ಸೆಕೆಂಡ್​ ಆಫ್​ನಲ್ಲಿ 1000 ಕೋಟಿ ಕ್ಲಬ್ ಸೇರುವ ​ರೇಸ್​ನಲ್ಲಿ 4 ಬಿಗ್ ಬಜೆಟ್​ ಸಿನಿಮಾ 
ಸಿನಿವಾಣಿ

ಫಸ್ಟ್​ ಆಫ್​ ನೋ ಟಾಕ್​! ಸೆಕೆಂಡ್​ ಆಫ್​ನಲ್ಲಿ 1000 ಕೋಟಿ ಕ್ಲಬ್ ಸೇರುವ ​ರೇಸ್​ನಲ್ಲಿ 4 ಬಿಗ್ ಬಜೆಟ್​ ಸಿನಿಮಾ | Indian Cinemas

ಪ್ರಮುಖ ಮುಖ್ಯಾಂಶಗಳು

  • ಮೊದಲಾರ್ಧದಲ್ಲಿ 1000 ಕೋಟಿ ರೂ. ಗಳಿಸಿದ ಬಾಲಿವುಡ್ ಸಿನಿಮಾ
  • ದ್ವಿತೀಯಾರ್ಧದಲ್ಲಿ ದಕ್ಷಿಣ ಭಾರತದ ನಾಲ್ಕು ಸಿನಿಮಾಗಳ ಮೇಲೆ ದುಪ್ಪಟ್ಟು ನಿರೀಕ್ಷೆ
  • ಸಾವಿರ ಕೋಟಿ ಕ್ಲಬ್​ ಸೇರಲು ಸ್ಟಾರ್​ ನಟರ ಚಿತ್ರಗಳು ರೇಸ್​ನಲ್ಲಿ
Indian Cinemas: ಈ ವರ್ಷದ ಮೊದಲಾರ್ಧದಲ್ಲಿ ಸಿನಿ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡುವಲ್ಲಿ ಭಾರತೀಯ ಚಿತ್ರೋದ್ಯಮದ ಸಿನಿಮಾಗಳು ಯಶಸ್ವಿಯಾಗಿದ್ದೇ ಆದರೂ ಲಾಭದ ಹಾದಿಯಲ್ಲಿ ಎಡವಿರುವುದು ಕಳವಳಕಾರಿ. ಬಾಲಿವುಡ್​, ಮಾಲಿವುಡ್​, ಸ್ಯಾಂಡಲ್​ವುಡ್​, ಕಾಲಿವುಡ್​ ಮತ್ತು ಟಾಲಿವುಡ್​ ಪೈಕಿ ಹಿಂದಿ ಚಿತ್ರೋದ್ಯಮ ಮಾತ್ರ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಎರಡು ಭಾಗಗಳ ಮೂಲಕ ಭರ್ಜರಿ ಯಶಸ್ಸನ್ನು ಗಳಿಸಿ, 1,000 ಕೋಟಿ ರೂ. ಗಳಿಕೆಯನ್ನು ಮೀರಿದ್ದು ಗಮನಾರ್ಹ.
ಮೊದಲಾರ್ಧದಲ್ಲಿ ಬಾಲಿವುಡ್​ ಮುಂಚೂಣಿಯಲ್ಲಿದ್ದರೆ ಉಳಿದ ಚಿತ್ರರಂಗದ ಸಿನಿಮಾಗಳು ಸೆಕೆಂಡ್​ ಹಾಫ್​ನಲ್ಲಿ ದೊಡ್ಡ ಹಿಟ್​ ಕೊಡುವ ನಿರೀಕ್ಷೆಯಲ್ಲಿವೆ. ತಮಿಳಿನಲ್ಲಿ ಸಿಎಂ ವಿಜಯ್ ಅಭಿನಯದ ಕೊನೆ ಸಿನಿಮಾ 'ಜನ ನಾಯಗನ್' ದೊಡ್ಡ ಮಟ್ಟದಲ್ಲಿ ರಿಲೀಸ್​ ಕಂಡರೂ ಉತ್ತಮ ಗಳಿಕೆ ಕಾಣುವಲ್ಲಿ ಹಿನ್ನಡೆ ಅನುಭವಿಸಿದೆ. ಅಲ್ಲಿಗೆ, ವಿಜಯ್ ಚಿತ್ರವು 1000 ಕೋಟಿ ಕ್ಲಬ್​ ಸೇರುವ ನಿರೀಕ್ಷೆಗಳನ್ನು ಹುಸಿ ಮಾಡಿದೆ.
ವರದಿಗಳ ಪ್ರಕಾರ, ಮೊದಲಾರ್ಧದಲ್ಲಿ ಬಿಡುಗಡೆಯಾದ 'ಧುರಂಧರ್ 2' ಚಿತ್ರವು 1,800 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಿತು. ಈ ಹಿನ್ನಲೆಯಲ್ಲಿ 2026ರ ದ್ವಿತೀಯಾರ್ಧದಲ್ಲಿ ಯಾವ ಚಿತ್ರಗಳು ರಿಲೀಸ್​ ಆಗಲಿವೆ? ಯಾವ ಸ್ಟಾರ್ ನಟರ ಸಿನಿಮಾಗಳು ಈ 1000 ಕೋಟಿ ರೂ. ಕ್ಲಬ್​ ಸೇರಲು ಸಖತ್ ಪೈಪೋಟಿ ಕೊಡಬಹುದು ಎಂಬ ನಿರೀಕ್ಷೆ, ಕುತೂಹಲಕ್ಕೆ ಎಡಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ, ಭಾರತೀಯ ಚಿತ್ರೋದ್ಯಮದ ನಾಲ್ಕು ಬಹುನಿರೀಕ್ಷಿತ ಸಿನಿಮಾಗಳು ದ್ವಿತೀಯಾರ್ಧದಲ್ಲಿ ಭರ್ಜರಿ ಓಪನಿಂಗ್ ಮೂಲಕ ದಾಖಲೆ ಮುರಿಯಲು, ನಿರ್ಮಿಸಲು ಪಣತೊಟ್ಟಿವೆ.

