ಲೂ ತುಳು ವರ್ಷನ್​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇದೀಗ ಕನ್ನಡ ಅವತರಣಿಕೆಯನ್ನು ಇನ್ನೂ ಹಲವು ದೇಶಗಳಲ್ಲಿ ರಿಲೀಸ್​ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಮೂರು ತುಳು ಸಿನಿಮಾಗಳಲ್ಲಿ ನಟಿಸಿರುವ ದೀಕ್ಷಿತ್​ಗೆ ಇದು ಕನ್ನಡದಲ್ಲಿ ಮೊದಲ ಚಿತ್ರ. ಅವರಿಗೆ ಕಿರುತೆರೆ ನಟಿ ಭವ್ಯಾ ಪೂಜಾರಿ ನಾಯಕಿಯಾಗಿದ್ದಾರೆ.