Nagarjuna Akkineni ಚಿತ್ರ Instagram 
ಟಾಲಿವುಡ್

ಪ್ರತಿ 15 ದಿನಕ್ಕೊಮ್ಮೆ ಫೋನ್ ಪಾಸ್‌ವರ್ಡ್ ಚೇಂಜ್​ ಮಾಡ್ತಾರೆ ನಟ ನಾಗಾರ್ಜುನ! ಕಾರಣವೇನು ಗೊತ್ತಾ? Nagarjuna Akkineni

ಹೈದರಾಬಾದ್: ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರನ್ನೂ ಕಾಡುತ್ತಿದೆ. ಆದಾಗ್ಯೂ, ತೆಲಗು ಚಿತ್ರರಂಗದ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ್ (Nagarjuna Akkineni) ಅವರು ತಮ್ಮ ಮೊಬೈಲ್​ ಫೋನ್​ ಭದ್ರತೆ ಮತ್ತು ಸೈಬರ್​ ವಂಚನೆಗಳ ಬಗ್ಗೆ ತಮಗಿರುವ ಆತಂಕವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೆ

ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ (TGCSB) ಹೈದರಾಬಾದ್‌ನಲ್ಲಿ ಆಯೋಜಿಸಿದ್ದ 'ಸುರಕ್ಷಾ ಕಾ ತಿರಂಗಾ' ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ನಾಗಾರ್ಜುನ್, ನಾನು ಫೋನ್ ಬಳಸುತ್ತೇನೆ. ಆದರೆ, ಯಾರಾದರೂ ಅದನ್ನು ಹ್ಯಾಕ್​ ಮಾಡುತ್ತಾರೋ ಅನ್ನೋ ಭಯ ಸದಾ ನನ್ನನ್ನು ಕಾಡುತ್ತದೆ ಎಂದು ಹೇಳಿದರು.
ನನ್ನ ಫೋನ್ ಸುರಕ್ಷತೆಗಾಗಿ ನಾನು ಪ್ರತಿ 15 ದಿನಕ್ಕೊಮ್ಮೆ ಮೊಬೈಲ್​ ಪಾಸ್​ವರ್ಡ್​ ಚೇಂಜ್​ ಮಾಡುತ್ತೇನೆ. ಹಾಗೆಯೇ ನೆಟ್​ವರ್ಕ್​ ಹ್ಯಾಕ್​ ಆಗುವುದನ್ನು ತಡೆಯಲು ವೈ-ಫೈ ಪಾಸ್​ವರ್ಡ್​ ಬದಲಾಯಿಸುತ್ತೇನೆ. ಸೆಲೆಬ್ರಿಟಿ ಆಗಿರುವುದರಿಂದ ನನ್ನ ಫೋನ್‌ನಲ್ಲಿ ನಾನು ಯಾವುದೇ ಫೋಟೋಗಳನ್ನು ಸಹ ಇಟ್ಟುಕೊಳ್ಳುವುದಿಲ್ಲ. ನನಗೆ ಇಷ್ಟೊಂದು ಭಯವಿರುವಾಗ ಸೈಬರ್​ ಅಪರಾಧಿಗಳು ನಿರಪರಾಧಿ ಹಿರಿಯ ನಾಗರಿಕರಿಗೆ ಏನು ಮಾಡಬಹುದೆಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನಾಗಾರ್ಜುನ ಅವರಿಗೂ ಬಂದಿತ್ತಂತೆ ಸೈಬರ್ ಕಾಲ್!

ಸುಮಾರು 4-5 ವರ್ಷಗಳ ಹಿಂದೆ ಬ್ಯಾಂಕ್ ಅಧಿಕಾರಿಯಂತೆ ನಟಿಸಿ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿದ್ದರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆತ ನನ್ನನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿದೆ. ಮತ್ತೊಮ್ಮೆ ಕಸ್ಟಮ್ಸ್ ಅಧಿಕಾರಿಯಂತೆ ಕರೆ ಮಾಡಿ, ನಿಮ್ಮ ಹೆಸರಿನಲ್ಲಿ ಇರಾನ್‌ಗೆ ಪಾರ್ಸೆಲ್ ಹೋಗಿದೆ, ಅದರಲ್ಲಿ ಮಾದಕ ವಸ್ತುಗಳಿವೆ ಎಂದು ಹೆದರಿಸಲು ಯತ್ನಿಸಿದ್ದರು. ಅದೃಷ್ಟವಶಾತ್​, ನನ್ನ ಸಂಬಂಧಿಕರು ತಕ್ಷಣವೇ ಸೈಬರ್​ ಕ್ರೈಮ್​ ವಿಭಾಗವನ್ನು ಸಂಪರ್ಕಿಸಿದ್ದರಿಂದ ನಾವು ಸಂಕಷ್ಟದಿಂದ ಪಾರಾದೆವು ಎಂದು ಹೇಳಿದ್ದಾರೆ.
ಶಿವ, ನಿನ್ನೇ ಪೆಳ್ಳಾಡುತಾ ಹಾಗೂ ಅನ್ನಮಯ್ಯ ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ನಾಗಾರ್ಜುನ, ಪ್ರತಿಯೊಬ್ಬರೂ ತಮ್ಮ ಡಿಜಿಟಲ್ ಉಪಕರಣಗಳ ಭದ್ರತೆಯ ವಿಷಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು (ಏಜೆನ್ಸೀಸ್​).