ಯಾವುದು ಆ 4 'ಬಿಗ್' ಸಿನಿಮಾ?

ಟಾಕ್ಸಿಕ್: 'ಕೆಜಿಎಫ್ 2' ಮೂಲಕ ಬಾಕ್ಸ್​ ಆಫೀಸ್‌ನಲ್ಲಿ 1200 ಕೋಟಿ ರೂ. ದಾಖಲಿಸಿದ್ದ ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್​ ಯಶ್,​ ಈಗ ನಾಲ್ಕು ವರ್ಷಗಳ ಬಳಿಕ ಪ್ಯಾನ್​ ವರ್ಲ್ಡ್​ 'ಟಾಕ್ಸಿಕ್' ಮುಖಾಂತರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದ್ದಾರೆ. ಈಗಾಗಲೇ ಮೊದಲ ಟೀಸರ್​, ಟ್ರೇಲರ್​ ನೋಡಿರುವ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆಗಳು ಮೂಡಿದ್ದು, ಇದೇ ಆ.26ರಂದು ಚಿತ್ರವು ದೇಶ-ವಿದೇಶಗಳ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಗೀತು ಮೋಹನ್​ದಾಸ್​ ನಿರ್ದೇಶನ ಹಾಗೂ ಯಶ್​ ಅವರ ಆ್ಯಕ್ಷನ್​ ಕಾಂಬೊ ಸಿನಿಮಾ 1000 ಕೋಟಿ ಮಾರ್ಕ್ ಮಾಡುವ ನಿರೀಕ್ಷೆಗಳು ಚಿತ್ರೋದ್ಯಮದ ವಲಯದಲ್ಲಿ ಜೋರಾಗಿ ಸದ್ದು ಮಾಡಿವೆ.

