ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಲವ್ಡ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ(Rashmika-Vijay) ಅವರ ವಿವಾಹದ ನಂತರದ ಭವ್ಯ ಆರತಕ್ಷತೆ (Grand Reception) ಹೈದರಾಬಾದ್ನ ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಕೊಡಗಿನ ಕುವರಿ ಮತ್ತು ಟಾಲಿವುಡ್‌ನ 'ರೌಡಿ ಸ್ಟಾರ್' ಅವರ ಈ ಸಮಾರಂಭವು ತಾರಾ ಮೆರುಗಿನಿಂದ ಕೂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಸಂಚಲನ ಮೂಡಿಸಿವೆ.
ಮೈಸೂರು ಸಿಲ್ಕ್ ಸೀರೆಯಲ್ಲಿ 'ನ್ಯಾಷನಲ್ ಕ್ರಷ್'
ಆರತಕ್ಷತೆಯ ಪ್ರಮುಖ ಆಕರ್ಷಣೆಯಾಗಿದ್ದುದು ರಶ್ಮಿಕಾ ಮಂದಣ್ಣ ಅವರ ಉಡುಗೆ. ಗ್ಲಾಮರ್ ಲೋಕದ ಮಿಂಚಿನ ನಡುವೆಯೂ ತಮ್ಮ ಸಂಸ್ಕೃತಿಯನ್ನು ಮರೆಯದ ರಶ್ಮಿಕಾ, ಸಾಂಪ್ರದಾಯಿಕ ಮೈಸೂರು ಸಿಲ್ಕ್ (Mysore Silk) ಸೀರೆಯಲ್ಲಿ ಶ್ರೀವಲ್ಲಿಯಂತೆ ಕಂಗೊಳಿಸಿದರು. ಚಿನ್ನದ ಬಣ್ಣದ ಜರಿ ಹೊಂದಿದ್ದ ಕೆಂಪು ಮತ್ತು ಹಸಿರು ಮಿಶ್ರಿತ ಈ ಸೀರೆ ರಶ್ಮಿಕಾ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ದೇವಸ್ಥಾನದ ಶೈಲಿಯ ಆಭರಣಗಳು (Temple Jewellery) ಈ ವೈಭವಕ್ಕೆ ಪೂರಕವಾಗಿದ್ದವು.
ರಶ್ಮಿಕಾ ಅವರಿಗೆ ಸಾಟಿಯಾಗಿ ವಿಜಯ್ ದೇವರಕೊಂಡ ಅವರು ಕಡು ನೀಲಿ ಬಣ್ಣದ ವೆಲ್ವೆಟ್ ಶೇರ್ವಾನಿಯಲ್ಲಿ ಅತ್ಯಂತ ಸ್ಮಾರ್ಟ್ ಆಗಿ ಕಾಣಿಸಿಕೊಂಡರು. ವೇದಿಕೆಯ ಮೇಲೆ ಈ ಜೋಡಿ ಪರಸ್ಪರ ಕೈ ಹಿಡಿದು ನಿಂತಿದ್ದ ರೀತಿ ನೋಡುಗರ ಕಣ್ಣು ಕುಕ್ಕುವಂತಿತ್ತು. 'ಗೀತ ಗೋವಿಂದಂ' ಸಿನಿಮಾದ ಈ ಜೋಡಿ ನಿಜ ಜೀವನದಲ್ಲೂ ಒಂದಾಗಿರುವುದನ್ನು ಕಂಡು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಭವ್ಯ ಸಮಾರಂಭಕ್ಕೆ ದಕ್ಷಿಣ ಭಾರತದ ಖ್ಯಾತ ನಟ-ನಟಿಯರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಆಗಮಿಸಿದ್ದರು. ಕೊಡವ ಸಂಸ್ಕೃತಿ ಮತ್ತು ತೆಲುಗು ಸಂಪ್ರದಾಯಗಳ ಸಮ್ಮಿಲನ ಈ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು,(ಏಜೆನ್ಸೀಸ್).