ಮುಂಬೈ: ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಗಜ' ಹಿಂದಿಯಲ್ಲಿ ಆಮೀರ್ ಖಾನ್ ಜೊತೆ 'ಗಜಿನಿ', 'ಲಗಾನ್' ಮೊದಲಾದ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ, ಹಾಗೂ ತಮ್ಮ ಅದ್ಭುತ ಖಳ ಪಾತ್ರಗಳಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಖ್ಯಾತ ನಟ ಪ್ರದೀಪ್ ರಾವತ್ ಇಂದು (ಮಂಗಳವಾರ, ಆ.4) ತಮ್ಮ 74 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ರಾವತ್, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಂತರ ಬೆರೊಂದು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತೆಂದು ಹೇಳಲಾಗುತ್ತಿದೆ.
ಕುಟುಂಬ ವರ್ಗ ನೀಡಿರುವ ಮಾಹಿತಿ ಪ್ರಕಾರ ಪ್ರದೀಪ್ ರಾವತ್ ಕಳೆದ 5 ವರ್ಷಗಳಿಂದ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಭೀವಂಡಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಗೆಳೆಯನ ಸಾವನ್ನು ನೆನೆದ ಯಶ್ಪಾಲ್ ಶರ್ಮಾ!
ಪ್ರದೀಪ್ ರಾವತ್ ನಿಧನರಾದ ಮಾಹಿತಿಯನ್ನು ಹಿಂದಿ ಚಿತ್ರರಂಗದ ಹಿರಿಯ ನಟ ಹಾಗೂ ಪ್ರದೀಪ್ ರಾವತ್ ಅವರ ಆತ್ಮೀಯರಾದ ಯಶ್ಪಾಲ್ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಜೊತೆ ಲಗಾನ್, ಗಜಿನಿ ನಲ್ಲಿ ನಟಸಿ ಲಗಾನ್ನ ದೇವಾ ಎಂದೇ ಖ್ಯಾತರಾದ ಪ್ರದೀಪ್ ರಾವತ್ ಇಂದು ನಮ್ಮನ್ನು ಅಗಲಿದ್ದಾರೆ. ಅವರ ಅತ್ಮಕ್ಕೆ ಶಾಂತಿ ದೊರೆಯಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಅವರು ಬರೆದುಕೊಂಡಿದ್ದಾರೆ, (ಏಜನ್ಸೀಸ್).