ಫೌಜಿ

ಈಗಾಗಲೇ 'ಬಾಹುಬಲಿ 2' ಮತ್ತು 'ಕಲ್ಕಿ 2898 ಎಡಿ' ಚಿತ್ರಗಳ ಮೂಲಕ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ಎರಡು ಬಾರಿ 1000 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಏಕೈಕ ಸೌತ್ ಹೀರೋ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಪ್ರಭಾಸ್ ಅಭಿನಯದ, ಹನು ರಾಘವಪುಡಿ ನಿರ್ದೇಶನದ ಪಿರಿಯಾಡ್ ಆಕ್ಷನ್ ಡ್ರಾಮಾ 'ಫೌಜಿ' ಡಿಸೆಂಬರ್ 3ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪ್ರಭಾಸ್ ಕ್ರೇಜ್ ಸದಾ ಡಬಲ್​ ಆಗಿರುವ ಹಿನ್ನಲೆಯಲ್ಲಿ ಈ ಚಿತ್ರದ ಮೂಲಕ ಅವರು ಮತ್ತೊಮ್ಮೆ 1000 ಕೋಟಿ ಕಲೆಕ್ಷನ್ ಮಾಡುವುದು ಕಷ್ಟವೇನಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಆದ್ರೆ, ಬಾಹುಬಲಿ ನಂತರ ಸತತ ಸೋಲುಗಳನ್ನೇ ನೋಡಿರುವ ಪ್ರಭಾಸ್​, ಫೌಜಿ ಮೂಲಕ ಕಮಾಲ್​ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಜೈಲರ್ 2

ಈ ಹಿಂದೆ 723 ಕೋಟಿ ಗಳಿಸಿದ '2.0' ಚಿತ್ರದ ಮೂಲಕ ಅಗ್ರಸ್ಥಾನದಲ್ಲಿದ್ದ ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಇನ್ನೂ 1000 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಅನ್ನೋದು ನಟನ ಅಭಿಮಾನಿಗಳಲ್ಲಿ ಬೇಸರವಿದೆ. ಆದರೆ, ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಿಟ್ ಸೀಕ್ವೆಲ್​ ‘ಜೈಲರ್ 2’ ಸದ್ಯ ಸಾವಿರ ಕೋಟಿ ಕ್ಲಬ್​ ಸೇರುವ ಭರವಸೆಯನ್ನು ಚಿತ್ರತಂಡಕ್ಕೆ ನೀಡಿದೆ. ಜೈಲರ್​ ಮುಂದುವರಿದ ಭಾಗದಲ್ಲಿ ಅತಿಥಿ ಪಾತ್ರಗಳಲ್ಲಿ ಯಾವ ಸ್ಟಾರ್​ ಹಾಗೂ ದಿಗ್ಗಜ ನಟರು ಕಾಣಿಸಿಕೊಳ್ಳಬಹುದು, ಕಥೆ ಹೇಗಿರಲಿದೆ ಎಂಬ ಕುತೂಹಲ ಚಿತ್ರಕ್ಕೆ ದೊಡ್ಡ ಯಶಸ್ಸು ತಂದುಕೊಡುವ ಸಾಧ್ಯತೆ ಹೆಚ್ಚಿದೆ.

ರಾಮಾಯಣ

ಭಾರತದ ಮಹಾಕಾವ್ಯವನ್ನು ಆಧಾರಿಸಿ ಅತಿದೊಡ್ಡ ಬಜೆಟ್‌ನಲ್ಲಿ ನಿರ್ಮಿಸುತ್ತಿರುವ ನಿತೀಶ್​ ತಿವಾರಿ ಅವರ ‘ರಾಮಾಯಣ’ ಚಿತ್ರಕ್ಕೆ ದೇಶಾದ್ಯಂತ ಸಖತ್​ ಕ್ರೇಜ್‌ ಶುರುವಾಗಿದೆ. ರಣಬೀರ್ ಕಪೂರ್ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಪ್ಯಾನ್-ಇಂಡಿಯನ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಲು ಪಣತೊಟ್ಟಿದೆ ಎಂಬುದಂತು ಸತ್ಯ. ಇತ್ತೀಚೆಗಷ್ಟೇ, ತಡರಾತ್ರಿ ರಿಲೀಸ್ ಆದ ಟ್ರೇಲರ್ ಸದ್ಯ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿದೆ. ಈ ನಾಲ್ಕು ಬಿಗ್ ಚಿತ್ರಗಳಲ್ಲಿ ಯಾವುದು ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ಮೈಲಿಗಲ್ಲನ್ನು ತಲುಪಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).