Samantha outfit price : ನಟಿ ಸಮಂತಾ ರುತ್ ಪ್ರಭು ಅವರ ಹೊಸ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಕೆಂಪು ಬಣ್ಣದ ಸುಂದರ ಉಡುಪಿನಲ್ಲಿ ಬೇಬಿ ಬಂಪ್ ಫ್ಲಾಂಟ್ ಮಾಡುತ್ತಾ, ಮುಖದಲ್ಲಿ ತಾಯ್ತನದ ಕಳೆ ಹೊತ್ತಿರುವ ಸಮಂತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪತಿ ಹಾಗೂ ನಿರ್ದೇಶಕ ರಾಜ್ ನಿಡಿಮೋರು ಮತ್ತು ಕುಟುಂಬದ ಸದಸ್ಯರೊಂದಿಗೆ ಮನೆಯಲ್ಲಿ ನಡೆದ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.
ಈ ಕಾರ್ಯಕ್ರಮಕ್ಕೆ ಸಮಂತಾ ಸಾಂಪ್ರದಾಯಿಕ ಹಾಗೂ ಸರಳ ಲುಕ್ಗೆ ಆದ್ಯತೆ ನೀಡಿದ್ದರು. ಕೆಂಪು ಬಣ್ಣದ ಕುರ್ತಾ ಸೆಟ್ ಧರಿಸಿದ್ದ ಅವರು, ತಮ್ಮ ಬೇಬಿ ಬಂಪ್ ಅನ್ನು ಮುದ್ದಾಗಿ ಹಿಡಿದುಕೊಂಡು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಕುಟುಂಬದ ಮಹಿಳೆಯರು ಸಮಂತಾ ಅವರನ್ನು ಸುತ್ತುವರಿದು ಆಶೀರ್ವದಿಸುತ್ತಿರುವ ಚಿತ್ರವೂ ವಿಶೇಷ ಗಮನ ಸೆಳೆದಿದೆ.
ಸಮಂತಾ ಧರಿಸಿದ್ದ ಕೆಂಪು ಕುರ್ತಾ ಸೆಟ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ವರದಿಯ ಪ್ರಕಾರ, ಈ ಉಡುಪು Ogaan ಬ್ರ್ಯಾಂಡ್ನದ್ದಾಗಿದ್ದು, ಇದರ ಬೆಲೆ ಬರೋಬ್ಬರಿ 48,562. ಕಾಟನ್ ಸಿಲ್ಕ್ ಬಟ್ಟೆಯಲ್ಲಿ ಸಿದ್ಧವಾಗಿರುವ ಕುರ್ತಾದ ಕೆಳಭಾಗದಲ್ಲಿ ಬ್ರೊಕೇಡ್ ಟಿಶ್ಯೂ ವಿನ್ಯಾಸವಿದೆ. ಇದಕ್ಕೆ ಹೊಂದುವ ಸ್ಟ್ರೈಪ್ಡ್ ಕಾಟನ್ ಸಿಲ್ಕ್ ಜರಿ ಪ್ಯಾಂಟ್ ಹಾಗೂ ಹೂವಿನ ವಿನ್ಯಾಸದ ದುಪಟ್ಟಾ ಧರಿಸಿದ್ದರು. ಸೈಡ್ ಪಾರ್ಟಿಂಗ್ ಮಾಡಿಕೊಂಡು ಬ್ಲೋ ಡ್ರೈ ಮಾಡಿದ ಹೇರ್ ಸ್ಟೈಲ್, ದೊಡ್ಡ ಜುಮ್ಕಾ ಹಾಗೂ ಕೆಂಪು ಬಿಂದಿಯೊಂದಿಗೆ ಸಮಂತಾ ಅವರ ಲುಕ್ ಮತ್ತಷ್ಟು ಆಕರ್ಷಕವಾಗಿತ್ತು. ದುಬಾರಿ ಉಡುಪಿನಲ್ಲಿದ್ದರೂ ಅವರ ಸಾಂಪ್ರದಾಯಿಕ ಸರಳತೆ ಫೋಟೋಗಳಲ್ಲಿ ಎದ್ದು ಕಾಣುತ್ತಿತ್ತು.
