- ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದ ಶೂಟಿಂಗ್ ಆರಂಭ
- ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ನಟನೆ
- ಪ್ರಮುಖ ಪಾತ್ರದಲ್ಲಿ ನಟಿಸಬೇಕಿದ್ದ ಪ್ರಕಾಶ್ ರಾಜ್ ದಿಢೀರ್ ಎಕ್ಸಿಟ್?
- ಕಡೆಗೂ ವದಂತಿ ಕುರಿತು ಮೌನ ಮುರಿದ ಹಿರಿಯ ನಟ
ಬೆಂಗಳೂರು: ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ಸ್ಪಿರಿಟ್' ಚಿತ್ರದ ಮೇಲೆ ಸಿನಿಪ್ರಿಯರ ಕಣ್ಣು ಬಿದ್ದಿದ್ದು, ಸಿನಿಮಾ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿರುವ ಈ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಶುರುವಾಗಿದೆ. ಇದರ ಬೆನ್ನಲ್ಲೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಹುಭಾಷಾ ನಟ ಪ್ರಕಾಶ್ ರಾಜ್ಗೆ (Prakash Raj) ದಿಢೀರ್ ಗೇಟ್ಪಾಸ್ ಕೊಡಲಾಗಿದೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಬೇರೆ ಬೇರೆ ತಿರುವು ಪಡೆಯುತ್ತಿದ್ದ ವಿಚಾರಕ್ಕೆ ಕಡೆಗೂ ಪ್ರತಿಕ್ರಿಯಿಸುವ ಮೂಲಕ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.
ಅನಿಮಲ್ ಚಿತ್ರದಲ್ಲಿ ತಮ್ಮ ಬೋಲ್ಡ್ ದೃಶ್ಯಗಳಿಂದಲೇ ಸದ್ದು ಮಾಡಿದ ತೃಪ್ತಿ ದಿಮ್ರಿ ಮತ್ತು ಪ್ರಭಾಸ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸ್ಪಿರಿಟ್ನಿಂದ ಇದೀಗ ಪ್ರಕಾಶ್ ರಾಜ್ ಹೊರನಡೆದಿದ್ದಾರೆ ಎಂಬ ವದಂತಿಗಳು ತೀವ್ರ ಚರ್ಚೆಗೆ ಗ್ರಾಸವಾಯಿತು. ಅಂತದ್ದೇನು ಆಯಿತು? ಪ್ರಕಾಶ್ ರಾಜ್ ಚಿತ್ರತಂಡದಿಂದ ಎಕ್ಸಿಟ್ ಆಗಿದ್ದೇಕೆ? ನಿರ್ದೇಶಕ ಸಂದೀಪ್ ಮತ್ತು ರಾಜ್ ಅವರ ನಡುವೆ ಮನಸ್ತಾಪ ಏನಾದರೂ ಉಂಟಾಯಿತಾ? ಎಂಬ ಪ್ರಶ್ನೆಗಳು ಹಲವರಲ್ಲಿ ಕಾಡತೊಡಗಿತು. ಈ ರೀತಿಯ ನಕಲಿ ಸುದ್ದಿಗಳು ಭಾರೀ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪ್ರಕಾಶ್, ತಮ್ಮ ಒಂದು ಟ್ವೀಟ್ ಮೂಲಕ ಇದಕ್ಕೆಲ್ಲ ತೆರೆ ಎಳೆದಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಪ್ರಕಾಶ್ ರಾಜ್, "ಸ್ಪಿರಿಟ್ ಚಿತ್ರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಎಲ್ಲಾ ವಿಷಕಾರಿಗಳೇ, ನನ್ನ ಪಾತ್ರದ ಶೂಟಿಂಗ್ ಇನ್ನೂ ಆರಂಭವೇ ಆಗಿಲ್ಲ. ಹೀಗಿರುವಾಗ, ತಮ್ಮ ಊಹೆಗೆ ಬಂದ ಸುದ್ದಿಗಳನ್ನು ವಾಟ್ಸ್ಆ್ಯಪ್ ಫ್ಯಾಕ್ಟರಿಗಳು ಹೊರಬಿಡುತ್ತಿವೆ. ಮೊದಲು ಬೆಳೆಯಿರಿ. ಜೀವನವನ್ನು ಕಟ್ಟಿಕೊಳ್ಳಿ" ಎಂದು ನಗುವ ಎಮೋಜಿಗಳ ಮೂಲಕ ಮುಖಕ್ಕೆ ಹೊಡೆದಂತೆ ಉತ್ತರಿಸಿದ್ದಾರೆ.
ಸಂದೀಪ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ವಿವೇಕ್ ಓಬಿರಾಯ್, ಕಾಂಚಾನ, ಪ್ರಕಾಶ್ ರಾಜ್ ಸೇರಿ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿರುವ ಸ್ಪಿರಿಟ್, 2026ರಲ್ಲಿ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ಎದುರುನೋಡುತ್ತಿದೆ,(ಏಜೆನ್ಸೀಸ್).