ವಿಜಯ್ ಕೊನೇ ಸಿನಿಮಾ ನೋಡಿದ ತ್ರಿಷಾ ತಾಯಿ ಉಮಾ ಕೃಷ್ಣನ್
- ದಳಪತಿ ವಿಜಯ್ ಕೊನೇ ಸಿನಿಮಾ ನೋಡಿದ ನಟಿ ತ್ರಿಷಾ ಕೃಷ್ಣನ್ ಮತ್ತು ಅವರ ತಾಯಿ
- ಸಿನಿಮಾ ನೋಡಿ ಹೊರಬಂದ ಬಳಿಕ ಮಾತನಾಡಿದ ಉಮಾ ಕೃಷ್ಣನ್
- ವಿಜಯ್ ಕೊನೇ ಸಿನಿಮಾ ಅನ್ನೋ ವಿಷಯಕ್ಕೆ ಬೇಸರ
ಚೆನ್ನೈ: ತಮಿಳುನಾಡಿನ ಸಿಎಂ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಕೊನೆಯೇ ಸಿನಿಮಾ ಜನ ನಾಯಗನ್ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೊದಲ ದಿನದ ಮೊದಲ ಶೋ ನೋಡಿದ ಸಿನಿಪ್ರಿಯರು ಮತ್ತು ನಟನ ಅಭಿಮಾನಿಗಳು ಮಿಶ್ರ ಪತ್ರಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಸಾಲಿನಲ್ಲೇ ವಿಜಯ್ ಸಿನಿಮಾವನ್ನು ಫಸ್ಟ್ ಡೇ ನೋಡಿದ ನಟಿ ತ್ರಿಷಾ ತಾಯಿ, ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ತಮ್ಮ ರಾಜಕೀಯ ಎಂಟ್ರಿ ಮೂಲಕ ತಮಿಳು ಚಿತ್ರರಂಗಕ್ಕೆ ಸಂಪೂರ್ಣವಾಗಿ ವಿದಾಯ ಹೇಳಿರುವ ವಿಜಯ್ ಅವರ ಕೊನೆಯ ಚಿತ್ರವನ್ನು ನೋಡಿ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕಣ್ಣೀರಿಟ್ಟಿದ್ದಾರೆ. ವಿಜಯ್ ನಟನೆಯ ಕಡೆಯ ಚಿತ್ರವಾದ್ದರಿಂದ ಅಭಿಮಾನಿಗಳ ಸಂಭ್ರಮಕ್ಕೆ ಮಿತಿಯೇ ಇರಲಿಲ್ಲ. ಮೊದಲ ದಿನವೇ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ದಳಪತಿ ಜೊತೆ ಹಲವು ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿರುವ ಸೌತ್ ಬ್ಯೂಟಿ ತ್ರಿಶಾ ಕೃಷ್ಣನ್ ತಮ್ಮ ತಾಯಿಯ ಜತೆ ಎಲ್ಲರಂತೆ ಜನಸಾಮಾನ್ಯರ ಸಾಲಿನಲ್ಲೇ ಚಿತ್ರವನ್ನು ವೀಕ್ಷಿಸಿದರು.
ಸಿನಿಮಾ ನೋಡಿ ಥಿಯೇಟರ್ನಿಂದ ಹೊರಬಂದ ತ್ರಿಷಾ ಮತ್ತು ಅವರ ತಾಯಿಯ ಹಿಂದೆ ಮುಗಿಬಿದ್ದ ಅಭಿಮಾನಿಗಳು, ಸೆಲ್ಫಿಗಾಗಿ ಕಾರಿನವರೆಗೂ ಹಿಂಬಾಲಿಸಿದರು. ಇದೇ ಸಮಯದಲ್ಲಿ, ತ್ರಿಷಾ ಅವರ ತಾಯಿ ಉಮಾ ಕೃಷ್ಣನ್ ಅವರನ್ನು ಸಿನಿಮಾ ಹೇಗಿತ್ತು ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ಜನ ನಾಯಗನ್ ನೋಡಿ ತುಂಬಾ ಖುಷಿಯಾಯಿತು. ಚಿತ್ರದ ಪೂರ ನಾವು ಎಂಜಾಯ್ ಮಾಡಿದೆವು. ಆದರೆ, ನಟನಾಗಿ ಇದು ವಿಜಯ್ ಅವರ ಕೊನೆಯ ಸಿನಿಮಾ ಅನ್ನೋ ಸಂಗತಿ ಮನಸ್ಸಿಗೆ ಸ್ವಲ್ಪ ನೋವುಂಟು ಮಾಡಿತು. ವಿಜಯ್ ಅವರನ್ನು ಬೆಳ್ಳಿಪರದೆಯಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ ಎಂದರು.
ಸೆನ್ಸಾರ್ ಮಂಡಳಿ ಸಮಸ್ಯೆಯಿಂದ ಜನವರಿಯಲ್ಲೇ ಬಿಡುಗಡೆ ಆಗಬೇಕಿದ್ದ ಜನ ನಾಯಗನ್, ಸುಮಾರು ಆರು ತಿಂಗಳ ವಿಳಂಬದ ಬಳಿಕ ರಿಲೀಸ್ ಕಂಡು ಇದೀಗ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು ಮೊದಲ ದಿನವೇ ವಿಶ್ವಾದ್ಯಂತ 78.27 ಕೋಟಿ ರೂ. ಕಲೆಕ್ಷನ್ ಮಾಡಿದೆ. ಭಾರತದಲ್ಲಿ 41 ಕೋಟಿ ರೂ. ಗಳಿಸಿರುವ ಸಿನಿಮಾ, ಎರಡನೇ ದಿನದ ಅಂತ್ಯಕ್ಕೆ ಎಷ್ಟು ಗಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).