'ವರುಡು' ಚಿತ್ರದ ನಾಯಕಿ ಬಗ್ಗೆ ನಿರ್ದೇಶಕ ಗುಣಶೇಖರ್ ಮಾತು
- 'ವರುಡು' ಚಿತ್ರದ ಸೋಲಿಗೆ ಆಕೆಯೇ ಕಾರಣ ಎಂದ ಟಾಲಿವುಡ್ ನಿರ್ದೇಶಕ
- ಚಿತ್ರದ ಹೀರೋಯಿನ್ ಪ್ರೇಕ್ಷಕರ ನಿರೀಕ್ಷೆಗಳನ್ನು ಈಡೇರಸಲಿಲ್ಲ
- ಇದು ಸಿನಿಮಾದ ಮೇಲೆ ಭಾರೀ ಪ್ರಭಾವ ಬೀರಿತು ಎಂದು ಆರೋಪ
- ಅಲ್ಲು ಅರ್ಜುನ್ ಚಿತ್ರದ ನಾಯಕಿ ಬಗ್ಗೆ ಗುಣಶೇಖರ್ ಕಿಡಿ
ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಿರ್ದೇಶಕರಾದ ಗುಣಶೇಖರ್ ತಮ್ಮದೇ ಹಳೆಯ ಸಿನಿಮಾದ ಬಗ್ಗೆ ಮಾತನಾಡಿದ್ದು, ಆ ಚಿತ್ರದ ಸೋಲಿಗೆ ನಾಯಕ ನಟಿಯೇ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದು ಟಾಲಿವುಡ್ ಮಂದಿಯ ಹುಬ್ಬೇರಿಸಿದ್ದಲ್ಲದೇ, ಕೊಂಚ ಗೊಂದಕ್ಕೆ ದೂಡಿದೆ.
ಟಾಲಿವುಡ್ ಅಂಗಳದಲ್ಲಿ 'ಒಕ್ಕಡು', 'ಚೂಡರನೈ ಎಡು' ಸೇರಿದಂತೆ ಮುಂತಾದ ಸ್ಟಾರ್ ನಟರ ಚಿತ್ರಗಳ ಮೂಲಕ ಬ್ಲಾಕ್‌ಬಸ್ಟರ್‌ಗಳನ್ನು ಕೊಟ್ಟಿರುವ ನಿರ್ದೇಶಕ ಗುಣಶೇಖರ್, ಅದಾದ ಬಳಿಕ ಕಂಡಿದ್ದು ಸಾಕಷ್ಟು ಸರಣಿ ಫ್ಲಾಪ್‌ಗಳು. ಅನುಷ್ಕಾ ಶೆಟ್ಟಿ ಅಭಿನಯದ ರುದ್ರಮದೇವಿ ಗ್ರಾಫಿಕ್ ಕೆಲಸಗಳಿಂದ ತಕ್ಕ ಮಟ್ಟಿಗೆ ಯಶಸ್ಸು ಕಂಡರೆ, ಶಕುಂತಲಂ ಒಂದು ದೊಡ್ಡ ಸೋಲಿಗೆ ಗುರಿಯಾಯಿತು. ಇದೆಲ್ಲದರಿಂದ ಕೆಲ ಸಮಯ ಮೌನಕ್ಕೆ ಜಾರಿದ್ದ ಗುಣಶೇಖರ್, ಇದೀಗ 'ಯುಫೋರಿಯಾ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ.
ನಟ ಸಾರಾ ಅರ್ಜುನ್ ಮತ್ತು ನಟಿ ಭೂಮಿಕಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಇದೇ ಫೆ.6ರಂದು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ, ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಮಧ್ಯೆ, ಚಿತ್ರದ ಪ್ರಚಾರ ಕಾರ್ಯದಲ್ಲಿ ಸಖತ್ ಬಿಜಿಯಾಗಿರುವ ನಿರ್ದೇಶಕರು, 2010ರಲ್ಲಿ ತಾವು ನಿರ್ದೇಶಿಸಿದ ಚಿತ್ರದ ಸೋಲಿನ ಬಗ್ಗೆ ಈಗ ತುಟಿ ಬಿಚ್ಚಿದ್ದಾರೆ.
