ನಟ ಶಿವಾಜಿ ವಿವಾದಾತ್ಮಕ ಹೇಳಿಕೆಗೆ ಭಾರೀ ವಿವಾದ
- ಸಿನಿಮಾ ಪ್ರೀ-ರಿಲೀಸ್ ಈವೆಂಟ್ ವೇಳೆ ಮಾತಿನಲ್ಲಿ ಎಡವಟ್ಟು
- ನಟ ಶಿವಾಜಿ ಹೇಳಿಕೆಗೆ ಟಾಲಿವುಡ್ ಕೆಂಡಾಮಂಡಲ
- ನಟನ ವಿವಾದಾತ್ಮಕ ಹೇಳಿಕೆಗೆ ನಟಿಮಣಿಯರು ಕಿಡಿ
ಆಂಧ್ರಪ್ರದೇಶ: ಟಾಲಿವುಡ್ ಅಂಗಳದಲ್ಲಿ ಸದ್ಯ ನಟ ಶಿವಾಜಿ ನೀಡಿರುವ ಒಂದೇ ಒಂದು ಹೇಳಿಕೆ ಭಾರೀ ವಿವಾದಕ್ಕೆ ಗುರಿಯಾಗಿದೆ. ಇತ್ತೀಚೆಗೆ ನಡೆದ 'ದಂಡೋರ' ಚಿತ್ರದ ಪ್ರೀ-ರಿಲೀಸ್ ಈವೆಂಟ್ ವೇದಿಕೆಯಲ್ಲಿ ಶಿವಾಜಿ, ನಟಿಯರು ಮೈತುಂಬ ಸೀರೆ ಉಟ್ಟರೆ ಚೆಂದ, ಅಂದ. ಅದನ್ನು ಬಿಟ್ಟು ದೇಹದ ಅಂಗಾಂಗ ಕಾಣುವಂತ ಬಟ್ಟೆಗಳನ್ನು ಧರಿಸುವುದು ಸರಿಯಲ್ಲ ಎಂದರು. ಈ ಹೇಳಿಕೆ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೆಲುಗು ನಟಿಮಣಿಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಮೈತುಂಬಾ ಸೀರೆ ಉಟ್ಟರೆ ಚೆಂದ, ಅಂದ...
ಶಿವಾಜಿ ಹೇಳಿಕೆ ಬೆನ್ನಲ್ಲೇ ಕಿಡಿಕಾರಿದ ನಟ ಕಮಲ್ ಕಾಮರಾಜು, "ಮಹಿಳೆಯರು ಏನು ಧರಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆ. ಅದು ಪುರುಷರ ತೀರ್ಪಿಗಾಗಿ ಅಲ್ಲ" ಎಂದರು. ಇನ್ನು ನಿರೂಪಕಿ, ನಟಿ ಅನುಸೂಯ ಭಾರಧ್ವಾಜ್ ಕೂಡ ಧ್ವನಿ ಎತ್ತಿದ್ದು, ನನಗೆ ವೈಯಕ್ತಿಕವಾಗಿ ಅನಿಸುವುದು, ಡ್ರೆಸ್ಸಿಂಗ್ ಎನ್ನುವುದು ಯಾರದ್ದೋ ವೈಯಕ್ತಿಕ ವಿಷಯ. ಆಹಾರ ಮತ್ತು ಬಟ್ಟೆಗಳು ಅವರ ಇಚ್ಛೆಯಂತೆ ಇರಬೇಕು. ನಮ್ಮ ಆರಾಮದಾಯಕ, ನಮ್ಮ ಆಯ್ಕೆ ಅಷ್ಟೇ! ನಿಮಗೆ ಹೇಗೆ ಸಾಂಬರ್ ಬೇಡ, ಬಿರಿಯಾನಿ ಬೇಕು ಎಂಬ ಬಯಕೆಯೋ, ಅಂತೆಯೇ, ನಮಗೆ ಡ್ರೆಸ್‌ಗಳು. ಈ ವಿಚಾರದಲ್ಲಿ ಶಿವಾಜಿ ಬಗ್ಗೆ ನನಗೆ ಬೇಸರವಿದೆ. ಅವರ ಮನಸ್ಥಿತಿ ಒಪ್ಪುವಂತದ್ದಲ್ಲ" ಎಂದಿದ್ದಾರೆ.
ಶಿವಾಜಿ ನೀಡಿದ ವಿವಾದಾತ್ಮಕ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟ ಮಂಚು ಮನೋಜ್, ಗಾಯಕಿ ಚಿನ್ಮಯಿ ಶ್ರೀಪಾದಾ ಸೇರಿ ಹಲವರು ತೀವ್ರ ಅಸಮಧಾನ ಹೊರಹಾಕಿದ್ದಾರೆ. ಇನ್ನು ಶಿವಾಜಿ ಹೇಳಿಕೆಗೆ ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ನೆರೆಲ್ಲಾ ಶಾರದಾ ಪ್ರತಿಕ್ರಿಯಿಸಿ, "ನಮ್ಮ ತಂಡ ಈಗಾಗಲೇ ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಟನ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸುತ್ತಿದೆ" ಎಂದಿದ್ದಾರೆ.
ವಿಡಿಯೋ ಮೂಲಕ ಕ್ಷಮೆಯಾಚನೆ
ತನ್ನ ಹೇಳಿಕೆಗೆ ಭಾರೀ ವಿರೋಧದ ಬೆನ್ನಲ್ಲೇ ವಿಡಿಯೋ ಮೂಲಕ ಕ್ಷಮೆಯಾಚಿಸಿರುವ ಶಿವಾಜಿ, ನನ್ನ ಉದ್ದೇಶ ಅದಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವು ಸ್ಥಳಗಳಲ್ಲಿ ನಾಯಕಿಯರು ತೊಂದರೆಯಲ್ಲಿ ಸಿಲುಕುತ್ತಿದ್ದಾರೆ. ಪ್ರೀ-ರಿಲೀಸ್ ಈವೆಂಟ್ನಲ್ಲಿ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಲು ಬಯಸಿದ್ದೆ. ಇಲ್ಲಿ ನಾನು ಎರಡು ಕೆಟ್ಟ ಪದಗಳನ್ನು ಬಳಸಿದ್ದೇನೆ. ನಾನು ಎಲ್ಲಾ ಹುಡುಗಿಯರ ಬಗ್ಗೆ ಮಾತನಾಡಿಲ್ಲ. ಕೇವಲ ನಟಿಮಣಿಯರನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದೇನೆ. ಹೀರೋಯಿನ್ಗಳು ಹೊರಗೆ ಹೋಗುವಾಗ ತಮ್ಮ ಉಡುಗೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದರೆ ಅವರಿಗೆ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂಬ ಉದ್ದೇಶದಿಂದ ಆ ರೀತಿ ಮಾತನಾಡಿದ್ದೇನೆ ಅಷ್ಟೇ. ಇಲ್ಲಿ ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಸ್ಪಷ್ಟತೆ ನೀಡಿದ್ದಾರೆ,(ಏಜೆನ್ಸೀಸ್).