- ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಹಳದಿ ಸಂಭ್ರಮದ ಪೋಟೋ ವೈರಲ್
- ಅದು ಕೇವಲ ಹಳದಿ ಶಾಸ್ತ್ರವಾಗಿರಲಿಲ್ಲ, ಬದಲಿಗೆ 'ಹಳದಿ + ಹೋಳಿ' ಹಬ್ಬದಂತಿತ್ತು
- ಇಂದಿಗೂ ನನ್ನ ಕೂದಲಿನ ಎಳೆಗಳಲ್ಲಿ ಆ ಕೆಂಪು ಬಣ್ಣದ ತುಸು ಛಾಯೆ ಹಾಗೆಯೇ ಉಳಿದುಕೊಂಡಿದೆ
- ಅಂದು ಹಳದಿ ಶಾಸ್ತ್ರ, ಬೇರೆ ದಿನವಾದರೆ ಅಷ್ಟು ಬೇಗ ಎದ್ದೇಳುವುದು ಅಸಾಧ್ಯವಾಗುತ್ತಿರುತ್ತಿತ್ತು
Rashmika Mandanna: ಇತ್ತೀಚಿಗೆ ಮದುವೆಯಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ಕನಸಿನ ವಿವಾಹ ಆಚರಣೆಗಳನ್ನು ಅಭಿಮಾನಿಗಳಿಗೆ ತೋರಿಸುತ್ತಲೇ ಇದ್ದಾರೆ. ಈಗಾಗಲೇ ಈ ಜೋಡಿ, ತಮ್ಮ ಮದುವೆ, ಆರತಕ್ಷತೆ, ಪ್ರಧಾನ, ಮೆಹೆಂದಿ ಮತ್ತು ಸಂಗೀತ ಸಮಾರಂಭದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದು, ಇದೀಗ ತಮ್ಮ ಅರಿಶಿಣ ಶಾಸ್ತ್ರದ ಕೆಲವೊಂದು ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಆಚರಣೆಯ ಪೋಟೋಗಳನ್ನು ಹಂಚಿಕೊಂಡಿದ್ದ ರಶ್ಮಿಕಾ, ಅದು ಕೇವಲ ಹಳದಿ ಶಾಸ್ತ್ರವಾಗಿರಲಿಲ್ಲ, ಬದಲಿಗೆ 'ಹಳದಿ + ಹೋಳಿ' ಹಬ್ಬದಂತಿತ್ತು ಎಂದು ಬರೆದಿದ್ದಾರೆ.
ಆ ದಿನ ನಾವೆಲ್ಲರೂ ಬಣ್ಣದಲ್ಲಿ ಎಷ್ಟೊಂದು ಮುಳುಗಿ ಹೋಗಿದ್ದೆವು ಎಂದರೆ, ಇಂದಿಗೂ ನನ್ನ ಕೂದಲಿನ ಎಳೆಗಳಲ್ಲಿ ಆ ಕೆಂಪು ಬಣ್ಣದ ತುಸು ಛಾಯೆ ಹಾಗೆಯೇ ಉಳಿದುಕೊಂಡಿದೆ. ಅವತ್ತಿನ ಎಲ್ಲ ಆಟಗಳಲ್ಲೂ ನನ್ನ ಅದ್ಭುತ 'ಟೀಮ್ ಬ್ರೈಡ್' ಸಹಾಯದಿಂದ ನಾನೇ ಗೆದ್ದೆ ಎಂದು ಹೇಳಿದರು.
ಹಳದಿ ಸಮಾರಂಭಕ್ಕಾಗಿ ರಶ್ಮಿಕಾ ಹಸಿರು ಆಫ್-ಶೋಲ್ಡರ್ ಬಟ್ಟೆಯನ್ನು ಧರಿಸಿದ್ದು, ಅದಕ್ಕೆ ಹೊಂದಿಕೆಯಾಗುವಂತೆ ಗೋಲ್ಡನ್ ಟೆಂಪಲ್ ಆಭರಣಗಳನ್ನು ಧರಿಸಿ ಬೆರಗುಗೊಳಿಸಿದ್ದರೆ , ವಿಜಯ್ ಬಿಳಿ ಪೈಜಾಮಾದೊಂದಿಗೆ ಹೂವಿನ ಕ್ರೀಮ್ ಕುರ್ತಾದಲ್ಲಿ ಕಂಗೊಳಿಸುತ್ತಿದ್ದರು.
