- ಬಾಹುಬಲಿ ನಂತರ ಇಲ್ಲ ಯಾವುದೇ ಸೂಪರ್ಹಿಟ್
- ಇತ್ತೀಚಿಗೆ ತೆರೆಕಂಡ 'ರಾಜ ಸಾಬ್' ಚಿತ್ರವು ಸೋಲಿನೆಡೆಗೆ...
- ಯಾವ ಕಾರಣಕ್ಕೆ ಸರಣಿ ಪ್ಲಾಪ್ ಆಗುತ್ತಿವೆ ಪ್ರಭಾಸ್ ಚಿತ್ರಗಳು
ಹೈದರಾಬಾದ್: ಬ್ಲಾಕ್ಬಸ್ಟರ್ ಬಾಹುಬಲಿ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಪ್ರಭಾಸ್ ( Actor Prabhas ) ಅದ್ಯಾಕೋ ಸರಣಿ ಸೋಲುಗಳಿಂದ ತತ್ತರಿಸಿದ್ದಾರೆ. ಇದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಗೊಂಡ 'ರಾಜ ಸಾಬ್' ಚಿತ್ರದ ಸೋಲೇ ಮತ್ತೊಂದು ಬಲವಾದ ಸಾಕ್ಷಿ.
'ಬಾಹುಬಲಿ' ಬಳಿಕ ಯಾವುದೇ ಹಿಟ್ ಇಲ್ಲ....
'ಬಾಹುಬಲಿ' ನಂತರ ಬಂದ ಯಾವ ಸಿನಿಮಾಗಳು ಕೂಡ ಪ್ರಭಾಸ್ಗೆ ಅಷ್ಟರಮಟ್ಟಿಗೆ ಯಶಸ್ಸು ತಂದುಕೊಟ್ಟಿಲ್ಲ. 'ಸಾಹೋ', 'ರಾಧೆಶ್ಯಾಮ್', 'ಆದಿಪುರುಷ' ಸಿನಿಮಾಗಳು ಫ್ಲಾಪ್ ಆದವು. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದರು ಕೂಡ ನಿರೀಕ್ಷೆಯ ಮಟ್ಟ ತಲುಪಲಿಲ್ಲ. ಅದಾದ ಬಳಿಕ ದೊಡ್ಡ ಮಟ್ಟದಲ್ಲಿ ತೆರೆಕಂಡ 'ಕಲ್ಕಿ' ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಆದರೆ, ಅದು ಬಹುತಾರಾಗಣ ಸಿನಿಮಾ ಆದ್ದರಿಂದ ಪ್ರಭಾಸ್ ಒಬ್ಬರಿಗೆ ಯಶಸ್ಸಿನ ಕ್ರೆಡಿಟ್ ಸಲ್ಲಲಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಹೀಗಾಗಿ ಪ್ರಭಾಸ್ ಅವರು ಒಂದು ಬಹುದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿರುವುದು ಖಚಿತ. ಅಸಲಿಗೆ, ಅವರ ಅಪಾರ ಅಭಿಮಾನಿಗಳ ಬಳಗ 'ರಾಜ ಸಾಬ್' ಚಿತ್ರದಲ್ಲಿ ಆ ಯಶಸ್ಸನ್ನು ನೋಡಲು ಕಾತರ ವ್ಯಕ್ತಪಡಿಸಿದ್ದರು. ಆದರೆ, ಈ ಸಿನಿಮಾವು ಸೋಲಿನ ಹಾದಿ ಹಿಡಿದದ್ದು, ಸದ್ಯ ಪ್ರಭಾಸ್ ಫ್ಯಾನ್ಸ್ಗಳಲ್ಲಿ ತೀರ ಬೇಸರ ಮೂಡಿಸಿದೆ. ನಟನ ಪ್ರತಿ ಚಿತ್ರಕ್ಕೂ ತೀವ್ರ ಕುತೂಹಲ ವ್ಯಕ್ತಪಡಿಸುವ ಅಭಿಮಾನಿಗಳಿಗೆ ಮತ್ತು ಸಿನಿಪ್ರಿಯರಿಗೆ ಟಾಲಿವುಡ್ ರೆಬೆಲ್ ಸ್ಟಾರ್ನಿಂದ ಒಂದೊಳ್ಳೆ ಸಿನಿಮಾ ಸಿಗುತ್ತಿಲ್ಲ.
'ಸ್ಪಿರಿಟ್' ಮೇಲೆ ಎಲ್ಲರ ಕಣ್ಣು!
ಈಗ ಮುಂದಿರುವುದು ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ ಹಾಗೂ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸ್ಪಿರಿಟ್' ಸಿನಿಮಾ. ಇದೊಂದು ಚಿತ್ರದ ಮೇಲೆ ಸದ್ಯ ಅಪಾರ ನಿರೀಕ್ಷೆಗಳು ಮೂಡಿದ್ದು, ಖಂಡಿತವಾಗಿ ಈ ಚಿತ್ರ ಪ್ರಭಾಸ್ಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡಬಹುದು ಎಂಬ ಲೆಕ್ಕಾಚಾರವನ್ನು ಅಭಿಮಾನಿಗಳು ಹಾಕಿಕೊಂಡಿದ್ದಾರೆ. ಆದರೆ, ಏನಾಗಲಿದೆ ಎಂಬುದನ್ನು ರಿಲೀಸ್ ಆಗುವವರೆಗೆ ಕಾದು ನೋಡಬೇಕಿದೆ.
ಕಥೆ ಆಯ್ಕೆಯಲ್ಲಿ ಎಡವುತ್ತಿದ್ದಾರಾ ಪ್ರಭಾಸ್?
ಬಾಹುಬಲಿ ನಂತರದಲ್ಲಿ ಯಾವ ಸಿನಿಮಾಗಳಿಂದಲೂ ಅಂತಹ ಯಶಸ್ಸು ಪ್ರಭಾಸ್ ಸಿಗದಿರುವುದು ಅಚ್ಚರಿಯೇ. ಕಟ್ಟುಮಸ್ತಾದ ದೇಹ, ಸ್ಟೈಲಿಶ್ ಲುಕ್, ಮಸ್ತ್ ಅಭಿನಯ ಸೇರಿದಂತೆ ಹಲವು ವಿಷಯಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುವ ರೆಬೆಲ್ ಸ್ಟಾರ್, ಅತೀ ಮುಖ್ಯವಾಗಿ ಕಥೆಯ ಆಯ್ಕೆಯಲ್ಲಿ ತಪ್ಪು ಮಾಡುತ್ತಿದ್ದಾರಾ? ಎಂಬ ಅನುಮಾನ, ಗೊಂದಲಗಳು ಕಾಡಲಾರಂಭಿಸಿವೆ. ಇದು ಅಭಿಮಾನಿಗಳಲ್ಲಿ ತೀರ ಬೇಸರ ತಂದೊಡ್ಡಿದೆ. ಬಹುನಿರೀಕ್ಷಿತ 'ಸ್ಪಿರಿಟ್'ನಲ್ಲಿ ನಟನ ಚಿತ್ರ ಗೆಲ್ಲಲಿ, ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂಬ ಹೆಬ್ಬಯಕೆ ಪ್ರಭಾಸ್ ಫ್ಯಾನ್ಸ್ಗಳದ್ದು,(ಏಜೆನ್ಸೀಸ್).