ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜನ ನಾಯಕನ್' (Jana Nayagan) ಇಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಹೆಚ್. ವಿನೋತ್ ನಿರ್ದೇಶನದ ಈ ಚಿತ್ರವು ನಟ ವಿಜಯ್ ಅವರ ಚಲನಚಿತ್ರ ಜೀವನದ ಕೊನೆಯ ಸಿನಿಮಾವಾಗಿದ್ದು, ಬಿಡುಗಡೆಯಾದ ಮೊದಲ ದಿನವೇ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲು ನಟಿ ತ್ರಿಶಾ ಕೃಷ್ಣನ್ ಚೆನ್ನೈನ ರೋಹಿಣಿ ಥಿಯೇಟರ್‌ಗೆ ಆಗಮಿಸಿದ್ದು, ಸದ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಸರಳ ಉಡುಪಿನಲ್ಲಿ ಥಿಯೇಟರ್‌ಗೆ ಬಂದ ತ್ರಿಶಾ!
ರೋಹಿಣಿ ಥಿಯೇಟರ್‌ಗೆ ಸಿನಿಮಾ ವೀಕ್ಷಿಸಲು ಆಗಮಿಸಿದ ತ್ರಿಶಾ ಬಿಳಿ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿ ಅತ್ಯಂತ ಸರಳ ರೂಪದಲ್ಲಿ ಕಾಣಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ವಿಜಯ್ ಮತ್ತು ತ್ರಿಶಾ ಅವರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿನಿಮಾ ನೋಡಲು ಆಗಮಿಸಿದ್ದು, ಚರ್ಚೆಗಳಿಗೆ ಪುಷ್ಟಿ ನೀಡಿದಂತಿದೆ.
ಚಿತ್ರರಂಗದಲ್ಲಿ ವಿಜಯ್ ಮತ್ತು ತ್ರಿಶಾ ಜೋಡಿ ಅತ್ಯಂತ ಹಿಟ್ ಎನಿಸಿಕೊಂಡಿದೆ. 2004 ರಲ್ಲಿ ತೆರೆಕಂಡ 'ಗಿಲ್ಲಿ' ಚಿತ್ರದ ಮೂಲಕ ಮೊದಲ ಬಾರಿಗೆ ಒಂದಾದ ಈ ಜೋಡಿ, ನಂತರ ತಿರುಪಾಚಿ, ಆದಿ, ಕುರುವಿ ಹಾಗೂ 2023 ರ ಬ್ಲಾಕ್‌ಬಸ್ಟರ್ ಲಿಯೋ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು. ಇತ್ತೀಚೆಗೆ ತೆರೆಕಂಡ ವಿಜಯ್ ಅವರ ಗೋಟ್ ಸಿನಿಮಾದಲ್ಲೂ ತ್ರಿಶಾ ಅತಿಥಿ ಪಾತ್ರದಲ್ಲಿ ಮಿಂಚಿದ್ದರು.
ಅಡೆತಡೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಜನ ನಾಯಕನ್'!
ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗುವುದು ವಿಳಂಬವಾದ ಕಾರಣ ಸುಮಾರು ಏಳು ತಿಂಗಳ ಕಾಲ ತಡವಾಗಿ ಬಿಡುಗಡೆಯಾಗಿರುವ 'ಜನ ನಾಯಕನ್', ರಿಲೀಸ್‌ಗೂ ಮುನ್ನವೇ ಹಲವು ಸವಾಲುಗಳನ್ನು ಎದುರಿಸಿತ್ತು. ಸಿನಿಮಾದ ಹೆಚ್‌ಡಿ ಆವೃತ್ತಿ ಲೀಕ್ ಆಗಿದ್ದರೂ ಮತ್ತು ಸೆನ್ಸಾರ್ ಮಂಡಳಿಯಿಂದ 'ಎ' (A) ಪ್ರಮಾಣಪತ್ರ ದೊರೆತಿದ್ದರೂ, ಅಭಿಮಾನಿಗಳ ಕ್ರೇಜ್ ಮಾತ್ರ ಈವರೆಗೂ ಕಮ್ಮಿಯಾಗಿಲ್ಲ.
ಆದಾಗ್ಯೂ, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಈ ಚಿತ್ರ ಹೊಸ ದಾಖಲೆ ಬರೆದಿದ್ದು, ದೇಶಾದ್ಯಂತ ಕೇವಲ ಮುಂಗಡ ಬುಕಿಂಗ್‌ನಿಂದಲೇ 20 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. ಭಾರತದಾದ್ಯಂತ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಮತ್ತು ವಿದೇಶಗಳಲ್ಲೂ ಭಾರಿ ಬೇಡಿಕೆ ಹೆಚ್ಚಾಗಿದ್ದು, ಈ ಚಿತ್ರವು ವಿಜಯ್ ಅವರ ಹಿಂದಿನ ಹಿಟ್ ಸಿನಿಮಾಗಳಾದ 'ಲಿಯೋ' ಮತ್ತು 'ಗೋಟ್' ದಾಖಲೆಗಳನ್ನು ಮುರಿಯಲಿದೆಯೇ ಎಂದು ಕಾದು ನೋಡಬೇಕಿದೆ (ಏಜೆನ್ಸೀಸ್).