ನಟಿ ಪೋಸ್ಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ವಿಜಯ್ ಸಂಭ್ರಮದ ಕೆಲವೊಂದು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಾತ್ರಿ ನಡೆದ ಸಂಗೀತ ಉತ್ಸವದ ಆಯಾಸವಿದ್ದರೂ, ಮರುದಿನ ಬೆಳಗಿನ ಆಚರಣೆಯ ಉತ್ಸಾಹ ಎಲ್ಲರನ್ನೂ ಹೇಗೆ ಎಚ್ಚರವಾಗಿರಿಸಿತು ಎಂಬುದನ್ನು ತಿಳಿಸಿದ್ದಾರೆ.
ಅಂದು ಹಳದಿ ಶಾಸ್ತ್ರ. ಬೇರೆ ದಿನವಾದರೆ ಅಷ್ಟು ಬೇಗ ಎದ್ದೇಳುವುದು ಅಸಾಧ್ಯವಾಗುತ್ತಿರುತ್ತಿತ್ತು. ಆದರೆ ಅವತ್ತು ನಾವೆಲ್ಲರೂ ಪರಸ್ಪರ ಭೇಟಿಯಾಗುವ ಸಂಭ್ರಮದಲ್ಲಿದ್ದೆವು. ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವ ಆ ಉತ್ಸಾಹವೇ ನಮ್ಮನ್ನು ಬೇಗ ಎಬ್ಬಿಸಿತ್ತು. ನಮ್ಮನ್ನು ಪೂರ್ತಿ ಹುರುಪಿನಿಂದ ಇಡಲು ಅಲ್ಲಿ ನೀರು, ಬಣ್ಣ, ಸಂಗೀತದೊಂದಿಗೆ ಭರ್ಜರಿಯಾಗಿ ತಯಾರಿ ನಡೆಸಿದ್ದೆವು.
ನನಗೆ ನನ್ನ ತಾಯ್ನಾಡಿನಲ್ಲೇ ಮದುವೆಯಾಗಬೇಕೆಂಬ ಹಂಬಲವಿತ್ತು, ಜೊತೆಗೆ ಪ್ರಕೃತಿಯ ಮಡಿಲಲ್ಲಿ ಅತಿ ಹೊರಾಂಗಣದ ವಾತಾವರಣ ನನಗೆ ಇಷ್ಟ. ಅದಕ್ಕಾಗಿ ನಾನು ಉದಯಪುರವನ್ನು ಆರಿಸಿಕೊಂಡೆ. ಸುಮಾರು 200 ಎಕರೆಯ ಈ ಸುಂದರ ತಾಣ, ತನ್ನ ವಿಶಾಲವಾದ ಭೂಮಿ, ನದಿ, ಉದ್ಯಾನವನ ಮತ್ತು ಪರ್ವತಗಳೊಂದಿಗೆ ಒಂದು ಸ್ವರ್ಗದಂತೆ ಭಾಸವಾಗುತ್ತದೆ.
ಸಮಾರಂಭದ ಸಮಯದಲ್ಲಿ ಇಲ್ಲಿನ ಸಿಬ್ಬಂದಿ ಮತ್ತು ಸೇವೆ ನಾನು ಜಗತ್ತಿನಾದ್ಯಂತ ಕಂಡ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ. ಅದೇ ರೀತಿ ಪ್ರತಿ ಫೆಬ್ರವರಿ ತಿಂಗಳಲ್ಲಿ ನನ್ನ ಕುಟುಂಬವನ್ನು ರಜೆಗಾಗಿ ಇಲ್ಲಿಗೆ ತರಬೇಕೆಂದು ಅಂದುಕೊಂಡಿದ್ದೇನೆ ಎಂದರು.
ನನಗೆ ಹಳದಿ ಶಾಸ್ತ್ರದಲ್ಲಿ ಒಂದು 'ಯುದ್ಧ'ವೇ ನಡೆಯಬೇಕೆಂಬ ಆಸೆ ಇತ್ತು, ಅದಕ್ಕೆ ತಕ್ಕಂತೆ ಎಲ್ಲರೂ ಸಿದ್ಧರಾಗಿ ಬಂದಿದ್ದರು. ಮಧ್ಯಾಹ್ನದ ಊಟದ ಹೊತ್ತಿಗೆ ಎಲ್ಲರ ಬಟ್ಟೆಗಳೂ ಬಣ್ಣದಿಂದ ಕೂಡಿದ್ದವು. ನಾನು ಬಹಳ ಇಷ್ಟ ಪಟ್ಟು ಹಾಕಿಕೊಂಡಿದ್ದ ವಿನ್ಯಾಸದ ಕುರ್ತಾ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಆದರೆ. ಆ ಸಂಭ್ರಮ ಇದೆಲ್ಲದಕ್ಕೂ ಯೋಗ್ಯವಾಗಿತ್ತು ಎಂದು ಬರೆದಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಫೆಬ್ರವರಿ 26, 2026 ರಂದು ಉದಯಪುರದಲ್ಲಿ ಅವರ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು (ಏಜೆನ್ಸೀಸ್).