ದ ರಾಜಾಸಾಬ್ ಚಿತ್ರದ ಪೋಸ್ಟರ್
- ದೀರ್ಘ ಕಥೆಯಲ್ಲಿ ಹಿಡಿದಿಟ್ಟುಕೊಳ್ಳುವ ಅಂಶಗಳು ವಿರಳ
- ಮೂವರು ನಾಯಕಿಯರ ಜತೆ ಹಾಡು, ಹರಟೆಯಲ್ಲಿ ಮುಗಿದ ಕಥೆ
- ನಿರ್ದೇಶಕ ಮಾರುತಿ ಬರವಣಿಗೆಗೆ ಹೆಚ್ಚು ಅವಕಾಶ ನೀಡಬೇಕಿತ್ತು
ತಾರಾಗಣ: ಪ್ರಭಾಸ್, ಸಂಜಯ್ ದತ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿದ್ದಿ ಕುಮಾರ್, ಜರೀನಾ ವಹಾಬ್ ಮತ್ತಿತರರು.
ದೇವನಗರ ಸಂಸ್ಥಾನದ ಜಮೀನ್ದಾರ ವಂಶದ ಮನೆಮಗಳು ಗಂಗಾದೇವಿ, ಕನಕರಾಜು (ಸಂಜಯ್ ದತ್) ಎಂಬ ಮಾಂತ್ರಿಕನ ಮೋಡಿಗೆ ಒಳಗಾಗಿ ಆತನನ್ನು ಮದುವೆಯಾಗುತ್ತಾಳೆ. ಖಜಾನೆ ಬೀಗ ಕೈಗೆ ಸಿಕ್ಕ ತಕ್ಷಣ ಕನಕರಾಜು ಮನೆತನದ ಇಡೀ ಸಂಪತ್ತು ದೋಚಿ ದೇಶಾಂತರವಾಗುತ್ತಾನೆ. ಗಂಡ ಮಾಡಿದ ತಪ್ಪಿಗೆ ಗಂಗಾದೇವಿಯನ್ನು ಮನೆಯವರು ಹೊರ ಹಾಕುತ್ತಾರೆ. ಮುಂದೆ ಆಕೆ ನಗರಕ್ಕೆ ಬಂದು ಮೊಮ್ಮಗ ರಾಜಾಸಾಬ್ (ಪ್ರಭಾಸ್) ಜತೆ ಜೀವನ ಮುಂದುವರಿಸುತ್ತಾಳೆ. ವಯಸ್ಸಾಗಿ ಮರೆಗುಳಿ ಕಾಯಿಲೆಯಿದ್ದರೂ ಗಂಗಮ್ಮನಿಗೆ (ಜರೀನಾ) ಪತಿಯದ್ದೇ ಚಿಂತೆ. ಮತ್ತೆ ಬರುತ್ತಾನೆ, ನನ್ನನ್ನು ಸೇರುತ್ತಾನೆ ಎಂಬ ಕಾಯುತ್ತಿರುತ್ತಾಳೆ. ಇದೇ ವೇಳೆ ಕನಕರಾಜು ಸುಳಿವು ಸಿಕ್ಕಿ ರಾಜಾಸಾಬ್ ಆತನನ್ನು ಹುಡುಕುತ್ತಾ ನರಸಾಪುರ ಕಾಡಿನ ಮಧ್ಯೆ ಇರುವ ಹಳೆ ಕಾಲದ ಬಂಗಲೆ ಸೇರುತ್ತಾನೆ. ಅಜ್ಜ ಸತ್ತು ಹೋಗಿದ್ದು, ಆತ ಅತಿಮಾನುಷ ಶಕ್ತಿಯಾಗಿ ತನ್ನ ಹಾಗೂ ಅಜ್ಜಿಯನ್ನು ಕಾಡುತ್ತಿದ್ದಾನೆ ಎಂಬುದು ರಾಜಾಸಾಬ್‌ಗೆ ಗೊತ್ತಾಗುತ್ತದೆ. ಮುಂದೆ ಶಕ್ತಿ ಹಾಗೂ ಅತಿಮಾನುಷ ಶಕ್ತಿಗಳ ಮಧ್ಯೆ ನಡೆಯುವ ಸಂಘರ್ಷವೇ ‘ದ ರಾಜಾಸಾಬ್’ ಚಿತ್ರದ ಮುಖ್ಯಘಟ್ಟ.