ಫೋಟೋಗಳನ್ನು ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಸಮಂತಾ ತಾಯಿಯಾಗುತ್ತಿರುವುದನ್ನು ನೋಡುವುದು ತಮ್ಮ ಬಹುದಿನದ ಕನಸು ನನಸಾಗುತ್ತಿರುವಂತೆ ಭಾಸವಾಗುತ್ತಿದೆ ಎಂದು ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಾಯಿ ಹಾಗೂ ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಸುಖಕರ ಹೆರಿಗೆ ಆಗಲಿ ಎಂದು ಹಾರೈಸಿದ್ದಾರೆ.
ತಾಯ್ತನದ ಸಂಭ್ರಮದ ನಡುವೆಯೂ ಸಮಂತಾ ತಮ್ಮ ಫಿಟ್ನೆಸ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ಜಿಮ್ನಲ್ಲಿ ಸ್ಕ್ವಾಟ್ಸ್, ಡಂಬೆಲ್ ವ್ಯಾಯಾಮ ಹಾಗೂ ಸ್ಟ್ರೆಂಥ್ ಟ್ರೈನಿಂಗ್ ಮಾಡುತ್ತಿರುವ ವಿಡಿಯೋಗಳನ್ನು ಅವರು ಈ ಹಿಂದೆ ಹಂಚಿಕೊಂಡಿದ್ದರು. ಗರ್ಭಾವಸ್ಥೆಯ ಆರಂಭದಲ್ಲಿ ಮಾಡಿದ್ದ ವ್ಯಾಯಾಮ ಹಾಗೂ ಈಗಿನ ಅಭ್ಯಾಸಗಳನ್ನು ಹೋಲಿಸುವ ವಿಡಿಯೋ ಕೂಡ ಗಮನ ಸೆಳೆದಿತ್ತು.
ಇದನ್ನೂ ಓದಿ : ತಾಯ್ತನದ ಸಂಭ್ರಮದಲ್ಲಿ ನಟಿ ಸಮಂತಾ: ಪತಿ ರಾಜ್ ನಿಡಿಮೋರು ಜತೆ ವಿಶೇಷ ಪೂಜೆ | Samantha Ruth Prabhu
ವ್ಯಾಯಾಮದ ಬಗ್ಗೆ ಮಾತನಾಡಿರುವ ಸಮಂತಾ, ಈಗ ತರಬೇತಿಯ ಉದ್ದೇಶ ಹೆಚ್ಚು ಒತ್ತಡ ಹಾಕುವುದಲ್ಲ, ದೇಹದ ಮಾತನ್ನು ಆಲಿಸುವುದಾಗಿದೆ ಎಂಬ ಸಂದೇಶ ನೀಡಿದ್ದಾರೆ. ಕೆಲ ದಿನ ದೇಹ ಹೆಚ್ಚು ಶಕ್ತಿಯುತವಾಗಿದ್ದರೆ, ಇನ್ನು ಕೆಲ ದಿನ ವ್ಯಾಯಾಮದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ವರ್ಕೌಟ್ಗಿಂತ ನೆಲದ ಮೇಲೆ ವಿಶ್ರಾಂತಿ ಪಡೆಯುವುದೇ ಮುಖ್ಯವಾಗುತ್ತದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ವೈದ್ಯರ ಸಲಹೆ ಪಡೆದೇ ವ್ಯಾಯಾಮ ಮಾಡುತ್ತಿರುವುದಾಗಿ ತಿಳಿಸಿರುವ ಸಮಂತಾ, ತಮ್ಮ ಅಭ್ಯಾಸಗಳನ್ನು ಇತರ ಗರ್ಭಿಣಿಯರು ಅನುಸರಿಸಬಾರದು, ಪ್ರತಿಯೊಬ್ಬರೂ ವೈದ್ಯರ ಮಾರ್ಗದರ್ಶನ ಪಡೆಯಬೇಕು ಎಂದು ಎಚ್ಚರಿಸಿದ್ದಾರೆ. ತಾಯ್ತನದ ಸಂಭ್ರಮ, ಕುಟುಂಬದ ಆಶೀರ್ವಾದ ಹಾಗೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಈ ಮೂರನ್ನೂ ಸಮಂತಾ ಅವರ ಇತ್ತೀಚಿನ ಫೋಟೋಗಳು ಮತ್ತು ಪೋಸ್ಟ್ಗಳು ಪ್ರತಿಬಿಂಬಿಸುತ್ತಿವೆ.