ಸೌತ್ ಸಿನಿಮಾಗಳು 
ಟಾಲಿವುಡ್

ಟಾಲಿವುಡ್​ ಮುಂಚೂಣಿ... ಏನಿದು ಸೌತ್​ ಚಿತ್ರರಂಗಗಳ ಲೆಕ್ಕಾಚಾರ? ಈ ದಿಕ್ಕಿನಲ್ಲಿ ಸಾಗಿದರೆ ಥಿಯೇಟರ್​ಗಳು ಹೌಸ್​ಫುಲ್? South Cinema

ಪ್ರಮುಖ ಮುಖ್ಯಾಂಶಗಳು

  • ಸೌತ್ ಸಿನಿಮಾಗಳಿಂದ ಏನಿದು ಹೊಸ ಟ್ರೆಂಡ್​?
  • ಈ ವಿಷಯದಲ್ಲಿ ಟಾಲಿವುಡ್​ ಮುಂಚೂಣಿ
  • ಸೋಷಿಯೋ-ಫ್ಯಾಂಟಸಿ ಕಥೆಗಳ ಮೇಲೆ ಹೆಚ್ಚು ಗಮನ
ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮ ಹಾಗೂ ಹಾಲಿವುಡ್​ನ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಬೆಳ್ಳಿಪರದೆಯಲ್ಲಿ ರಾರಾಜಿಸುತ್ತವೆ (South Cinema). ಇವುಗಳಲ್ಲಿ ಬೆರಳಣಿಕೆಯಷ್ಟು ಯಶಸ್ವಿಯಾದರೆ, ಇನ್ನುಳಿದ ಸಿನಿಮಾಗಳು ಫ್ಲಾಪ್​ ಸಾಲಿಗೆ ಸೇರುವ ಮೂಲಕ ನಿರ್ಮಾಕರಿಗೆ ಭಾರೀ ನಷ್ಟವನ್ನು ಉಂಟುಮಾಡುತ್ತವೆ. ಈ ಮಧ್ಯೆ, ಚಿತ್ರಮಂದಿರಗಳಲ್ಲಿ ಸಾಕಷ್ಟು ಚಿತ್ರಗಳು ರಿಲೀಸ್ ಆಗಿದ್ದರೂ, ಅದನ್ನು ನೋಡಲು ಪ್ರೇಕ್ಷಕರಿಲ್ಲದೆ ಥಿಯೇಟರ್​ಗಳು ಬಿಕೋ ಎನ್ನುತ್ತಿವೆ. ಸದ್ಯ ಇದು ಎಲ್ಲ ಚಿತ್ರರಂಗದವರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಏನಿದು ಲೆಕ್ಕಾಚಾರ?

ಲವ್​ಸ್ಟೋರಿ, ಕ್ರೈಂ, ಆ್ಯಕ್ಷನ್​, ಬಯೋಪಿಕ್​, ನೈಜಘಟನೆ ಆಧರಿತ ಸೇರಿ ವಿವಿಧ ಜಾನರ್​ನ ಸಿನಿಮಾಗಳು ಅಪಾರ ಭರವಸೆಯೊಂದಿಗೆ ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿವೆ. ಆದರೆ, ಪೈರಸಿ ಕಾಟದಿಂದ ಹಾಗೂ ಪ್ರೇಕ್ಷಕರು ಥಿಯೇಟರ್​ಗೆ ಬಾರದ ಹಿನ್ನೆಲೆ ಒಳ್ಳೊಳ್ಳೆ ಚಿತ್ರಗಳೂ ಕೂಡ ಸೋಲಿಗೆ ಶರಣಾಗುತ್ತಿವೆ. ಇದು ಕಲಾವಿದರಿಗೆ ಮತ್ತು ಆ ಇಡೀ ಚಿತ್ರತಂಡಕ್ಕೆ ನಷ್ಟ ಹಾಗೂ ಅನ್ಯಾಯ ಆಗುತ್ತಿದೆ. ಈ ನಿಟ್ಟಿನಲ್ಲಿ, ಆಯಾ ಚಿತ್ರರಂಗಗಳು ಹೊಸ ಹೊಸ ಮತ್ತು ವಿಭಿನ್ನ ಪ್ರಯತ್ನದಲ್ಲಿ ದಾಪುಗಾಲಿಟ್ಟಿವೆ.

ಇದೊಂದು ಹೊಸ ಟ್ರೆಂಡ್​...

ಈಗ ಹೊಸ ಟ್ರೆಂಡ್​ವೊಂದು ವೇಗ ಪಡೆಯುತ್ತಿದೆ. ಇದು ಸೋಷಿಯೋ-ಫ್ಯಾಂಟಸಿಗೆ ಪೌರಾಣಿಕ ಸ್ಪರ್ಶ ನೀಡುವ ಮೂಲಕ ಹೊಸ ಕಥೆಗಳನ್ನು ಕ್ರಿಯೆಟ್​ ಮಾಡಲಾಗುತ್ತಿದೆ. ಇದು ಪೌರಾಣಿಕ, ಮಹಾಕಾವ್ಯ ಮತ್ತು ಜಾನಪದ ಕಥೆಗಳಿಗೆ ಸೈನ್ಸ್​-ಫಿಕ್ಷನ್​ ಫೀಲ್​ ಕೊಡುವ ಮೂಲ ಪ್ರಯತ್ನವಾಗಿದೆ. ಇದರೊಟ್ಟಿಗೆ ಆ್ಯಕ್ಷನ್-ಥ್ರಿಲ್ ಅಂಶಗಳನ್ನು ಸೇರಿಸಲಾಗುತ್ತಿದೆ. ಈ ರೀತಿಯ ಚಲನಚಿತ್ರಗಳು ತೆಲುಗಿನಲ್ಲಿ ನಿಧಾನವಾಗಿ ಮುನ್ನೆಲೆಗೆ ಬರುತ್ತಿವೆ. 'ಕಾರ್ತಿಕೇಯ', 'ಹನುಮಾನ್', 'ಮಿರೈ', 'ಕಲ್ಕಿ 2898 AD' ಚಿತ್ರಗಳಿಂದ ಟಾಲಿವುಡ್​ ಒಂದು ಹೆಜ್ಜೆ ಮುಂದಿದೆ.

