ನಟಿ ರಶ್ಮಿಕಾ ಮಂದಣ್ಣ  
ಟಾಲಿವುಡ್

ಇಷ್ಟು ದಿನ ತಾಳ್ಮೆಯಿಂದ ಇದ್ದೆ! ಆದರೆ... ವೈರಲ್​ ಆಡಿಯೋ ಬೆನ್ನಲ್ಲೇ ನಟಿ ರಶ್ಮಿಕಾ ಮಂದಣ್ಣ ಖಡಕ್ ಎಚ್ಚರಿಕೆ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ನಟ ವಿಜಯ್​ ದೇವರಕೊಂಡ ಜೊತೆ ಸಪ್ತಪದಿ ತುಳಿದ ಕೊಡಗಿನ ಬೆಡಗಿ
  • ಕಳೆದ ಕೆಲವು ದಿನಗಳಿಂದ ನಟಿಗೆ ಸಂಬಂಧಿಸಿದ ಆಡಿಯೋ ಕ್ಲಿಪ್​ ವೈರಲ್​
  • ತಪ್ಪು ಮಾಹಿತಿ ಹರಡುವವರ ವಿರುದ್ಧ ಸಿಡಿದೆದ್ದ ರಶ್ಮಿಕಾ ಮಂದಣ್ಣ
  • 24 ಗಂಟೆಯೊಳಗೆ ಡಿಲೀಟ್​ ಆಗದಿದ್ದರೆ ಕಾನೂನಡಿಯಲ್ಲಿ ಕ್ರಮ
ಬೆಂಗಳೂರು: ಇತ್ತೀಚೆಗಷ್ಟೇ, ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿದ ಕೊಡಗಿನ ಬೆಡಗಿ, ನಟಿ ರಶ್ಮಿಕಾ ಮಂದಣ್ಣ ತಮ್ಮ ಹೊಸ ಬಾಳಿನ ಖುಷಿಯಲ್ಲಿರುವಾಗಲೇ ನೆಟ್ಟಿಗರಿಂದ ಭಾರೀ ನೋವುಂಟಾಗಿದೆ. ಅದಕ್ಕೆ ಜ್ವಲಂತ ಸಾಕ್ಷಿ, ಕಳೆದ ಕೆಲವು ದಿನಗಳಿಂದ ಅವರಿಗೆ ಸಂಬಂಧಿಸಿದ ವೈರಲ್ ಆಡಿಯೋ ಕ್ಲಿಪ್​.
ಕಳೆದ ಒಂದೆರೆಡು ದಿನಗಳಿಂದ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರಿಗೆ ಸಂಬಂಧಿಸಿದ ಆಡಿಯೋ ವೈರಲ್ ಆಗಿತ್ತು. ಇದನ್ನು ಕೆಲವು ಮೀಡಿಯಾಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ. ಕೆಲವರು, ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಆಡಿಯೋ ಕ್ಲಿಪ್​ ಹಾಕುವ ಮೂಲಕ ನೆಗೆಟಿವ್ ವಿಷಯವನ್ನು ಪ್ರಸಾರ ಮಾಡುತ್ತಿರುವುದು ನಟಿ ರಶ್ಮಿಕಾ ಗಮನಕ್ಕೆ ಬಂದಿದೆ. ಈ ವಿಚಾರದಿಂದ ಸಿಡಿದೆದ್ದಿರುವ ನ್ಯಾಷನಲ್ ಕ್ರಶ್​, ಸುದೀರ್ಘ ಬರಹದ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
8 ವರ್ಷಗಳಿಂದ ತಪ್ಪು ಮಾಹಿತಿ, ಕಿರುಕುಳ ಎದುರಿಸಿದ್ದೇನೆ. ಈ ಎಲ್ಲದಕ್ಕೂ ಇಷ್ಟು ದಿನ ಮೌನದಿಂದಲೇ ಇದ್ದೇನೆ. ಯಾವುದಕ್ಕೂ ಎಲ್ಲಿಯೂ ಪ್ರತಿಕ್ರಿಯಿಸಲು ಹೋಗಿಲ್ಲ. ನಮ್ಮ ಅನುಮತಿ ಇಲ್ಲದೆ ಖಾಸಗಿ ಮಾತುಕತೆಯನ್ನು ರೆಕಾರ್ಡ್ ಮಾಡಲಾಗಿದೆ. ಸಂಭಾಷಣೆಯ ಒಂದು ಭಾಗವನ್ನು ಕಟ್ ಮಾಡಿ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿಬಿಡಲಾಗಿದೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಮತ್ತೊಮ್ಮೆ ತುಂಬ ನೋವುಂಟಾಗಿದೆ. ಇಲ್ಲಿಯವರೆಗೆ ನನ್ನ ಹೆಸರಿದ್ದಕ್ಕೆ ಸುಮ್ಮನಿದ್ದೆ. ಆದರೆ, ಮನೆಯವರನ್ನು ಎಳೆದು ತಂದಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಆಡಿಯೋ ಕ್ಲಿಪ್​ ಪೋಸ್ಟ್​ ಮಾಡಿ, ತಪ್ಪು ವಿಷಯ ಹರಡುವವರಿಗೆ ಮುಂದಿನ 24 ಗಂಟೆ ಡೆಡ್​ಲೈನ್​. ಪೋಸ್ಟ್ ಮತ್ತು ವಿಡಿಯೋಗಳನ್ನು ತಕ್ಷಣ ತೆಗೆದುಹಾಕಬೇಕು. ಇಲ್ಲವಾದರೆ, ಕಾನೂನಿನಡಿಯಲ್ಲಿ ಕ್ರಮ ಜರುಗಿಸಲಾಗುವುದು. ಇನ್ಫ್ಲುವೆನ್ಸರ್‌, ಮೀಡಿಯಾಗಳು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಈ ಕೂಡಲೇ ಡಿಲೀಟ್​ ಮಾಡಬೇಕು. ತೆಗೆಯದಿದ್ದರೆ ಕಠಿಣ ಕ್ರಮ ಎದುರಿಸಲು ರೆಡಿ ಇರಿ ಎಂದು ಖಡಕ್ ಎಚ್ಚರಿಸಿದ್ದಾರೆ.
ಕಡೆಯಲ್ಲಿ ಕನ್ನಡದಲ್ಲಿ ಬರೆದಿರುವ ರಶ್ಮಿಕಾ, ಇಲ್ಲಿ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರಿ. ಅವರೆಲ್ಲಿಗೂ ತುಂಬು ಹೃದಯದ ಧನ್ಯವಾದಗಳು. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ಸಿದೆ. ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತ್ನಾಡೋ ಜನ ಒಂದ್ ಅರ್ಥ ಮಾಡ್ಕೊಬೇಕು. ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕೆ ಆಗುತ್ತಾ? ನಮ್ ಜೀವನ ನಮ್ದಲ್ಲವಾ? ನಮ್ಮ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ ಎಂದು ಹೇಳಿದ್ದಾರೆ.