Vijay Deverakonda (ಚಿತ್ರ Instagram)
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಉದ್ಯಮ ಸ್ನೇಹಿತರಿಗಾಗಿ ಹೈದರಾಬಾದ್ನಲ್ಲಿ ಮಾರ್ಚ್ 4 ರಂದು ಅದ್ದೂರಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಸಂಭ್ರಮದ ನಡುವೆ ವಿಜಯ್ ಅವರಿಗೆ ಪುಟ್ಟ ಅಭಿಮಾನಿಯೊಬ್ಬರು ನನ್ನನ್ನೇಕೆ ಮದುವೆಗೆ ಆಹ್ವಾನಿಲ್ಲ ಎಂದು ವಿಡಿಯೋ ಮೂಲಕ ಪ್ರಶ್ನೆಯನ್ನು ಮಾಡಿದ್ದಾಳೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ನಟ ಸ್ವತಃ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲೇನಿದೆ?
ವೈರಲ್ ಆದ ವಿಡಿಯೋದಲ್ಲಿ ವಿಜಯ್- ರಶ್ಮಿಕಾ ವಿವಾಹವಾಗಿದ್ದಾರೆ. ಮದುವೆಯಲ್ಲಿ ಆಪ್ತರು ಮತ್ತು ಕುಟುಂಬದವರಷ್ಟೇ ಭಾಗಿಯಾಗಿದ್ದರು. ಆದರೆ ನಮಗ್ಯಾಕೆ ಆಹ್ವಾನಿಸಿಲ್ಲ. ನಾನು ಕೂಡಾ ನಿಮ್ಮ ಅಭಿಮಾನಿಯಲ್ಲವೇ? ನಮ್ಮ ಬಗ್ಗೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಕಾಮೆಂಟ್ ಬಾಕ್ಸ್ನಲ್ಲಿ ಪ್ರತಿಕ್ರಿಯಿಸಿದ ನಟ ಬುಜ್ಜಿ ನಾನು ನಿನ್ನನ್ನು ಊಟಕ್ಕೆ ಮನೆಗೆ ಕರೆಯುತ್ತೇನೆ. ನಿನ್ನ ನೆಚ್ಚಿನ ಆಹಾರ ಮತ್ತು ಸಿಹಿತಿಂಡಿಗಳನ್ನು ಹೇಳು, ನಾನು ಅದನ್ನೆಲ್ಲವನ್ನೂ ಮನೆಯಲ್ಲಿ ಮಾಡಿಸಿಡುತ್ತೇನೆ ಎಂದು ಹೇಳಿದ್ದಾರೆ.
ವಿವಾಹದ ನಂತರ ದಂಪತಿ ಭಾರತದ ಅನೇಕ ನಗರಗಳಲ್ಲಿ ಸಿಹಿ-ತಿಂಡಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಈ ವೇಳೆ ತಮ್ಮ ಎಕ್ಸ್ ಖಾತೆಯಲ್ಲಿ ಈ ದೇಶದ ಸುಂದರ ಜನರಿಗೆ.. ನೀವು ಯಾವಾಗಲೂ ನಮ್ಮ ಪ್ರಯಾಣ ಮತ್ತು ನಮ್ಮ ಪ್ರೀತಿಯ ಭಾಗವಾಗಿದ್ದೀರಿ. ನಮ್ಮ ಮದುವೆಯನ್ನು ನಿಮ್ಮೆಲ್ಲರೊಂದಿಗೆ ಆಚರಿಸಲು ನಮಗೆ ನಿಜವಾಗಿಯೂ ಸಂತೋಷವಾಗುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ಮಾರ್ಚ್ 1 ರಂದು ನಾವು ಪ್ರೀತಿ ಮತ್ತು ಸಿಹಿತಿಂಡಿಗಳಿಂದ ತುಂಬಿದ ವಾಹನವನ್ನು ಕಳುಹಿಸುತ್ತಿದ್ದೇವೆ. ನಮ್ಮ ಜೀವನದ ಈ ದೊಡ್ಡ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಸಲುವಾಗಿ ದೇಶಾದ್ಯಂತ ಅನೇಕ ದೇವಾಲಯಗಳಲ್ಲಿ ನಾವು ಅನ್ನದಾನ ಮಾಡುತ್ತೇವೆ ಎಂದು ಬರೆದಿದ್ದಾರೆ.
ಹೈದರಾಬಾದ್, ಮಹೆಬೂಬ್‌ನಗರ, ಕರೀಂನಗರ, ದೆಹಲಿ, ಚಂಡೀಗಢ, ನೋಯ್ಡಾ, ಗಾಜಿಯಾಬಾದ್, ಅಹಮದಾಬಾದ್, ಭೋಪಾಲ್, ಮುಂಬೈ, ಜೈಪುರ, ವೈಜಾಗ್, ವಿಜಯವಾಡ, ಪುಟ್ಟಪರ್ತಿ, ಕೊಚ್ಚಿ, ಮೈಸೂರು, ಕೂರ್ಗ್, ಬೆಂಗಳೂರು, ಕೊಯಮತ್ತೂರು, ಚೆನ್ನೈ ಮತ್ತು ಪಾಂಡಿಚೇರಿ ಸೇರಿದಂತೆ ನಗರಗಳಲ್ಲಿ ಸಿಹಿ ಹಂಚಿ ಸಂಭ್ರಮ ಮಾಡಿದರು (ಏಜೆನ್ಸೀಸ್).