ನಟ ಅಲ್ಲು ಸಿರೀಶ್, ರಿತಿಕಾ ಸಾಜ್ದೇಹ್ ಹಾಗೂ ಕ್ರಿಕೆಟಿಗ ರೋಹಿತ್ ಶರ್ಮ
- ರೋಹಿತ್ ತಮ್ಮ ಪತ್ನಿ ರಿತಿಕಾ ಸಾಜ್ದೇಹ್ ಜತೆ ಕಾಣಿಸಿಕೊಂಡ ನಟ ಅಲ್ಲು ಸಿರೀಶ್
- ರೋಹಿತ್, ಪತ್ನಿ ರಿತಿಕಾ ಮತ್ತು ಅಲ್ಲು ಸಿರೀಶ್ ಒಂದೇ ಟೇಬಲ್ ಮೇಲೆ ಊಟ ಮಾಡುವ ವಿಡಿಯೋ ವೈರಲ್
- ಶೀಘ್ರದಲ್ಲೇ ಮದುವೆಯಯಾಗಲಿರುವ ಕಾರಣ ಭೇಟಿ ಎಂದ ಅಲ್ಲು ಸಿರೀಶ್ ಅಭಿಮಾನಿಗಳು
Rohit Sharma : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಹಿಟ್ಮ್ಯಾನ್ ಎಂದೇ ಕರೆಯಲ್ಪಡುವ ರೋಹಿತ್ ಜಗದ್ವಿಖ್ಯಾತಿ ಅನ್ನೋದು ಎಲ್ಲರಿಗೂ ತಿಳಿದಿದೆ. ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಸ್ವರೂಪಗಳಿಗೆ ನಿವೃತ್ತಿ ಘೋಷಣೆ ಮಾಡಿರುವ ರೋಹಿತ್, ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ವಿರುದ್ಧ ಅಬ್ಬರಿಸಿದ ರೋಹಿತ್, ಟೀಂ ಇಂಡಿಯಾ ಸರಣಿ ಗೆಲ್ಲುವಲ್ಲಿ ತಮ್ಮದೇಯಾದ ಪಾತ್ರ ವಹಿಸಿದರು. ಇದೀಗ ಬಿಡುವಿನಲ್ಲಿರುವ ರೋಹಿತ್ ತಮ್ಮ ಪತ್ನಿ ರಿತಿಕಾ ಸಾಜ್ದೇಹ್ ಜತೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಜತೆ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಅಲ್ಲು ಸಿರೀಶ್ ಅವರು ಟೀಮ್ ಇಂಡಿಯಾದ ಸ್ಟಾರ್ ಓಪನರ್ ಮತ್ತು ಮಾಜಿ ನಾಯಕ ರೋಹಿತ್ ಶರ್ಮ ಅವರ ಕುಟುಂಬದೊಂದಿಗೆ ಕೊಂಚ ಸಮಯ ಕಳೆದಿದ್ದಾರೆ. ರೋಹಿತ್, ಅವರ ಪತ್ನಿ ರಿತಿಕಾ ಮತ್ತು ಅಲ್ಲು ಸಿರೀಶ್ ಒಂದೇ ಟೇಬಲ್ ಮೇಲೆ ಊಟ ಮಾಡುವ ದೃಶ್ಯ ವೈರಲ್ ವಿಡಿಯೋದಲ್ಲಿದೆ. ಈ ಸಂದರ್ಭದಲ್ಲಿ ಮೂವರ ನಡುವೆ ಆಸಕ್ತಿದಾಯಕ ಸಂಭಾಷಣೆ ನಡೆದಿದೆ. ಅಷ್ಟಕ್ಕೂ ಈ ಮೂವರು ಭೇಟಿಯಾಗಿದ್ದೇಕೆ ಅಂದರೆ, ಆಕ್ಸಿಸ್ ಮ್ಯಾಕ್ಸ್ ಲೈಫ್ ಜಾಹೀರಾತು ಚಿತ್ರೀಕರಣದ ಭಾಗವಾಗಿ ಮೂವರು ಭೇಟಿಯಾದರು. ಈ ಸಂದರ್ಭದಲ್ಲಿ ಆಕ್ಸಿಸ್ ಬ್ಯಾಂಕಿನ ಜೀವ ವಿಮಾ ಯೋಜನೆಯನ್ನು ಪ್ರಚಾರ ಮಾಡಲಾಯಿತು.
