- ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬುಗೆ ಲೆಜೆಂಡರಿ ಡೈರೆಕ್ಟರ್ ರಾಜಮೌಳಿ ನಿರ್ದೇಶನ
- ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಸಿನಿಮಾದ ಶೀರ್ಷಿಕೆ ಬಿಡುಗಡೆ ಸಮಾರಂಭ
- ಬಹುನಿರೀಕ್ಷಿತ ಸಿನಿಮಾಗೆ ವಾರಣಾಸಿ ಎಂದು ನಾಮಕರಣ
- ದಾಖಲೆ ಬರೆಯುವಲ್ಲಿ ಫೇಲಾದ ವಾರಣಾಸಿ ಟೀಸರ್
Varanasi : ಲೆಜೆಂಡರಿ ಡೈರೆಕ್ಟರ್ ರಾಜಮೌಳಿ ಹಾಗೂ ಟಾಲಿವುಡ್ ಸೂಪರ್ಸ್ಟಾರ್ ಮಹೇಶ್ ಬಾಬು ಜುಗಲ್ಬಂದಿಯಲ್ಲಿ ಮೂಡಿಬರಲಿರುವ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆ ಬಿಡುಗಡೆ ಸಮಾರಂಭ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನವೆಂಬರ್ 15ರಂದು ಅದ್ಧೂರಿಯಾಗಿ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಈ ಚಿತ್ರಕ್ಕೆ ವಾರಣಾಸಿ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ, ವಾರಣಾಸಿ ಅನ್ನೋದು ಉತ್ತರ ಪ್ರದೇಶದ ಒಂದು ಪವಿತ್ರ ನಗರ. ಈ ಸಿನಿಮಾಗೂ ವಾರಣಾಸಿಗೂ ಏನು ಸಂಬಂಧ ಅನ್ನೋದು ಸಿನಿಮಾ ಬಿಡುಗಡೆ ಬಳಿಕ ಗೊತ್ತಾಗಲಿದೆ.
ಇನ್ನು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ 3 ನಿಮಿಷದ ಒಂದು ಗ್ಲಿಂಪ್ಸ್ ಅನ್ನು ಚಿತ್ರತಂಡ ಹಂಚಿಕೊಂಡಿತು. ತುಂಬಾ ಅದ್ಧೂರಿಯಾಗಿ ಮೂಡಿಬಂದಿರುವ ಗ್ಲಿಂಪ್ಸ್ ನೋಡಿದ ಬಳಿಕ ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಅಚ್ಚರಿ ಏನೆಂದರೆ, ಗ್ಲಿಂಪ್ಸ್ನಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಆದ್ದರಿಂದ ಈ ಟೀಸರ್ ಎಲ್ಲಾ ಭಾಷೆಗಳ ಜನರಿಗೆ ಸುಲಭವಾಗಿ ಕನೆಕ್ಟ್ ಆಗುತ್ತಿದೆ.
ಟೀಸರ್ ನೋಡಿದ ಅಭಿಮಾನಿಗಳು ದಾಖಲೆಯ ಸಂಖ್ಯೆಯ ವೀಕ್ಷಣೆಗಳನ್ನು ನಿರೀಕ್ಷಿಸಿದ್ದರು. ಆದಾಗ್ಯೂ, ಎಲ್ಲಾ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಲ್ಲಿ ಇನ್ನೂ 20 ಮಿಲಿಯನ್ ವೀಕ್ಷಣೆಗಳನ್ನು ಸಹ ದಾಟಿಲ್ಲ. ಈ ಕ್ಷಣದವರೆಗೆ ಟಿ-ಸೀರೀಸ್‌ನ ಮುಖ್ಯ ಚಾನೆಲ್ನಲ್ಲಿ ಕೇವಲ 16 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ, ಟಿ-ಸೀರೀಸ್ ತೆಲುಗು ಚಾನೆಲ್ನಲ್ಲಿ 1.7 ಮಿಲಿಯನ್, ಟಿ-ಸೀರೀಸ್ ಮಲಯಾಳಂನಲ್ಲಿ 2 ಲಕ್ಷ ಮತ್ತು ಟಿ-ಸೀರೀಸ್ ತಮಿಳಿನಲ್ಲಿ 6 ಲಕ್ಷ ವೀಕ್ಷಣೆಗಳನ್ನು ಮಾತ್ರ ಕಂಡಿವೆ.
ವೀಕ್ಷಣೆಗಳ ಸಂಖ್ಯೆ ನೋಡಿದವರು ಏನಾಯ್ತು? ಏಕೆ ವೀವ್ಸ್ ಬರುತ್ತಿಲ್ಲ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ, ನೋಡುಗರಿಗೆ ಈ ಸಂಖ್ಯೆಗಳು ಕಡಿಮೆ ಎನಿಸಬಹುದು ಆದರೆ, ವಾಸ್ತವದಲ್ಲಿ, ಈ ಎಲ್ಲಾ ವೀಕ್ಷಣೆಗಳು ಸಂಪೂರ್ಣವಾಗಿ ಅರ್ಗ್ಯಾನಿಕ್ ಆಗಿದೆ. ಅಂದರೆ, ಯೂಟ್ಯೂಬ್ಗೆ ಯಾವುದೇ ಹಣ ಪಾವತಿಸದೇ ಸಹಜವಾಗಿ ಪಡೆದ ವೀಕ್ಷಣೆಗಳಾಗಿವೆ.
ಕೆಲವು ತೆಲುಗು ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ಗಳು ಒಂದು ದಿನದಲ್ಲಿ 40 ರಿಂದ 50 ಮಿಲಿಯನ್ ವೀಕ್ಷಣೆಗಳನ್ನು ಪಡೆಯುತ್ತವೆ. ಏಕೆಂದರೆ, ಹಣ ಕೊಟ್ಟು ಜಾಹೀರಾತು ಮಾಡಿಸಲಾಗಿರುತ್ತದೆ. ಆದರೆ, ರಾಜಮೌಳಿ ಅವರು ಹಣ ಕೊಟ್ಟು ಜಾಹೀರಾತು ಮಾಡಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಯಾರಾದರೂ ಹಣ ಪಾವತಿಸುವ ಮೂಲಕ ವೀಕ್ಷಣೆಗಳನ್ನು ಹೆಚ್ಚಿಸಲು ಬಯಸಿದರೆ, ವಾರಣಾಸಿ ಟೀಸರ್ ಅವರಿಗೆ ಉತ್ತಮ ಉದಾಹರಣೆಯಾಗಲಿದೆ. ಏಕೆಂದರೆ, ಟೀಸರ್ಗೆ ಸಹಜವಾಗಿಯೇ ಉತ್ತಮ ಪ್ರತಿಕ್ರಿಯೆ ಬಂದಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಇದೇ ಮೊದಲ ಬಾರಿಗೆ ರಾಜಮೌಳಿ ಮತ್ತು ಮಹೇಶ್ ಬಾಬು ಒಂದಾಗಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಪ್ರಿಯಾಂಕಾ ಚೋಪ್ರಾ ಈ ಚಿತ್ರದ ನಾಯಕಿ. ಖಳನಟನಾಗಿ ಮಲಯಾಳಂ ಪೃಥ್ವಿರಾಜ್ ನಟಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ. ಕೆ.ಎಲ್. ನಾರಾಯಣ್ ಅವರ ಶ್ರೀ ದುರ್ಗಾ ಆರ್ಟ್ಸ್ ವತಿಯಿಂದ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ, (ಏಜೆನ್ಸೀಸ್).