ನಿರ್ದೇಶಕ ಮಾರುತಿ ಹಾರರ್, ಫ್ಯಾಂಟಸಿ ಜಾನರ್ ಮೂಲಕ ಮೂರು ತಾಸಿನ ದೀರ್ಘ ಕಥೆ ಹೇಳಿದ್ದು, ನಿರೂಪಣೆಯಲ್ಲಿ ಜಾರಿದ್ದಾರೆ. ಇಡೀ ಕಥೆಯಲ್ಲಿ ಹಿಡಿದಿಟ್ಟುಕೊಳ್ಳುವಂತಹ ಅಂಶಗಳು ತೀರಾ ಕಡಿಮೆ. ಇನ್ನು ನಾಯಕನಿಗೆ ಮೂವರು ನಾಯಕಿಯರಿದ್ದು, ಅವರ ಜತೆ ರೊಮ್ಯಾಂಟಿಕ್ ದೃಶ್ಯ, ಹಾಡು, ಹರಟೆಯಲ್ಲಿಯೇ ಅರ್ಧ ಕಥೆ ಸಾಗುತ್ತದೆ. ಮೂಲಕಥೆಗೆ ಮರಳಲು ದೀರ್ಘ ಸಮಯ ತೆಗೆದುಕೊಂಡಿದ್ದಾರೆ. ಕಥೆ ಸಾಗಿದಂತೆ ದುಷ್ಟ-ದೈವಶಕ್ತಿ, ಹಿಪ್ನೋಟಿಸಂ, ಮಾಯೆ, ಭ್ರಮೆಗಳ ಮೂಲಕ ಟ್ವಿಸ್ಟ್ ನೀಡಲು ಹೋದರೂ, ಪ್ರೇಕ್ಷಕರಿಗೆ ಹಾರರ್ ಅಂಶವಾಗಲಿ, ಫ್ಯಾಂಟಸಿ ಲೋಕವಾಗಲಿ ಅನುಭವಕ್ಕೆ ದಕ್ಕುವುದಿಲ್ಲ. ಬರೀ ತಾಳ್ಮೆಯನ್ನು ಪರೀಕ್ಷಿಸುತ್ತದೆ. ದೆವ್ವದ ವಿರುದ್ಧ ಹೋರಾಟಕ್ಕಿಂತ ಹರಟೆಯೇ ಹೆಚ್ಚು. ಹಾಗಾಗಿ, ಮಾರುತಿ ಬರವಣಿಗೆಯತ್ತ ಇನ್ನಷ್ಟು ಗಮನಹರಿಸಬೇಕಿತ್ತು ಅನಿಸುತ್ತದೆ. ಪ್ರಭಾಸ್ ಮೊದಲ ಬಾರಿಗೆ ಹಾರರ್, ಫ್ಯಾಂಟಸಿ ಚಿತ್ರದಲ್ಲಿ ಅಭಿನಯಿಸಿದ್ದು, ಸ್ಟೈಲಿಶ್‌ಆಗಿ ಮಿಂಚಿದ್ದಾರೆ. ನಾಯಕಿಯರಾದ ಮಾಳವಿಕಾ, ನಿಧಿ, ರಿದ್ದಿ ಗ್ಲಾಮರ್ ಗೊಂಬೆಗಳಾಗಿ ಕಂಗೊಳಿಸಿದ್ದಾರೆ. ಮಾಳವಿಕಾ ಪಾತ್ರ ಹೊರತುಪಡಿಸಿ ಉಳಿದ ಇಬ್ಬರು ನಾಯಕಿಯರ ಪಾತ್ರ ಕಥೆಗೆ ಪೂರಕವಾಗಿಲ್ಲ. ಥಮನ್ ಸಂಗೀತದ ‘ರೆಬೆಲ್ ಸಾಬ್’ ಹಾಡು ಅಭಿಮಾನಿಗಳನ್ನು ಕುಣಿಸುತ್ತದೆ. ಭವ್ಯ ಬಂಗಲೆಯ ಸೆಟ್ ಹಾಗೂ ಕಲಾಕೃತಿಗಳು ಗಮನಸೆಳೆಯುತ್ತವೆ.