"ನನ್ನ ವೃತ್ತಿಜೀವನದಲ್ಲಿ ನನಗೆ ಹೆಚ್ಚು ನಿರಾಶೆ ಮೂಡಿಸಿದ್ದು ವರುಡು ಚಿತ್ರ. ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ ಸಿನಿಮಾ ಇದು. ಕಥೆಯೂ ಚೆನ್ನಾಗಿ ಸೆಟ್ ಆಗಿತ್ತು. ವಾಸ್ತವವಾಗಿ, ಆ ಚಿತ್ರದಲ್ಲಿ ನಮಗೆ ಯಾವುದೇ ಆ್ಯಕ್ಷನ್ ಬೇಕಿರಲಿಲ್ಲ. ಬನ್ನಿ ಕೂಡ ಅದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಕೆಲವರು ಹೇಳಿದ್ದನ್ನು ಕೇಳಿದ ನಂತರ, ನಾವು ಆ್ಯಕ್ಷನ್ ದೃಶ್ಯಗಳನ್ನು ಸೇರಿಸುವಂತಾಯಿತು" ಎಂದರು.
"ಈ ಚಿತ್ರದ ಸೋಲಿಗೆ ಮುಖ್ಯ ಕಾರಣವೇ ನಾಯಕಿ. ಕಾರಣ, ಚಿತ್ರದ ರಿಲೀಸ್ಗೂ ಮುನ್ನ ಆಕೆಯನ್ನು ನಾವೆಲ್ಲಿಯೂ ತೋರಿಸಿಯೇ ಇಲ್ಲ. ನೇರವಾಗಿ ಚಿತ್ರಮಂದಿರಗಳಲ್ಲಿ ನಟಿಯನ್ನು ಪರಿಚಯಿಸಲಾಯಿತು. ಐದು ದಿನಗಳ ಕಾಲ ನಡೆಯುವ ಮದುವೆಯ ಕಥೆಯನ್ನು ಒಳಗೊಂಡ ಸಿನಿಮಾದಲ್ಲಿ ನಾಯಕ ವಿವಾಹದ ಕೊನೆ ದಿನ ಅವಳ ಮುಖವನ್ನು ನೋಡ್ತಾನೆ. ಕೆಲವರ ಮಾತಿನಿಂದ ನಾಯಕಿಯನ್ನು ರಿಲೀಸ್ನಲ್ಲಿಯೇ ರಿವೀಲ್ ಮಾಡೋದು ಉತ್ತಮ ಎಂದುಕೊಂಡೆವು. ಅಂತೆಯೇ, ಬೆಳ್ಳಿ ಪರದೆಯ ಮೇಲೆ ಆಕೆಯನ್ನು ನೋಡಿದ ಸಿನಿಪ್ರಿಯರ ನಿರೀಕ್ಷೆಗಳು ಈಡೇರಲಿಲ್ಲ" ಎಂದರು.
"ಇದು ನಮ್ಮ ಚಿತ್ರದ ಸೋಲಿಗೆ ದೊಡ್ಡ ಕಾರಣವಾಯಿತು. ಕಥೆಯಲ್ಲಿ ನಾವು ಕೂಡ ಹೆಚ್ಚಿನ ಕಾಳಜಿ ವಹಿಸಬೇಕಾಗಿತ್ತು" ಎಂದು ಗುಣಶೇಖರ್ ನೀಡಿರುವ ಹೇಳಿಕೆ ಸದ್ಯ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಅಸಲಿಗೆ, ಅಲ್ಲು ಅರ್ಜುನ್ ಮತ್ತು ಭಾನುಶ್ರೀ ಮೆಹ್ತಾ ನಟಿಸಿದ ವರುಡು ಮಾ.31 2010ರಲ್ಲಿ ತೆರೆಕಂಡ ಸಿನಿಮಾ. ಅಸಲಿಗೆ, ಭಾನುಶ್ರೀ ಅವರಿಗೆ ಇದೇ ಡೆಬ್ಯೂ ಚಿತ್ರವಾಗಿತ್ತು ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).