ಈ ಪ್ರಚಾರದ ವಿಡಿಯೋದಲ್ಲಿ, ಅಲ್ಲು ಸಿರೀಶ್ ಅವರು ತಮ್ಮ ಶೂಟಿಂಗ್ ಬಗ್ಗೆ ಮಾತನಾಡಿದ್ದಾರೆ. ನಮ್ಮ ಶೂಟಿಂಗ್ ವೇಳೆ ಆ್ಯಕ್ಷನ್ ಹೇಳಿದಾಗ ಒಂದು ಬಿಲ್ಡಿಂಗ್ ಮೇಲಿಂದ ಜಂಪ್ ಮಾಡಬೇಕು ಎನ್ನುತ್ತಾರೆ. ಈ ವೇಳೆ ಮಧ್ಯಪ್ರವೇಶ ಮಾಡುವ ರೋಹಿತ್, ಸಿನಿಮಾದವರಿಗೆ ರಕ್ಷಣೆ ಇರುತ್ತದೆ ಎನ್ನುತ್ತಾರೆ. ಬಳಿಕ ಅಲ್ಲು ಸಿರೀಶ್ ಇದು ಕ್ರಿಕೆಟ್ ಅಲ್ಲ ಸಿನಿಮಾ ಎಂದು ವ್ಯಂಗ್ಯವಾಗಿ ನಗಾಡುತ್ತಾರೆ. ಈ ವೇಳೆ ಉತ್ತರಿಸುವ ರೋಹಿತ್, ನಮ್ಮಲ್ಲಿ ಬೌನ್ಸರ್ ಹಾಕಿದರೆ ನಮ್ಮ ಬದುಕಿನ ಆಟವೇ ಮುಗಿದುಬಿಡುತ್ತದೆ ಎನ್ನುತ್ತಾರೆ. ಈ ವೇಳೆ ರಿತಿಕಾ ಅವರು ರೋಹಿತ್ ಕಡೆ ಕೋಪದಿಂದ ನೋಡುತ್ತಾರೆ. ಅದನ್ನು ನೋಡುವ ಸಿರೀಶ್ ಅವರು ಬಾಸ್ ನಿಮ್ಮ ಕತೆ ಮುಗಿಯಿತು ಎನ್ನುತ್ತಾರೆ. ಈ ವೇಳೆ ರೋಹಿತ್ ಯೋಚನೆ ಮಾಡಬೇಡಿ ನನ್ನ ಬಳಿ ಫುಲ್ ಶಾಟ್ ಇದೆ ಎನ್ನುತ್ತಾರೆ. ಅಲ್ಲಿಗೆ ಸಂಭಾಷಣೆ ಮುಗಿಯುತ್ತದೆ.
ಈ ವಿಡಿಯೋವನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರೋಹಿತ್ ಶರ್ಮ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ ಎನ್ನುತ್ತಿದ್ದಾರೆ. ಕೆಲವರು ಅಲ್ಲು ಸಿರೀಶ್ ಅವರು ಶೀಘ್ರದಲ್ಲೇ ಮದುವೆಯಯಾಗಲಿರುವ ಕಾರಣ ರೋಹಿತ್ ಶರ್ಮ ಅವರ ಕುಟುಂಬವನ್ನು ಭೇಟಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅಂದಹಾಗೆ, ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಸಿರೀಶ್ ಅವರು ತನ್ನ ಗೆಳತಿ ನಯನಿಕಾ ಅವರನ್ನು ಮದುವೆಯಾಗಲಿದ್ದಾರೆ. ಕಳೆದ ಅಕ್ಟೋಬರ್ 31 ರಂದು ನಿಶ್ಚಿತಾರ್ಥ ನಡೆಯಿತು. ಫೆಬ್ರವರಿ ಆರಂಭದಲ್ಲಿ ಇಬ್ಬರೂ ವಿವಾಹವಾಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ, (ಏಜೆನ್ಸೀಸ್).