ಇಂತಹ ಕಥೆಗಳೇ ಆಯ್ಕೆ

ಈ ಸೋಷಿಯೋ-ಫ್ಯಾಂಟಸಿ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿರುವುದರಿಂದ ಬಹಳ ವೇಗವಾಗಿ ಯಶಸ್ಸಿನ ಹಾದಿ ಹಿಡಿಯುತ್ತಿವೆ. ಕೇವಲ ಲಾಭದ ವಿಚಾರದಲ್ಲಿ ಮಾತ್ರವಲ್ಲದೇ, ಯುವ ನಾಯಕರಿಗೆ ಹೊಸ ಅವಕಾಶಗಳನ್ನು ಹಾಗೂ ಸ್ಟಾರ್​ಡಮ್​ ನೀಡುತ್ತಿವೆ. ಹೊಸಬರಿಂದ ಹಿಡಿದು ಸ್ಟಾರ್ ಹೀರೋಗಳವರೆಗೆ ಅನೇಕರು ಇಂತಹ ಕಥೆಗಳನ್ನೇ ಆಯ್ಕೆ ಮಾಡುತ್ತಿರುವುದು ಗಮನಾರ್ಹ.

ಟಾಲಿವುಡ್​ನ ಮುಂಬರುವ ಚಿತ್ರಗಳು

ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ 'ವಿಶ್ವಂಭರ', ರಾಜಮೌಳಿ ನಿರ್ದೇಶನದ 'ವಾರಣಾಸಿ', ಪ್ರಶಾಂತ್ ವರ್ಮಾ-ರಿಷಭ್ ಶೆಟ್ಟಿ ಅಭಿನಯಿಸುತ್ತಿರುವ 'ಜೈ ಹನುಮಾನ್' ಮತ್ತು ನಾಗ್ ಅಶ್ವಿನ್-ಪ್ರಭಾಸ್ ಕಾಂಬೋದಲ್ಲಿ ಮೂಡಿಬರುತ್ತಿರುವ 'ಕಲ್ಕಿ 2' ಚಿತ್ರಗಳು ಸೈ-ಫೈ ಹಾಗೂ ಸೋಷಿಯೋ-ಫ್ಯಾಂಟಸಿ ಆಧರಿತ ಚಿತ್ರಗಳಾಗಿವೆ. ಟಾಲಿವುಡ್ ಹಿಂದೆಯೇ ಓಡುತ್ತಿರುವ ಕಾಲಿವುಡ್ ಕೂಡ ಈ ರೀತಿಯ ಸೋಷಿಯೋ-ಫ್ಯಾಂಟಸಿ ಚಿತ್ರಗಳತ್ತ ಹೆಚ್ಚು ಗಮನ ಹರಿಸುತ್ತಿದೆ.

ಕಾಲಿವುಡ್​ ಕೂಡ

ನಯನತಾರಾ ಅವರ 'ಮೂಕುತಿ ಅಮ್ಮನ್ 2', ಸೂರ್ಯ ಅವರ ಮುಂಬರುವ 'ಕರುಪ್ಪು' ಮತ್ತು ಶಿವಕಾರ್ತಿಕೇಯನ್ ಅವರ ಇತ್ತೀಚೆಗೆ ಘೋಷಣೆಯಾದ 'ಸೇಯಾನ್' ಕೂಡ ಈ ಸಾಲಿನಲ್ಲಿವೆ. ಸೋಷಿಯೋ-ಫ್ಯಾಂಟಸಿ ಚಿತ್ರಗಳು ದೊಡ್ಡ ಮಟ್ಟದ ಗ್ರಾಫಿಕ್ಸ್ ಮತ್ತು ವಿಎಫ್‌ಎಕ್ಸ್‌ಗಳ ಕೆಲಸಗಳಿಂದ ಕೂಡಿರಲಿವೆ. ಇಂತಹ ಸಿನಿಮಾಗಳು ಹೆಚ್ಚಿನ ಡಿಜಿಟಲ್​ ಬಳಕೆ ಹಾಗೂ ಬಜೆಟ್​ ಕೇಳುತ್ತದೆ. ಈ ಪ್ರಯತ್ನಗಳಿಗೆ ಕೈಹಾಕುವ ಮೂಲಕ ಪ್ರೇಕ್ಷಕರಿಗೆ ಚಿತ್ರ ನೋಡುವ ಹೊಸ ಆಯಾಮ, ಹೊಸ ಅನುಭವವನ್ನು ನೀಡಲು ಆಯಾ ಚಿತ್ರರಂಗದ ನಿರ್ದೇಶಕರು ಆಸಕ್ತಿ ತೋರುತ್ತಿದ್ದಾರೆ,(ಏಜೆನ್ಸೀಸ್).